ತುಮಕೂರು

ತುಮಕೂರು ಸ್ಮಾರ್ಟ್‍ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ.) ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಐ.ಎ.ಎಸ್. ಅಧಿಕಾರಿಗಳು ನಿರಾಸಕ್ತರಾಗಿದ್ದಾರೆಂಬ ಮಾತೊಂದು ಕೆಲವೊಂದು ವಲಯದಲ್ಲಿ ಚರ್ಚೆಗೊಳ್ಳುತ್ತಿದೆ.
ತುಮಕೂರು ನಗರವು ಸ್ಮಾರ್ಟ್‍ಸಿಟಿ ಆಗಿ ಆಯ್ಕೆಯಾಗಿ, ಕಂಪನಿಯ ವತಿಯಿಂದ ನಗರದಲ್ಲಿ 1,000 ಕೋಟಿ ರೂ.ಗಳ ಕಾಮಗಾರಿಗಳು ಅನುಷ್ಠಾನವಾಗುತ್ತಿರುವುದು ತುಮಕೂರು ನಗರದ ಆಯ್ದ ಏಳು ವಾರ್ಡ್‍ಗಳ ವ್ಯಾಪ್ತಿಯಲ್ಲಿ ಮಾತ್ರ. ಇಷ್ಟೊಂದು ಚಿಕ್ಕ ಪ್ರದೇಶದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಲು ಐ.ಎ.ಎಸ್. ಅಧಿಕಾರಿಗಳು ಆಸಕ್ತಿ ವ್ಯಕ್ತಪಡಿಸುತ್ತಿಲ್ಲ ಎಂಬುದು ಇದಕ್ಕೆ ಮೂಲ ಕಾರಣವೆನ್ನಲಾಗುತ್ತಿದೆ.
ಮಹಾನಗರ ಪಾಲಿಕೆ ಎಂದರೆ ಅದೊಂದು ವಿಧಾನಸಭಾ ಕ್ಷೇತ್ರವಾಗಿದೆ. ಅಲ್ಲದೆ ನಗರದಲ್ಲಿ ಸುಮಾರು 4 ಲಕ್ಷ ಜನಸಂಖ್ಯೆ ದಾಟಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವುದೊಂದು ಸವಾಲಾಗಿರುತ್ತದೆ. ಸದಾ ಜನರೊಂದಿಗೆ ಇರುವ ಅವಕಾಶವಿರುತ್ತದೆ. ಹೀಗಾಗಿ ಪಾಲಿಕೆಯ ಆಯುಕ್ತರಾಗಿ ಕೆಲಸ ಮಾಡಬಹುದು. ಆದರೆ ಸ್ಮಾರ್ಟ್‍ಸಿಟಿ ಕಂಪನಿಯ ಎಂ.ಡಿ. ಆದರೆ ಸೀಮಿತ ಪ್ರದೇಶದಲ್ಲಿ ಈಗಾಗಲೇ ನಿರ್ಣಯಿಸಲಾಗಿರುವ ಕಾಮಗಾರಿಗಳ ಉಸ್ತುವಾರಿ ಮಾಡಬೇಕಷ್ಟೇ. ಅದರಲ್ಲೇನೂ ಸ್ವಾರಸ್ಯವಿರದು. ಪಾಲಿಕೆಯ ಆಯುಕ್ತರಂತಹ ಹುದ್ದೆಯಲ್ಲಿ ಐ.ಎ.ಎಸ್. ಅಧಿಕಾರಿ ಇದ್ದರೆ, ಅಂಥವರಿಗೆ ಸ್ಮಾರ್ಟ್‍ಸಿಟಿಯ ಎಂ.ಡಿ. ಆಗಿ ಹೆಚ್ಚುವರಿ ಜವಾಬ್ದಾರಿ ಕೊಡಬಹುದು. ಆಗ ಅವರು ಎರಡನ್ನೂ ನಿಭಾಯಿಸಬಲ್ಲರು ಎಂಬುದು ಈಗ ಕೇಳಿಬಂದಿರುವ ಚರ್ಚೆಯ ಸಾರಾಂಶ.
ಸ್ಮಾರ್ಟ್‍ಸಿಟಿ ಕಂಪನಿಯ ಆರಂಭವಸ್ಥೆಯಲ್ಲಿ ಮೊಟ್ಟ ಮೊದಲಿಗೆ ಎಂ.ಡಿ. ಹುದ್ದೆಗೆ ದಕ್ಷ ಹಾಗೂ ಪ್ರಾಮಾಣಿಕರಾಗಿದ್ದ ಯುವ ಐ.ಎ.ಎಸ್. ಅಧಿಕಾರಿ ಅನಿರುದ್ಧ ಶ್ರವಣ್ ನಿಯುಕ್ತರಾಗಿದ್ದರು. ಪ್ರತಿಯೊಂದು ತೀರ್ಮಾನದ ಮುನ್ನ ಅವರು ಕಾನೂನು-ನಿಯಮಾವಳಿಗಳನ್ನು ಪರಿಶೀಲಿಸಿ ಅದರಂತೆಯೇ ನಿಲುವು ತಾಳುತ್ತಿದ್ದರು. ಆದರೆ ಅವರನ್ನು ಅಲ್ಪಾವಧಿಯಲ್ಲೇ ವರ್ಗಾಯಿಸಲಾಯಿತು. ಆಗ ಕೇಳಿಬಂದ ವದಂತಿ ಏನೆಂದರೆ- ಇವರು ಹಿರಿಯ ಅಧಿಕಾರಿಯೊಬ್ಬರ ತಾಳಕ್ಕೆ ತಕ್ಕಂತೆ ತಲೆಯಾಡಿಸುತ್ತಿಲ್ಲ. ಕೈಗೊಂಬೆಯಂತೆ ವರ್ತಿಸುತ್ತಿಲ್ಲ. ಸ್ವತಂತ್ರ ನಿಲುವು ತಾಳುತ್ತಾರೆ. ಆದಕ್ಕಾಗಿ ಆ ಹಿರಿಯ ಅಧಿಕಾರಿ ತಮ್ಮ ಪ್ರ`Áವ ಬಳಸಿ, ಇವರನ್ನು ಇಲ್ಲಿಂದ ವರ್ಗಾಯಿಸಿದರು ಎಂಬುದು.
ಅವರ ನಂತರ ಇತ್ತೀಚೆಗೆ ಈ ಕಂಪನಿಯ ಎಂ.ಡಿ. ಹುದ್ದೆ ಅಲಂಕರಿಸಿದವರೆಂದರೆ, ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಟಿ.ಭೂಬಾಲನ್. ಪಾಲಿಕೆ ಆಯುಕ್ತರಾಗಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದ ಇವರಿಗೆ, ಆ ಹುದ್ದೆಯ ಜೊತೆಗೆ ಹೆಚ್ಚುವರಿಯಾಗಿ ಎಂ.ಡಿ. ಹುದ್ದೆಯನ್ನೂ ಸರ್ಕಾರ ವಹಿಸಿತು. ಅತ್ಯಲ್ಪ ಅವಧಿಯಲ್ಲೇ ಆ ಕಂಪನಿಯಲ್ಲಿ ಇವರು ಆಡಳಿತಾತ್ಮಕವಾಗಿ ಹಲವು ಸುಧಾರಣೆಗಳನ್ನು ಜಾರಿಗೆ ತಂದರು. ಸರಿಯಾಗಿ ಕಾಮಗಾರಿಗಳನ್ನು ನಿರ್ವಹಿಸದಿದ್ದ ಪ್ರಭಾವಿ ಗುತ್ತಿಗೆದಾರರಿಗೆ ಮೊದಲ ಬಾರಿಗೆ ಭಾರಿ ಮೊತ್ತದ ದಂಡವನ್ನು ನಿರ್ದಾಕ್ಷಿಣ್ಯವಾಗಿ ವಿಧಿಸುವ ಮೂಲಕ, ಪ್ರಭಾವಿ ಗುತ್ತಿಗೆದಾರರೆಲ್ಲ ಬೆಚ್ಚಿಬೀಳುವಂತೆ ಮಾಡಿದರು. ಕಂಪನಿಯ ಆಡಳಿತದಲ್ಲಿ ದಕ್ಷತೆ ತರುವ ಮೂಲಕ, ಈವರೆಗೂ ಉಡಾಫೆಯಿಂದ ಇದ್ದವರಿಗೆ ಚಳಿ ಬಿಡಿಸಿದರು.
ಹೀಗೆ ಅಲ್ಲಿ ಒಂದಿಷ್ಟು ದಕ್ಷತೆ ಮೂಡಿಸುವಷ್ಟರಲ್ಲೇ ಇವರನ್ನು ಆ ಹುದ್ದೆಯಿಂದ ಬಿಡುಗಡೆಗೊಳಿಸಲಾಯಿತು. ಅದಾದ ತಕ್ಷಣ ಪಾಲಿಕೆ ಆಯುಕ್ತರ ಹುದ್ದೆಯಿಂದಲೂ ಬೆಳಗಾವಿಗೆ ವರ್ಗಾಯಿಸಲಾಯಿತು. ಈ ಬಾರಿ ಭೂಬಾಲನ್ ಅವರು ವರ್ಗಾವಣೆ ಆಗಲು ರಾಜಕಾರಣಿಗಳು ಕಾರಣರಾದರೆಂಬುದು ಕಾಳ್ಗಿಚ್ಚಿನಂತೆ ಹಬ್ಬಿ, ರಾಜಕಾರಣಿಗಳ ವಿರುದ್ಧ ಜನಾಕ್ರೋಶ ವ್ಯಕ್ತ ಗೊಳ್ಳುವ ಮಟ್ಟಕ್ಕೆ ಬೆಳವಣಿಗೆ ಆಯಿತು. ಈ ವರ್ಷದ ಸೆಪ್ಟೆಂಬರ್ ಕೊನೆಯ ವಾರದಿಂದ ಸ್ಮಾರ್ಟ್‍ಸಿಟಿ ಕಂಪನಿಯಲ್ಲಿ ಎಂ.ಡಿ. ಹುದ್ದೆ ಖಾಲಿ ಇದೆ. ಅದರ ಭರ್ತಿಗೆ ರಾಜಕಾರಣಿಗಳು ನಡೆಸಿದ ಯತ್ನ, ಜನಾಕ್ರೋಶದಿಂದ ವಿಫಲವಾಗಿ ಈವರೆಗೆ ಯಾರನ್ನೂ ನೇಮಿಸಲು ಸಾಧ್ಯವಾಗಿಲ್ಲ. ಕಂಪನಿಯು ಅತಂತ್ರವಾಗಿದ್ದು, ಚುಕ್ಕಾಣಿ ಇಲ್ಲದಂತಾಗಿದೆ.
ಸ್ಮಾರ್ಟ್‍ಸಿಟಿ ಕಂಪನಿಯ ನಿಯಮಾವಳಿ ಪ್ರಕಾರ ಎಂ.ಡಿ. ಹುದ್ದೆಗೆ ಐ.ಎ.ಎಸ್. ಅಥವಾ ಕೆ.ಎ.ಎಸ್. ಅಥವಾ ಕೆ.ಎಂ.ಎ.ಎಸ್. ಗ್ರೇಡ್ ಅಧಿಕಾರಿಗಳು ಮಾತ್ರ ನಿಯುಕ್ತರಾಗಬಹುದು. ಕಂಪನಿ ಅಸ್ತಿತ್ವಕ್ಕೆ ಬಂದ ಬಳಿಕ ಈವರೆಗೆ ಇಬ್ಬರು ಐ.ಎ.ಎಸ್. ಅಧಿಕಾರಿಗಳು ಮಾತ್ರ ಇಲ್ಲಿ ಎಂ.ಡಿ. ಆಗಿದ್ದರು. ಮಿಕ್ಕಂತೆ ಕೆ.ಎಂ.ಎ.ಎಸ್. ಅಧಿಕಾರಿಗಳಾದ ಮಂಜುನಾಥ ಸ್ವಾಮಿ ಮತ್ತು ಬಿ.ಟಿ. ರಂಗಸ್ವಾಮಿ ಎಂ.ಡಿ. ಆಗಿದ್ದರು. ಇವರಿಬ್ಬರ ಪೈಕಿ ಪಾಲಿಕೆ ಆಯುಕ್ತರಾಗಿದ್ದ ಮಂಜುನಾಥ ಸ್ವಾಮಿ ಹೆಚ್ಚುವರಿಯಾಗಿ ಎಂ.ಡಿ. ಆಗಿದ್ದರು. ಟೂಡಾ ಆಯುಕ್ತರಾಗಿದ್ದ ರಂಗಸ್ವಾಮಿ ಇಲ್ಲಿಗೆ ಬಂದ ಬಳಿಕವೂ ಕೆಲ ಕಾಲ ಟೂಡಾದ ಆಯುಕ್ತರಾಗಿ ಮುಂದುವರೆದಿದ್ದರು. ಹೀಗೆ ಕಂಪನಿಯ ಎಂ.ಡಿ. ಹುದ್ದೆಯ ನೇಮಕ ಆಗುತ್ತಿದ್ದು, ಇದೀಗ ಎಂ.ಡಿ. ಹುದ್ದೆ ಕಳೆದ ಸುಮಾರು 70 ದಿನಗಳಿಂದ ನೆನೆಗುದಿಗೆ ಬಿದ್ದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
