ಚುನಾವಣೆ: ಪಾವಗಡ-ಶಿರಾದಲ್ಲಿ ಮೈತ್ರಿ ಒಗ್ಗಟ್ಟು

ತುಮಕೂರು:

        ಮೈತ್ರಿ ಸರ್ಕಾರದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೇರಿ ಲೋಕಸಭಾ ಚುನಾವಣೆ ಎದುರಿಸುತ್ತಿವೆ. ಎರಡೂ ಪಕ್ಷಗಳ ಮಾಜಿ ಮತ್ತು ಹಾಲಿ ಜನಪ್ರತಿನಿಧಿಗಳು ಮತಯಾಚನೆ ಮಾಡುತ್ತಿದ್ದಾರೆ. ಪಾವಗಡ ವಿಧಾನಸಭಾ ಕ್ಷೇತ್ರ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದು, ಇತ್ತೀಚೆಗಷ್ಟೇ ಚುನಾವಣಾ ಕಾವು ಜೋರಾಗಿದೆ. ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮತ ಪ್ರಚಾರ ಕೈಗೊಂಡಿದ್ದಾರೆ. ರ್ಯಾಲಿ ಪ್ರಚಾರದಲ್ಲಿ ತೊಡಗಿ ಮತದಾರರನ್ನು ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.

        ಕೋಟೆಯ ನಾಡು ಎಂದೇ ಹೆಸರು ಪಡೆದ ಚಿತ್ರದುರ್ಗ ಎಸ್‍ಸಿ ಮೀಸಲು ಕ್ಷೇತ್ರವಾಗಿದ್ದು, ಹಾಲಿ ಸಂಸದರಾದ ಚಂದ್ರಪ್ಪ ಮೈತ್ರಿ ಪಕ್ಷದಿಂದ ಸ್ವರ್ಧಿಸಿದ್ದಾರೆ. ಸಮಾಜ ಕಲ್ಯಾಣ ಮಾಜಿ ಸಚಿವರಾದ ನಾರಾಯಣ ಸ್ವಾಮಿ ಬಿಜೆಪಿಯಿಂದ ಸ್ವರ್ಧಿಸಿದ್ದು, ತಮ್ಮ ತಮ್ಮ ಪಕ್ಷಗಳ ಪ್ರಣಾಳಿಕೆಗಳನ್ನು ಮತದಾರರ ಮುಂದೆ ಇಟ್ಟು ಮತ ಪ್ರಚಾರ ಕೈಗೊಂಡಿದ್ದಾರೆ.

         ತುಮಕೂರು ಜಿಲ್ಲೆಯ ಪಾವಗಡ ಮತ್ತು ಶಿರಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಸದಸ್ಯರಿದ್ದು, ಚಿತ್ರದುರ್ಗ, ಹಿರಿಯೂರು, ಮೊಳಕಾಲ್ಮೂರು, ಹೊಸದುರ್ಗ, ಹೊಳಲ್ಕೆರೆ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿ.ಜೆ.ಪಿ ಶಾಸಕರಿದ್ದು, ಚಳ್ಳಕೆರೆಯಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ.

         ಚಿತ್ರದುರ್ಗ ಮೀಸಲು ಕ್ಷೇತ್ರವು 8 ವಿಧಾನ ಕ್ಷೇತ್ರಗಳನ್ನು ಒಳಗೊಂಡಿದ್ದು, ಒಟ್ಟು ಮತದಾರರು 17,60,383 ಇದ್ದಾರೆ. ಇದರಲ್ಲಿ ಪುರುಷರು 8,89,272, ಮಹಿಳೆಯರು 8,71,007. ಈ ಬಾರಿ 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಹಾಗೂ ಬಿ.ಜೆ.ಪಿ ಅಭ್ಯರ್ಥಿ ನಾರಾಯಣಸ್ವಾಮಿರವರಿಗೆ ಜಿದ್ದಾಜಿದ್ದಿ ಪೈಪೋಟಿ ನಡೆಯುತ್ತಿದೆ.

         ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರವಣಪ್ಪ 72,974 ಮತ ಪಡೆದಿದ್ದು, ಜೆಡಿಎಸ್ ಪಕ್ಷದ ಕೆ.ಎಂ.ತಿಮ್ಮರಾಯಪ್ಪ 72,565 ಮತ ಪಡೆದಿದ್ದರು. ಎರಡು ಪಕ್ಷದ ಅಭ್ಯರ್ಥಿಗಳು ಪಡೆದಿದ್ದ ಒಟ್ಟು ಮತ 1,45,539. ಮೈತ್ರಿ ಸರ್ಕಾರದಲ್ಲಿ ಮೈತ್ರಿ ಅಭ್ಯರ್ಥಿಗೆ ಪ್ಲಸ್ ಆಗಬಹುದು ಎಂಬುದು ಪಕ್ಷಗಳ ಮುಖಂಡರ ಲೆಕ್ಕಾಚಾರ. ಬಿ.ಜೆ.ಪಿ ಅಭ್ಯರ್ಥಿ ಬಲರಾಮ್ 14,074  ಮತ ಪಡೆದಿದ್ದು, ಪಾವಗಡ ತಾಲ್ಲೂಕಿನಲ್ಲಿ ಬಿ.ಜೆ.ಪಿ ಪಕ್ಷಕ್ಕೆ ಬುನಾದಿ ಇಲ್ಲ ಎಂಬ ಅನಿಸಿಕೆ ಇವರದ್ದಾಗಿದೆ.

          ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಈ ಹಿಂದಿನಿಂದಲೂ ಆಯ್ಕೆಯಾದವರು: 1952 ರಲ್ಲಿ ಎಸ್.ನಿಜಲಿಂಗಪ್ಪ (ಕಾಂಗ್ರೆಸ್), 1957 ರಲ್ಲಿ ಜೆ.ಎಂ.ಮಹಮದ್ ಇಮಾಂ, (ಪ್ರಜಾ ಸೋಶಿಯಲಿಸ್ಟ್ ಪಕ್ಷ), 1962ರಲ್ಲಿ ಎಸ್.ವೀರಬಸಪ್ಪ (ಕಾಂಗ್ರೆಸ್), 1967 ರಲ್ಲಿ ಜೆ.ಎಂ.ಮಹಮದ್ ಇಮಾಂ (ಸ್ವತಂತ್ರಪಾರ್ಟಿ), 1971ರಲ್ಲಿ ಕೊಂಡಜ್ಜಿಬಸಪ್ಪ (ಎನ್.ಪಿ.ಜೆ), 1977 ಮತ್ತು 80 ರಲ್ಲಿ ಕೆ.ಮಲ್ಲಣ್ಣ (ಕಾಂಗ್ರೆಸ್), 1984ರಲ್ಲಿ ಕೆ.ಎಚ್.ರಂಗನಾಥ್ (ಕಾಂಗ್ರೆಸ್), 1989 ಮತ್ತು 91ರಲ್ಲಿ ಸಿ.ಪಿ.ಮೂಡಲಗಿರಿಯಪ್ಪ (ಕಾಂಗ್ರೆಸ್), 1996ರಲ್ಲಿ ಪಿ.ಕೋದಂಡರಾಮಯ್ಯ (ಜನತಾದಳ), 1998 ರಲ್ಲಿ ಸಿ.ಪಿ.ಮೂಡಲಗಿರಿಯಪ್ಪ (ಕಾಂಗ್ರೆಸ್), 1999 ರಲ್ಲಿ ಶಶಿಕುಮಾರ್ (ಜೆಡಿಯು), 2004 ರಲ್ಲಿ ಎನ್.ವೈ.ಹನುಮಂತರಾಯಪ್ಪ (ಕಾಂಗ್ರೆಸ್), 2009 ರಲ್ಲಿ ಜನಾರ್ಧನಸ್ವಾಮಿ (ಬಿಜೆಪಿ), 2014ರಲ್ಲಿ ಬಿ.ಎನ್.ಚಂದ್ರಪ್ಪ (ಕಾಂಗ್ರೆಸ್). 2019ರಲ್ಲಿ ಯಾರಿಗೆ ಮತದಾರರು ಒಲವು ತೋರಿಸುತ್ತಾರೋ ಕಾದು ನೋಡಬೇಕಾಗಿದೆ.

       ತಾಲ್ಲೂಕು ರಾಜಕೀಯ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಪಕ್ಷಗಳಿಗೆ ಯಾವುದೇ ಚುನಾವಣೆ ನಡೆಯಲಿ ಜಿದ್ದಾಜಿದ್ದಿ ಫೈಟ್ ಇರುತ್ತಿತ್ತು. ಇಂದು ಮೈತ್ರಿ ಸರ್ಕಾರದಿಂದ ಈ ಎರಡೂ ಪಕ್ಷಗಳು ಒಂದಾಗಿ ಲೋಕಸಭಾ ಚುನಾವಣೆ ಎದುರಿಸುವಂತಹ ಕುತೂಹಲ ಸನ್ನಿವೇಷ ಸೃಷ್ಟಿಯಾಗಿದೆ.

        ಜೆ.ಡಿ.ಎಸ್ ಪಕ್ಷದ ಕೆ.ಎಂ.ತಿಮ್ಮರಾಯಪ್ಪ ಹಾಗೂ ಕಾಂಗ್ರೆಸ್ ಪಕ್ಷದ ಸಚಿವ ವೆಂಕಟರವಣಪ್ಪ ಹಾಗೂ ಪಕ್ಷಗಳ ಮುಖಂಡರು ತಾಲ್ಲೂಕಿನಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಪಕ್ಷಗಳ ಕಾರ್ಯಕರ್ತರು ಮತ್ತು ಮತದಾರರು ಹೊಂದಾಣಿಕೆ ಆಗುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಪ್ರಚಾರದಲ್ಲಿ ಎರಡೂ ಪಕ್ಷಗಳ ಮುಖಂಡರನ್ನು ಸೇರಿಸಿ ಒಂದಾಗಿ ಚುನಾವಣೆ ಎದುರಿಸಬೇಕು ಎಂಬ ಭಾವನೆ ಮೂಡಿ ಬರುತ್ತಿದ್ದು, ಎಷ್ಟರ ಮಟ್ಟಿಗೆ ಇದು ಯಶಸ್ವಿಯಾಗುತ್ತದೆ ನೋಡುವ ಕಾಲ ಸನ್ನಿಹಿತವಾಗುತ್ತದೆ.

        2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ 4,67,511 ಮತ ಪಡೆದು ಜಯಶೀಲರಾಗಿದ್ದರು. ಬಿ.ಜೆ.ಪಿ ಪಕ್ಷದ ಅಭ್ಯರ್ಥಿ ಜನಾರ್ಧನಸ್ವಾಮಿ 3,66,220 ಮತ ಪಡೆದಿದ್ದರು. ಜೆ.ಡಿ.ಎಸ್ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ 2,02,108 ಮತಗಳಿಸಿದ್ದರು.

        ಬಿ.ಎನ್ ಚಂದ್ರಪ್ಪರವರಿಗೆ ಕಳಂಕ ರಹಿತವಾಗಿ ಆಡಳಿತ ನಡೆಸಿದ ಹೆಗ್ಗಳಿಕೆ ಇದೆ. ಪಾವಗಡ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಗೆ ಒಲವು ತೋರಿಸಿದ್ದಾರೆ ಎಂಬ ವಾತಾವರಣವೂ ಇದೆ. ಇವರದೇ ಸಮ್ಮಿಶ್ರ ಸರ್ಕಾರ ಇದ್ದು, ಈ ಹಿಂದೆ ಸಹ ಕಾಂಗ್ರೆಸ್ ಸರ್ಕಾರದಲ್ಲಿ ಈ ಕ್ಷೇತ್ರದ ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸ್ವಂದಿಸಿದ್ದು, ಉಚಿತ ಪಡಿತರ ಅಕ್ಕಿ, ವಿವಿಧ ಸೌಲಭ್ಯಗಳು ರಾಜ್ಯ ಸರ್ಕಾರ ಮಾಡಿರುವ ಯೋಜನೆಗಳನ್ನು ಮತ ಪ್ರಚಾರದಲ್ಲಿ ಬಳಸಿಕೊಂಡಿದ್ದಾರೆ.

         ಬಿ.ಜೆ.ಪಿ ಅಭ್ಯರ್ಥಿ ನಾರಾಯಣಸ್ವಾಮಿ ಮಾಜಿ ಸಚಿವರಾಗಿ ಅನುಭವ ಹೊಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ಆಡಳಿತದ ಬಗ್ಗೆ ಮತದಾರರ ಗಮನ ಸೆಳೆದು ಪ್ರಚಾರದಲ್ಲಿ ತೊಡಗಿದ್ದಾರೆ. ಇಬ್ಬರು ಅಭ್ಯರ್ಥಿಗಳು ಮೀಸಲು ಕ್ಷೇತ್ರದಲ್ಲಿ ಒಂದೇ ಜಾತಿಗೆ ಸೇರಿಲ್ಲವಾದ್ದರಿಂದ ಇವರ ಜಾತಿಯ ಮತ ಲೆಕ್ಕಾಚಾರ ಸಾಧ್ಯವಿಲ್ಲ.

        ಚಿತ್ರದುರ್ಗ ಕ್ಷೇತ್ರದಲ್ಲಿ 8 ತಾಲ್ಲೂಕಿನಲ್ಲಿ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿ.ಜೆ.ಪಿ ಪಕ್ಷದ ಅಭ್ಯರ್ಥಿಗೆ ಪ್ಲಸ್ ಆದರೆ, ಕಾಂಗ್ರೆಸ್ ಅಭ್ಯರ್ಥಿಗೆ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಪಕ್ಷಗಳ ಮೈತ್ರಿ ಪ್ಲಸ್ ಆಗುತ್ತಿದೆ.

         ಪಾವಗಡ ತಾಲ್ಲೂಕಿನಲ್ಲಿ ಸತತವಾಗಿ ಬರಗಾಲದಿಂದ ತತ್ತರಿಸುತ್ತಿದ್ದರೂ ಯಾವುದೇ ಸರ್ಕಾರ ಜರೂರಾಗಿ ಶುದ್ದ ಕುಡಿಯುವ ನೀರು ಕೊಡಲು ಸಾಧ್ಯವಾಗಿಲ್ಲ. ನೀರಿಗಾಗಿ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳು ಕುಡಿಯುವ ಯೋಜನೆಗಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿಕೆ ನೀಡುತ್ತಲೇ ಕಾಲಕಳೆಯುತ್ತಿದ್ದು, ಇದುವರೆವಿಗೂ ಯಾವುದೇ ಯೋಜನೆ ಜಾರಿ ಆಗಿಲ್ಲ. ರೈಲ್ವೆ ಯೋಜನೆ ನೆನೆಗುದಿಗೆ ಬಿದ್ದಿದ್ದು, ಇದರ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ನೀಡುತ್ತಾರೆ ಎಂದು ಮತದಾರರು ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗಗಳು ಇವೆ.

        ಪಾವಗಡ ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿಗಾಗಿ ಕಂಗಾಲಾಗಿದ್ದು, ರೈತರು ಉದ್ಯೋಗಕ್ಕಾಗಿ ಪ್ರಮುಖ ಪಟ್ಟಣಗಳಿಗೆ 60 ಸಾವಿರಕ್ಕೂ ಹೆಚ್ಚು ಜನ ವಲಸೆ ಹೋಗಿರುವ ಮಾಹಿತಿ ತಿಳಿದು ಬಂದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link