ಕನಕದಾಸರ ವೈಚಾರಿಕತೆಯಂತೆ ಮನುಕುಲ ನಡೆಯಬೇಕು :ತಿಪ್ಪಾರೆಡ್ಡಿ

ಚಿತ್ರದುರ್ಗ:

   ಸಂತ ಶ್ರೇಷ್ಠ ಕನಕದಾಸರ ವಿಚಾರಗಳನ್ನು ಮನುಕುಲ ಅರಿತು, ಅದನ್ನು ಮೈಗೂಡಿಸಿಕೊಂಡು, ಸಮಾಜ ಸುಧಾರಣೆಯತ್ತ ಗಮನಹರಿಸಬೇಕು ಎಂದು ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತಾಶ್ರದಲ್ಲಿ ಶುಕ್ರವಾರ ನಗರದ ತ.ರಾ.ಸು ರಂಗಮಂದಿರದಲ್ಲಿ ಆಯೋಜಿಸಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

   ಹಿಂದಿನ ಕಾಲದಲ್ಲಿ ಚಿತ್ರದುರ್ಗ ಕಂಬಳಿ ನೇಯ್ಗೆಗೆ ಪ್ರಸಿದ್ಧಿಯಾಗಿತ್ತು. ಅಂದು ಕಂಬಳಿಗಳನ್ನು ದೇಶದ ಗಡಿ ಕಾಯುವ ಸೈನಿಕರಿಗೆ ರವಾನಿಸಲಾಗುತ್ತಿತ್ತು. ಆದರೆ ಇಂದಿನ ದಿನಮಾನದಲ್ಲಿ ಯುವಜನತೆಗೆ ಕಂಬಳಿಗಳ ಬಗ್ಗೆ ಅರಿವಿಲ್ಲದಿರುವುದು ಒಂದು ವಿಪರ್ಯಾಸ. ಸಮಾಜದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಿ, ಪ್ರೋತ್ಸಾಹಿಸಬೇಕು. ಕುರುಬ ಸಮುದಾಯದವರಿಗಾಗಿ ನಗರದ ದವಳಗಿರಿ ಬಡಾವಣೆಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ 02 ಎಕರೆ ಸ್ಥಳಾವಕಾಶ ನೀಡಲಾಗಿದೆ. ಹೊಸದುರ್ಗದ ಮಠಕ್ಕಾಗಿ 10 ಲಕ್ಷ ರೂ. ನೀಡುವುದಾಗಿ, ಮಠ ನಿರ್ಮಾಣಕ್ಕಾಗಿ ಸರ್ಕಾರದಲ್ಲಿ 5 ಕೋಟಿ ರೂ. ಅನುದಾನ ಜೊತೆಗೆ ಕುರುಬ ಸಮುದಾಯದ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಪ್ರಾಮಾಣಿಕವಾಗಿ ಯತ್ನಿಸÀಲಾಗುವುದು ಎಂದು ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಭರವಸೆ ನೀಡಿದರು.

    ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸರಳ ಸಾಹಿತ್ಯದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಕನಕದಾಸರಂತಹ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ದಾರ್ಶನಿಕರ ವೈಚಾರಿಕೆಯನ್ನು ಅರಿತು, ಅದರಂತೆ ನಡೆಯಲಿ ಎಂಬ ಉದ್ದೇಶದಿಂದ ಸರ್ಕಾರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಇಂದಿನ ಮಕ್ಕಳು ಹಾಗೂ ಯುವಪೀಳಿಗೆಗಳು ಕನಕದಾಸರ ಕೀರ್ತನೆಗಳನ್ನು ಓದಬೇಕು ಎಂದು ಸಲಹೆ ನೀಡಿದರು.

    ಶಿವಮೊಗ್ಗ ಸರ್ಕಾರಿ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಎಂ. ಮುತ್ತಯ್ಯ ವಿಶೇಷ ಉಪನ್ಯಾಸ ನೀಡಿ, ಕರ್ನಾಟಕ ಕಂಡ ಅಪರೂಪದ ದಾರ್ಶನಿಕರು ಕನಕದಾಸರು. 16, 17 ನೇ ಶತಮಾನದಲ್ಲಿ ಸಮಾಜ ಸುಧಾರಣೆಯಲ್ಲಿ ಕನಕದಾಸರ ಪಾತ್ರ ಬಹುಮುಖ್ಯವಾದುದು. ಕುಲ ಕುಲವೆಂದು ಹೊಡೆದಾಡಬೇಡಿ, ಇಲ್ಲಿ ಯಾರು ಮೇಲು ಕೀಳಿಲ್ಲ, ಸರ್ವರೂ ಸಮಾನರು ಎಂಬ ಸಂದೇಶ ಸಾರಿದ್ದಾರೆ.

    ಕುಲ ಹುಟ್ಟಿನಿಂದಲ್ಲ ಗುಣ ಹಾಗೂ ನಡತೆಯಿಂದ ಬರುತ್ತದೆ. ಕನಕದಾಸರ ರಾಮಧಾನ್ಯ ಚರಿತೆಯಲ್ಲಿ ಭತ್ತ ಮತ್ತು ರಾಗಿಯನ್ನು ಒಂದು ಸಂಕೇತವನ್ನಾಗಿಸಿ, ಅಂದಿನ ದಿನಮಾನದಲ್ಲಿ ನಡೆಯುತ್ತಿದ್ದ ಜಾತಿಗಳ ನಡುವಿನ, ಶ್ರಮಿಕ ಹಾಗೂ ಧನಿಕರ ನಡುವಿನ ತಾರತಮ್ಯವನ್ನು ಧಾನ್ಯಗಳ ಮೂಲಕ ಸೂಚ್ಯವಾಗಿ ತಿಳಿಸಿದ್ದಾರೆ. ರಾಗಿ ಶ್ರಮಿಕರ ಗುಂಪಿನ ಸಂಕೇತ, ಕಷ್ಟಪಟ್ಟು ದುಡಿದವರ ಬದುಕು ಎಂದಿಗೂ ಹಸನಾಗಿರುತ್ತದೆ. ಭತ್ತ ಧನಿಕರ ಸಂಕೇತ ಕೇವಲ ಬಣ್ಣದಿಂದ ಗುರುತಿಸಿದರೆ ಅದು ಕ್ಷಣಿಕವಾಗಿರುತ್ತದೆ. ಪುರಾಣ ಪುರುಷೋತ್ತಮ ಶ್ರೀರಾಮನ ಮೂಲಕ ರಾಗಿ ಸರ್ವಕಾಲಿಕ ಶ್ರೇಷ್ಠ ಅಂದರೆ ಶ್ರಮಿಕರಿಗೆ ಮನ್ನಣೆ ಎಂಬರ್ಥದಲ್ಲಿ ಬಿಂಬಿಸಿದ್ದಾರೆ.

    ಕನಕದಾಸರು ದೈವದ ಜೊತೆ ಬಂಧುತ್ವದ ಭಾವನೆ ಹೊಂದಿದ್ದರು. ಸಮಾಜದ ಮೌಡ್ಯ ಅಂಧಕಾರವನ್ನು ತೊಡೆಯುವಲ್ಲಿ ಕನಕದಾಸರು ಸರ್ವ ಶ್ರೇಷ್ಠರು ಎಂದು ಅವರು ತಿಳಿಸಿದರು. ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಕಾರ್ಯಕ್ರಮ ಕುರಿತು ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ಅರುಣ್, ಉಪವಿಭಾಗಾಧಿಕಾರಿ ವಿ. ಪ್ರಸನ್ನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ನಗರಸಭೆ ಪೌರಾಯುಕ್ತ ಜೆ.ಟಿ ಹನುಮಂತರಾಜ್, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಎಸ್. ಶ್ರೀರಾಮ್, ಪ್ರಧಾನ ಕಾರ್ಯದರ್ಶಿ ಬಿ.ಹೆಚ್ ಗೌಡ್ರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗಣೇಶ್ ಸ್ವಾಗತಿಸಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap