ಕೋಳಿ ಕಸದ ಸಮಸ್ಯೆ ನಿವಾರಣೆಗೆ ಪಾಲಿಕೆಯಿಂದ ಹೊಸ ತಂತ್ರ..!!

ತುಮಕೂರು

   ಕೋಳಿ ಮತ್ತು ಮಾಂಸದ ಅಂಗಡಿಗಳಿಂದ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಡೆಯುವಂತೆ ಮಾಡುವ ಸಲುವಾಗಿ ಪ್ರತಿ ಅಂಗಡಿಗಳವರು ಆಯಾ ಸಂಘಗಳ ಸದಸ್ಯತ್ವ ಹೊಂದಿದ್ದರೆ ಮಾತ್ರ ಉದ್ದಿಮೆ ಪರವಾನಗಿ ನೀಡಲು ಹಾಗೂ ಉದ್ದಿಮೆ ಪರವಾನಗಿ ಇಲ್ಲದ ಅಂಗಡಿಗಳಿಗೆ ಬೀಗ ಹಾಕಲು ತುಮಕೂರು ಮಹಾನಗರ ಪಾಲಿಕೆಯು ಮಹತ್ವದ ನಿರ್ಧಾರ ಕೈಗೊಂಡಿದೆ.

    ಮಹಾನಗರ ಪಾಲಿಕೆ ಕಚೇರಿಯಲ್ಲಿ ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಸೈಯದ್ ನಯಾಜ್, ಸ್ಥಾಯಿ ಸಮಿತಿ ಸದಸ್ಯೆ ಫರೀದಾ ಬೇಗಂ ಹಾಗೂ ಆಯುಕ್ತ ಟಿ.ಭೂಪಾಲನ್ ಅವರ ಸಮ್ಮುಖದಲ್ಲಿ ಸೋಮವಾರ ನಡೆದ ಕೋಳಿ ಮತ್ತು ಮಾಂಸದ ಅಂಗಡಿಗಳವರ ಪ್ರತ್ಯೇಕ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಮೂಲಗಳು ಹೇಳಿವೆ.

     ನಗರದಲ್ಲಿ ಕೋಳಿ ಮತ್ತು ಮಾಂಸದ ಅಂಗಡಿಗಳ ತ್ಯಾಜ್ಯ ನಿರ್ವಹಣೆಯು ತೃಪ್ತಿಕರವಾಗಿಲ್ಲ ಎಂದು ಪಾಲಿಕೆಯ ಆಡಳಿತವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಈ ಬಗ್ಗೆ ಸಂಘಗಳ ಪದಾಧಿಕಾರಿಗಳು ಮತ್ತು ಪಾಲಿಕೆ ಅಧಿಕಾರಿಗಳು ಚರ್ಚಿಸಿದರು.ಹಿಂದೆ 60-70 ಅಂಗಡಿಗಳಿದ್ದವು. ಆಗ ಈ ಸಂಘಗಳೇ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದವು. ತಾವೇ ವಾಹನವೊಂದರ ವ್ಯವಸ್ಥೆ ಮಾಡಿಕೊಂಡು, ಪ್ರತಿ ಅಂಗಡಿಯಿಂದ ನಿಗದಿತ ಶುಲ್ಕ ಪಡೆದು ಕಸವನ್ನು ಅಜ್ಜಗೊಂಡನಹಳ್ಳಿಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸುವ ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ ಇತ್ತೀಚೆಗೆ ಈ ಅಂಗಡಿಗಳ ಸಂಖ್ಯೆ ದುಪ್ಪಟ್ಟುಗೊಂಡಿವೆ.

       ಪಾಲಿಕೆ ಲೆಕ್ಕ ಹಾಕಿರುವಂತೆ 136 ಅಧಿಕೃತ ಅಂಗಡಿಗಳಿವೆ. ಆದರೆ ಈಗ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು.

       ಈ ಮೊದಲು ಎಲ್ಲ ಅಂಗಡಿಗಳವರೂ ನಮ್ಮ ಈ ನೋಂದಾಯಿತ ಸಂಘಗಳ ಸದಸ್ಯರುಗಳಾಗಿದ್ದರು. ಆಗ ಎಲ್ಲರೂ ಸಂಘದ ನಿರ್ಧಾರಕ್ಕೆ ಬದ್ಧರಾಗಿದ್ದರು. ಅದರೆ ಇತ್ತೀಚೆಗೆ ಹೊಸದಾಗಿ ಅಂಗಡಿಗಳನ್ನು ತೆರೆದಿರುವವರು ನಮ್ಮ ಸಂಘದ ಸದಸ್ಯತ್ವ ಪಡೆದಿಲ್ಲ. ಹೀಗಾಗಿ ಅವರು ಸಂಘದ ನಿಯಂತ್ರಣದಲ್ಲಿಲ್ಲ. ಇದೇ ಈಗಿನ ಸಮಸ್ಯೆಗೆ ಕಾರಣವಾಗಿದೆ ಎಂದು ಸಂಘಗಳವರು ತಮ್ಮ ಅಳಲನ್ನು ತೋಡಿಕೊಂಡರು.
ಪಾಲಿಕೆಯಿಂದ ಪ್ರತಿ ಅಂಗಡಿಗೆ ಉದ್ದಿಮೆ ಪರವಾನಗಿ ಕೊಡಲಾಗುತ್ತದೆ.

      ಇದನ್ನು ಪ್ರತಿವರ್ಷ ನವೀಕರಿಸಬೇಕು. ಈ ರೀತಿ ಹೊಸದಾಗಿ ಪರವಾನಗಿ ಕೊಡುವಾಗ ಅಥವಾ ನವೀಕರಿಸುವಾಗ ಸದರಿ ಕೋಳಿ ಮತ್ತು ಮಾಂಸದ ಅಂಗಡಿಗಳವರು ನಮ್ಮ ನೋಂದಾಯಿತ ಸಂಘದ ಸದಸ್ಯತ್ವ ಪಡೆದಿರುವರೇ ಎಂಬುದನ್ನು ಪಾಲಿಕೆ ನೋಡಿ, ಅಂತಹವರಿಗೆ ಮಾತ್ರ ಪರವಾನಗಿ ಕೊಟ್ಟರೆ ಆಗ ಅಂತಹ ಅಂಗಡಿಗಳವರು ನಮ್ಮ ಸಂಘದ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ. ಆಗ ತ್ಯಾಜ್ಯ ನಿರ್ವಹಣೆಯು ನಿಯಂತ್ರಣಕ್ಕೆ ಬರುತ್ತದೆ ಎಂದು ಎರಡೂ ಸಂಘದವರು ಅಭಿಪ್ರಾಯಪಟ್ಟಾಗ, ಪಾಲಿಕೆಯ ಆಡಳಿತವೂ ಇದಕ್ಕೆ ಒಪ್ಪಿಗೆ ಸೂಚಿಸಿತು. ಹಾಗೂ ಪರವಾನಗಿ ಇಲ್ಲದಿದ್ದರೆ ನಿಯಮದ ಪ್ರಕಾರ ಬೀಗ ಹಾಕುವುದಾಗಿ ಪಾಲಿಕೆಯು ಸ್ಪಷ್ಟಪಡಿಸಿತು ಎಂದು ಮೂಲಗಳು ತಿಳಿಸಿವೆ.

       ಈ ಸಭೆಯಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್, ಎಲ್ಲ ಪರಿಸರ ಇಂಜಿನಿಯರ್‍ಗಳು ಹಾಗೂ ಹೆಲ್ತ್ ಇನ್ಸ್ ಪೆಕ್ಟರ್‍ಗಳು ಹಾಜರಿದ್ದರು.

ಪ್ರದರ್ಶಿಸುವಂತಿಲ್ಲ

      “ಟ್ರೇಡ್ ಲೈಸೆನ್ಸ್ ನಿಯಮಗಳ ಪ್ರಕಾರ ಕೋಳಿ ಮತ್ತು ಮಾಂಸದ ಅಂಗಡಿಗಳಲ್ಲಿ ಮಾಂಸವನ್ನು ನೇತು ಹಾಕಿ ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ. ಅದರ ಬದಲು ಕೋಲ್ಡ್ ಸ್ಟೋರೇಜ್‍ನಲ್ಲಿಟ್ಟು ನೈರ್ಮಲ್ಯ ಕಾಪಾಡಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಂಗಡಿಗಳವರು ಈಗಿನಿಂದಲೇ ತಮ್ಮ ಅಂಗಡಿಗಳನ್ನು ಮೇಲ್ದರ್ಜೆಗೇರಿಸಲು ಪ್ರಯತ್ನಿಸಬೇಕು. ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಸೌಲಭ್ಯಗಳನ್ನು ಪಡೆದುಕೊಂಡು ಕೋಲ್ಡ್ ಸ್ಟೋರೇಜ್ ಸೌಲಭ್ಯ ಹೊಂದಬೇಕು” ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap