ಬೆಂಗಳೂರು
ದೇಶದ ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಕಂಪನಿ ವಿದ್ಯುತ್ ಚಾಲಿತ ದ್ವಿ ಚಕ್ರ ಹಾಗು ನಾಲ್ಕು ಚಕ್ರ ವಾಹನದ ನಂತರ ಇದೀಗ ಮೂರು ಚಕ್ರದ ವಾಹನ ವಿಭಾಗದಲ್ಲಿ ದಾಪುಗಾಲಿಟ್ಟಿದೆ. ದೇಶದ ಮೊದಲ ಮೂರು ಚಕ್ರದ ವಾಹನ ಟ್ರಿಯೋ ಅನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಜಿಗಣಿ ಕೈಗಾರಿಕಾ ವಲಯದಲ್ಲಿರುವ ಮಹೀಂದ್ರಾ ವಿದ್ಯುತ್ ಚಾಲಿತ ವಾಹನಗಳ ತಯಾರಿಕಾ ಘಟಕದಲ್ಲಿ ನೂತನ ಮೊದಲ ತ್ರಿ ಚಕ್ರ ಪೂರ್ಣ ಪ್ರಮಾಣದ ವಿದ್ಯುತ್ ಚಾಲಿತ ವಾಹನವನ್ನು ಲೋಕಾರ್ಪಣೆ ಮಾಡಲಾಗಿದೆ.
ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಮಾಹಿತಿ ತಂತ್ರಜ್ಞಾನ ಹಾಗು ಸಣ್ಣ ಮತ್ತು ಮದ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ನೂತನ ಆಟೋದಲ್ಲಿ ಪ್ರಯಾಣಿಸುವ ಮೂಲಕ ಅಧಿಕೃತವಾಗಿ ತ್ರಿ ಚಕ್ರ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಿದರು.
ನಂತರ ಮಾತನಾಡಿದ ಸಚಿವ ಜಾರ್ಜ್, ಮಹೀಂದ್ರಾ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ನೆರವು ನೀಡಲು ರಾಜ್ಯ ಸರ್ಕಾರದ ಬಾಗಿಲು ಸದಾ ತೆರೆದಿರುತ್ತದೆ ಎಂದರು.
ಸಚಿವ ಕೆ.ಜೆ. ಜಾರ್ಜ್, ದೇಶದ ಭವಿಷ್ಯದ ವಾಹನ ಎಲೆಕ್ಟ್ರಿಕ್ ವಾಹನವಾಗಿದೆ. ರಾಜ್ಯ ವಿದ್ಯುತ್ ಚಾಲಿತ ವಾಹನ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಸ್ಟಾರ್ಟ್ ಅಪ್‍ಗಳಲ್ಲಿ ಕರ್ನಾಟಕ ಆಗ್ರ ಸ್ಥಾನದಲ್ಲಿದೆ. ಅದಕ್ಕಾಗಿ ಅಗತ್ಯ ಸೌಲಭ್ಯ ಕಲ್ಪಿಸುವ ಸರಳ ನಿಯಮ ರೂಪಿಸಲಾಗಿದೆ ಎಂದರು.
ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಮಹೀಂದ್ರಾ ಇಂದು ದೇಶದ ಮುಂಚೂಣಿ ಆಟೊಮೊಬೈಲ್ ಕೈಗಾರಿಕೆಯಾಗಿದೆ. ಆವಿಷ್ಕಾರ, ಸಂಶೋಧನೆ, ಹೊಸ ಐಡಿಯಾದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ರಾಜ್ಯ ಬ್ಯಾಟರಿ ಸ್ಟೋರೇಜ್ ಪಾಲಿಸಿ ರೂಪಿಸಿದೆ ಎಂದರು.
ತ್ರಿ ಚಕ್ರ ವಾಹನ ಮತ್ತು ಬ್ಯಾಟರಿ ಉತ್ಪಾದನಾ ಘಟಕಕ್ಕೆ 31 ಸಾವಿರ ಕೋಟಿ ಹೂಡಿಕೆ ಮಾಡಿದ್ದು ಇದರಿಂದ 55 ಸಾವಿರ ಉದ್ಯೋಗ ಸೃಷ್ಠಿಯಾಗಿದೆ. ದೇಶದಲ್ಲಿ ಇಂದು ಉದ್ಯೋಗ ಸೃಷ್ಠಿಯೇ ಸವಾಲಾಗಿದೆ. 21 ನೇ ಶತಮಾನದಲ್ಲಿ ಡಿಜಿಟಲೀಕರಣ, ಆಟೋಮೇಷನ್ ಇತ್ಯಾದಿಯಿಂದಾಗಿ ಮಾನವ ಸಂಪನ್ಮೂಲ ಬಳಕೆ ಸವಾಲಾಗಿದೆ ಎಂದರು.
ವಾಯು ಮಾಲಿನ್ಯ ನಿಯಂತ್ರಣಕ್ಕೆ ವಿದ್ಯುತ್ ವಾಹನವೇ ಪರಿಹಾರ, ರಾಜ್ಯ ಸರ್ಕಾರ ವಿದ್ಯುತ್ ವಾಹನಕ್ಕೆ ಅಗತ್ಯ ಸಹಕಾರ ನೀಡಲಿದೆ, ಬ್ಯಾಟರಿ ದರದಲ್ಲಿ ಹೆಚ್ಚಳವಿದೆ, ದರ ಹೆಚ್ಚಾಗಿರುವ ಕಾರಣ ವಾಹನದರ ಹೆಚ್ಚಾಗಿದೆ. ಬ್ಯಾಟರಿ ದರ ಹೇಗೆ ಇಳಿಸಬೇಕು ಎನ್ನುವ ಕುರಿತು ಆವಿಷ್ಕರಿಸಿ ಆಗ ವಾಹನ ದರ ಕಡಿಮೆ ಆಗಲಿದೆ ಎಂದು ಸಲಹೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ