ಬೆಂಗಳೂರು
ಕುಡಿದ ಅಮಲಿನಲ್ಲಿ ಉಂಟಾದ ಜಗಳದ ದ್ವೇಷದಲ್ಲಿ ಸ್ನೇಹಿತನನ್ನೇ ಮಚ್ಚಿನಿಂದ ಹೊಡೆದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಆರೋಪಿ ಸೇರಿ ಇಬ್ಬರನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಕೆಆರ್‍ಪುರಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ನೇಹಿತನಾಗಿದ್ದ ದೇವಸಂದ್ರದ ಜೆ.ಸಿ.ಲೇಔಟ್‍ನ ಸೋನು ಅಲಿಯಾಸ್ ಅರ್ಪೋಜ್ ಪಾಷ(24)ನನ್ನು ಕೊಲೆಗೈದು ಪರಾರಿಯಾಗಿದ್ದ ಜೆ.ಸಿ.ಲೇಔಟ್‍ನ ಇಮ್ರಾನ್(32)ಹಾಗೂ ಸಾಹಿಲ್(22)ನನ್ನು ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅರ್ಪೋಜ್ ಪಾಷ ಹಾಗೂ ಲಾರಿ ಚಾಲಕನಾಗಿದ್ದ ಆರೋಪಿ ಇಮ್ರಾನ್ ಸ್ನೇಹಿತರಾಗಿದ್ದರು ಇಬ್ಬರ ನಡುವೆ ಕೆಲ ದಿನಗಳ ಹಿಂದೆ ಕುಡಿದ ಅಮಲಿನಲ್ಲಿ ಸಣ್ಣ ವಿಚಾರವೊಂದಕ್ಕೆ ಜಗಳ ಉಂಟಾಗಿತ್ತು.ನಂತರ ರಾಜಿಯಾಗಲು ಸೋನು ನಿನ್ನೆ ರಾತ್ರಿ ಸ್ನೇಹಿತ ಇಮ್ರಾನ್ ಜೆ.ಸಿ.ಲೇಔಟ್‍ನ ಈದ್ಗಾ ಮೈದಾನದ ಬಳಿಯ ಮನೆಗೆ ತೆರಳಿದ್ದ.
ರಾಜಿ ವೇಳೆ ಇಬ್ಬರ ಮಧ್ಯೆ ಗಲಾಟೆ ಶುರುವಾಗಿ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಅರ್ಪೋಜ್ ಪಾಷ ಆರೋಪಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆಗ ಇಮ್ರಾನ್ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿದ್ದು ಕೃತ್ಯಕ್ಕೆ ಸಾಹಿಲ್ ಸಹಕರಿಸಿ ಪರಾರಿಯಾಗಿದ್ದರು.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಕೆ.ಆರ್.ಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಬಗ್ಗೆ ಮಾತನಾಡಿದ ಅರ್ಪೋಜ್ ಪಾಷ ಸಂಬಂಧಿ ಅಲ್ಲಾಭಕಷ್ , ಎರಡು ತಿಂಗಳ ಹಿಂದೆ ಕುಡಿದು ಇಬ್ಬರು ಗಲಾಟೆ ಮಾಡಿಕೊಂಡಿದ್ದರು.
ರಾಜಿಯಾಗಲು ಮನೆಗೆ ಕರೆಸಿಕೊಂಡ ಇಮ್ರಾನ್ ಮಚ್ಚು ಮತ್ತು ಲಾಂಗ್‍ಗಳಿಂದ ಹತ್ಯೆ ಮಾಡಿದ್ದಾನೆ. ಈ ವಿಚಾರ ನಮಗೆ ಹತ್ತು ನಿಮಿಷ ತಡವಾಗಿ ತಿಳಿಯಿತು. ನಾವು ಘಟನೆ ನಡೆದ ಸ್ಥಳಕ್ಕೆ ಹೊದಾಗ ಪ್ರಾಣ ಹೊಗಿತ್ತು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದಿದ್ದಾರೆ.