ಚಿತ್ರದುರ್ಗ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗ ದೊಂದಿಗೆ, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕಾ ಸಪ್ತಾಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ಏರ್ಪಡಿಸಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರವಿ ಅಧ್ಯಕ್ಷತೆ ವಹಿಸಿ, ಮಕ್ಕಳಿಗೆ ಕಾಲ ಕಾಲಕ್ಕೆ ತಪ್ಪದೇ ಲಸಿಕೆ ಹಾಕಿಸಿ, ಮಾರಕ ರೋಗಗಳಿಂದ ರಕ್ಷಿಸಿಕೊಳ್ಳುವಂತೆ ಕರೆ ನೀಡಿದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಮಕ್ಕಳನ್ನು 5 ವರ್ಷದಲ್ಲಿ 7 ಬಾರಿ ಲಸಿಕಾ ಕೇಂದ್ರಕ್ಕೆ ಕರೆ ತನ್ನಿ, 10 ಮಾರಕ ರೋಗಗಳ ವಿರುದ್ಧ ಲಸಿಕೆ ಹಾಕಿಸಿ, ಮಾರಕ ರೋಗಗಳಿಂದ ಮುಕ್ತಗೊಳಿಸಿ, ಅಲ್ಲದೆ ಪೌಷ್ಟಿಕಾಹಾರ ಮಕ್ಕಳಿಗೆ ನೀಡುವುದರಿಂದ ಬೆಳವಣಿಗೆ ಉತ್ತಮವಾಗಲಿದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿ ಮಕ್ಕಳು ಪದೇ ಪದೇ ಸಣ್ಣ ಪುಟ್ಟ ರೋಗಗಳಿಗೆ ತುತ್ತಾಗುವುದನ್ನು ತಡೆಗಟ್ಟಬಹುದಾಗಿದೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮುಗಪ್ಪ, ನೂತನ ಗರ್ಭ ನಿರೋಧಕಗಳ ಬಗ್ಗೆ, ಅಂತರದ ಹೆರಿಗೆಯ ಬಗ್ಗೆ ಕುಟುಂಬ ಕಲ್ಯಾಣ ಯೋಜನೆ ಅನುಷ್ಠಾನಕ್ಕೆ ಪುರುಷರ ಸಹಭಾಗಿತ್ವದ ಬಗ್ಗೆ ತಿಳಿಸಿದರು. ವೀರೇಶ್ ಜಿಲ್ಲಾ ಲಸಿಕಾ ನಿರ್ವಾಹಕರು ಲಸಿಕೆಗಳ ಉಪಯೋಗ ಶೀತಲ ಸರಪಳಿ ಬಗ್ಗೆ ತಿಳಿಸಿದರು, ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ವಿಜಯ, ವೆಂಕಟಮ್ಮ ಬಿ.ವಿ., ಸಾವಿತ್ರಮ್ಮ ಹಿರಿಯ ಆರೋಗ್ಯ ಸಹಾಯಕಿ, ಗುರುಮೂರ್ತಿ, ಎಲ್ಲಾ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತೆ ಯರು, ತಾಯಂದಿರು ಮಕ್ಕಳು ಭಾಗವಹಿಸಿದ್ದರು.