ಬೆಂಗಳೂರು
ಗಲ್ಪ್ ದೇಶದಿಂದ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯೊಬ್ಬರ ಬ್ಯಾಗ್‍ನಲ್ಲಿದ್ದ 1 ಸಾವಿರ ಯೂರೋ (80 ಸಾವಿರ ರೂ.) ಕರೆನ್ಸಿಯನ್ನು ಮತ್ತೊಬ್ಬ ಮಹಿಳೆ ದೋಚಿ ಪರಾರಿಯಾಗಿದ್ದಾಳೆ .
ಹಣ ಕಳೆದುಕೊಂಡ ಫ್ರೇಜರ್‍ಟೌನ್ ರಾಬರ್ಟ್‍ಸನ್ ರಸ್ತೆಯ ಲೂಸಿ ಡಿಸೋಜಾ(54) ಅವರು ನೀಡಿದ ದೂರು ದಾಖಲಿಸಿರುವ ಪುಲಿಕೇಶಿನಗರ ಪೊಲೀಸರು ಆರೋಪಿ ಗೀತಾ ವಿರುದ್ಧ ಎಫ್‍ಐಆರ್ ದಾಖಲಿಸಿ ಆಕೆಯ ಬಂಧನಕ್ಕೆ ಶೋಧ ನಡೆಸಿದ್ದಾರೆ.ಗಲ್ಪ್ ದೇಶದಿಂದ ವಿಮಾನದಲ್ಲಿ ನಗರಕ್ಕೆ ಲೂಸಿ ಡಿಸೋಜಾ ಬರುತ್ತಿದ್ದಾಗ ಗೀತಾ ಪರಿಚಯವಾಗಿದೆ. ನನ್ನದು ಎಲೆಕ್ಟ್ರಾನಿಕ್ಸ್ ಸಿಟಿ ಎಂದು ಆಕೆ ಪರಿಚಯ ಮಾಡಿಕೊಂಡಿದ್ದು ಸ್ನೇಹ ಬೆಳೆಸಿದ್ದಾಳೆ. ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಇಬ್ಬರೂ ಒಂದೇ ಕಾರಿನಲ್ಲಿ ಡ್ರಾಪ್ ತೆಗೆದುಕೊಳ್ಳಲು ನಿರ್ಧರಿಸಿ ಕಾರು ಬಾಡಿಗೆ ಪಡೆದಿದ್ದರು.
ಮನೆಗೆ ಬರುತ್ತಿದ್ದಾಗ ಮಾರ್ಗಮಧ್ಯೆ ಶೌಚಗೃಹಕ್ಕೆ ಹೋಗಬೇಕೆಂದು ಗೀತಾ ಹೇಳಿದ್ದಾಳೆ. ಹೆಬ್ಬಾಳ ಬಳಿಯ ಸಾರ್ವಜನಿಕ ಶೌಚಗೃಹದ ಬಳಿ ಕಾರು ನಿಲ್ಲಿಸಿದ್ದಾರೆ. ಮೊದಲು ಗೀತಾ, ತನ್ನ ವ್ಯಾನಿಟಿ ಬ್ಯಾಗ್‍ನ್ನು ಲೂಸಿ ಡಿಸೋಜಾಗೆ ಕೊಟ್ಟು ಶೌಚಗೃಹಕ್ಕೆ ಹೋಗಿದ್ದಾಳೆ.
ವಾಪಸ್ ಬಂದು ಲೂಸಿ ಡಿಸೋಜಾ ಅವರಿಂದ ಬ್ಯಾಗ್ ತೆಗೆದುಕೊಂಡು ನೀವು ಹೋಗಿ ಬನ್ನಿ ಎಂದು ಕಳುಹಿಸಿದ್ದಳು. ನಂತರ ಫ್ರೇಜರ್‍ಟೌನ್‍ನಲ್ಲಿ ಲೂಸಿ ಡಿಸೋಜಾ ಇಳಿದುಕೊಂಡಿದ್ದು, ಗೀತಾ ಎಲೆಕ್ಟ್ರಾನಿಕ್ಸ್‍ಸಿಟಿ ಕಡೆಗೆ ಪ್ರಯಾಣ ಬೆಳೆಸಿದ್ದಳು. ಮನೆಗೆ ಬಂದ ಲೂಸಿ ಡಿಸೋಜಾ, ಲಗೇಜ್ ಚೆಕ್ ಮಾಡಿಕೊಳ್ಳುವಾಗ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 1 ಸಾವಿರ ಯೂರೋ ಕಳವಾಗಿತ್ತು. ಶೌಚಗೃಹಕ್ಕೆ ಹೋಗಲು ಗೀತಾ ಕೈಗೆ ಬ್ಯಾಗ್ ಕೊಟ್ಟಾಗ ಆಕೆ ದೋಚಿರಬೇಕೆಂದು ದೂರು ನೀಡಿದ್ದಾರೆ.