ದಸರಾ ಹಬ್ಬಕ್ಕೆ ಗಗನಕ್ಕೆ ಏರಿದ ಹೂವಿನ ಬೆಲೆ

ಹಿರಿಯೂರು:

         ನಗರದಲ್ಲಿ ಆಯುಧಪೂಜೆಗಾಗಿ ಲೋಡುಗಟ್ಟಲೆ ಬೂದು ಕುಂಬಳಕಾಯಿ ಬಂದಿದ್ದು, ಎಲ್ಲೆಲ್ಲೂ ಕುಂಬಳಕಾಯಿಯದೇ ದರ್ಬಾರ್. ನಗರದ ನೆಹರೂ ಮಾರುಕಟ್ಟೆ ಆವರಣ, ಗಾಂಧಿಸರ್ಕಲ್, ಖಾಸಗಿ ಬಸ್ ಸ್ಟ್ಯಾಂಡ್, ನೆಹರೂ ಸರ್ಕಲ್, ಹುಳಿಯಾರು ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್, ಗುರುಭವನದ ಮುಂಭಾಗ ಸೇರಿದಂತೆ ಎಲ್ಲೆಲ್ಲೂ ಪುಟ್ ಪಾತ್ ತುಂಬೆಲ್ಲಾ ರಾಶಿ ರಾಶಿ ಬೂದು ಕುಂಬಳಕಾಯಿಯನ್ನು ಹಾಕಲಾಗಿದೆ.

       ಗೌರಿ-ಗಣೇಶ ಹಬ್ಬ ಮುಗಿದ ನಂತರ ಪಾತಾಳಕ್ಕೆ ಕುಸಿದಿದ್ದ ಹೂವಿನ ಬೆಲೆ ಈಗ ಚೇತರಿಸಿಕೊಂಡು ಹೂವಿನ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಈ ಮೊದಲು ಒಂದು ಮಾರು ಹೂವಿಗೆ ಕೇವಲ 5ರೂ ನಿಂದ 6 ರೂಗೆ ಇದ್ದ ಧರ ಈಗ ನಗರದಲ್ಲಿ ಹಬ್ಬದ ಪ್ರಯುಕ್ತ ರೂ. 50 ರಿಂದ 100ರೂಗಳಿಗೆ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿದ್ದರೆ ಈ ಹೆಚ್ಚಿನ ಬೆಲೆ ಏರಿಕೆಯಿಂದ ಬೆಳೆಗಾರರ ಮೊಗದಲ್ಲಿ ಸಂತಸ ತುಂಬಿತುಳುಕಿದೆ.

       ದಸರಾ ಹಬ್ಬದ ಪ್ರಯುಕ್ತ ಹೂವು, ಹಣ್ಣು, ತರಕಾರಿಗಳು ಬಾಳೆಕಂಬ, ಪೂಜಾಸಾಮಾಗ್ರಿಗಳ, ಬೆಲೆ ಏರಿಕೆಯಾಗಿದ್ದರೂ ಸಾರ್ವಜನಿಕರಲ್ಲಿ ಹಬ್ಬದ ಸಡಗರಸಂಭ್ರಮ ಕಡಿಮೆಯಾಗಿಲ್ಲ, ಈ ಆಯುಧ ಪೂಜೆ ಹಬ್ಬದಲ್ಲಿ ಜನರು ತಮ್ಮ ವಾಹನಗಳು ಆಯುಧಗಳು, ನಿತ್ಯಬಳಕೆಯ ಉಪಕರಣಗಳು ಸೇರಿದಂತೆ ಅಂಗಡಿಮುಂಗಟ್ಟುಗಳನ್ನು ತಳಿರು ತೋರಣಗಳಿಂದ ಹಾಗೂ ಬಾಳೆಕಂದುಗಳಿಂದ ಅಲಂಕರಿಸಿ, ಲಕ್ಷ್ಮೀ, ಸರಸ್ವತಿ, ಗಣಪತಿಗೆ ಪೂಜೆ ಸಲ್ಲಿಸಿದ ನಂತರ ಕುಂಬಳಕಾಯಿಗೆ ಕುಂಕುಮ ತುಂಬಿ ಅಂಗಡಿಗಳ ಮುಂದೆ ಹಾಗೂ ವಾಹನಗಳ ಮುಂದೆ ಒಡೆಯುವುದು ಸಂಪ್ರದಾಯ.

        ನಗರದಲ್ಲಿ ಮಾರುಕಟ್ಟೆಗೆ ಸಾಕಷ್ಟು ಕುಂಬಳಕಾಯಿ ಬಂದಿದ್ದರೂ ಕಳೆದ ಒಂದೆರಡು ದಿನದಿಂದ ಮಳೆಯಾಗುತ್ತಿರುವ ಕಾರಣ ಕುಂಬಳಕಾಯಿ ವ್ಯಾಪಾರಿಗಳಲ್ಲಿ ಆತಂಕ ಮನೆಮಾಡಿದ್ದು, ಸಾರ್ವಜನಿಕರಲ್ಲಿ ಹಬ್ಬದ ಸಡಗರ ಗರಿಕೆದರಿದೆ. ಸಣ್ಣ ಗಾತ್ರದ ಕುಂಬಳಕಾಯಿಗೆ ರೂ.40, ದೊಡ್ಡ ಗಾತ್ರದ ಕಾಯಿಗೆ ರೂ. 100 ಬೆಲೆಗೆ ಮಾರಾಟಮಾಡಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link