ಜ್ಯೋತಿ ನಿವಾಸ್ ಪ್ರಕರಣ : ಗೃಹ ಸಚಿವರ ರಾಜೀನಾಮೆಗೆ ಕಾಂಗ್ರಸ್ ಒತ್ತಾಯ

ಬೆಂಗಳೂರು

   ಜ್ಯೋತಿ ನಿವಾಸ್ ಕಾಲೇಜು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿರುವ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಘಟನೆಯ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಗೆ ಒತ್ತಾಯಿಸಿ, ಕಾಂಗ್ರೆಸ್ ಪ್ರಚಾರ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

   ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಮುಂಭಾಗ ಸೇರಿದ ಕಾರ್ಯಕರ್ತರು ಸಿಎಎ ಹಾಗೂ ಎನ್‌ಆರ್‌ಸಿಗೆ ಸಹಿ ಸಂಗ್ರಹ ಅಭಿಯಾನ ಕೈಗೊಂಡಿದ್ದ ಸಂದರ್ಭದಲ್ಲಿ ಜ್ಯೋತಿ ನಿವಾಸ್ ಕಾಲೇಜು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಲಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಘಟನೆಗೆ ಸಂಬಂಧಿಸಿದಂತೆ, ಮೌನ ವಹಿಸಿದ್ದಾರೆ ಹಾಗೂ ಬಿಜೆಪಿ ನಾಯಕರನ್ನು ಬೆಂಬಲಿಸಿ ವಿದ್ಯಾರ್ಥಿಗಳನ್ನೇ ಬೆದರಿಸುವ ಹೇಳಿಕೆ ನೀಡುತ್ತಿದ್ದಾರೆ. ಕೂಡಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

    ಸಿಎಎ ಮತ್ತು ಎನ್‌ಆರ್‌ಸಿ ಪರ ಅಭಿಯಾನ ಕೈಗೊಂಡಿದ್ದ ಬಿಜೆಪಿ ನಾಯಕರು, ಮುಗ್ಧ ವಿದ್ಯಾರ್ಥಿಗಳ ಮೇಲೆ ಹಲ್ಲೆ ಹಾಗೂ ಅತಿಕ್ರಮಣ ನೀತಿಯನ್ನು ಅನುಸರಿಸಿದ್ದಾರೆ. ಸ್ಥಳೀಯ ಬಿಟಿಎಂ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕರು, ವಿದ್ಯಾರ್ಥಿಗಳ ವಿರುದ್ಧ ಅವ್ಯಾಚ್ಯ ಶಬ್ಧಗಳನ್ನು ಬಳಸಿದ್ದಾರೆ. ಸಹಿ ಸಂಗ್ರಹ ವೇಳೆ ವಿದ್ಯಾರ್ಥಿಗಳೊಂದಿಗೆ ಬಿಜೆಪಿ ನಾಯಕರು ಗೂಂಡಾಗಳಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದರು.

   ಅನೇಕ ಬಿಜೆಪಿ ನಾಯಕರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಹೇಳಿಕೆ ನೀಡುತ್ತಿದ್ದು, ಇವರನ್ನು ಇದುವರೆಗೂ ಪೊಲೀಸರು ಬಂಧಿಸಿಲ್ಲ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕವಿಕಾ ಮಾಜಿ ಅಧ್ಯಕ್ಷ ಎಸ್. ಮನೋಹರ್, ಜಿ. ಜನಾರ್ಧನ್, ಆನಂದ್, ಎಲ್. ಜಯಸಿಂಹ, ಇ. ಶೇಖರ್, ಇತರರು ಆರೋಪಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ