ದಾವಣಗೆರೆ:
ಪ್ರಸ್ತುತ ಕನ್ನಡಿಗರಲ್ಲಿ ನಾಡು-ನುಡಿಯ ಕಾಳಜಿ ಕಣ್ಮರೆಯಾಗುತ್ತಿದ್ದು, ಕನ್ನಡ ಬರೀ ಹೆಸರಾಗಿದೆಯೇ ಹೊರತು ಇನ್ನೂ ಉಸಿರಾಗಿಲ್ಲ ಎಂದು ಸಾಹಿತಿ ಎಸ್.ಟಿ.ಶಾಂತಗಂಗಾಧರ್ ವಿಷಾಧ ವ್ಯಕ್ತಪಡಿಸಿದರು.
ನಗರದ ಎಆರ್ಜಿ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ 63ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಂಬಾಡಿ ಕಟ್ಟುವ ಮೂಲಕ ಪ್ರಖರ ವಿದ್ವಾಂಸರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಹುಟ್ಟಿದ ಮಣ್ಣಿನ ಹಾಗೂ ನಾಡಿನ ಋಣ ತೀರಿಸಿದ್ದರು. ಆದರೆ, ಇಂದಿನ ಮಕ್ಕಳು ಶಿಕ್ಷಣ ಪಡೆಯಲು ಲಂಡನ್, ಆಸ್ಟ್ರೇಲಿಯದಂತಹ ಹೊರ ರಾಷ್ಟ್ರಗಳಿಗೆ ಹಣ ಮಾಡಲು ಹೋಗುತ್ತಿರುವುದು ನಿಜಕ್ಕೂ ಈ ನಾಡಿನ ದುರಂತವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಮ್ಮ ನಾಡಿನ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ನಿರಂತರವಾಗಿ ಸಾಂಸ್ಕೃತಿಕ ದಾಳಿ ನಡೆಯುತ್ತಿದೆ. ಕೇಂದ್ರ ಸರ್ಕಾರ ಸಹ ಕನ್ನಡ ಭಾಷಿಗರನ್ನು ಮಲತಾಯಿ ಮಕ್ಕಳಂತೆ ನೋಡಿಕೊಂಡು ಬಂದಿದೆ. ಬೇರೆ ಭಾಷಿಕರು ಇತರೆ ಭಾಷೆಗಳು ಬದುಕಲಿ ಎಂದಾಗ ಮಾತ್ರ ಎಲ್ಲಾ ಭಾಷೆಗಳು ಬದುಕಲು ಸಾಧ್ಯ ಎಂದರು.
ಮಾತೃ ಭಾಷೆಯ ಉಳುವಿಗಾಗಿ ಪ್ರತಿಯೊಬ್ಬರು ಕೈಜೋಡಿಸುವುದು ಅನಿವಾರ್ಯ ಹಾಗೂ ಅವಶ್ಯಕತೆಯೂ ಆಗಿದೆ. ತಾಯಿ ಮಕ್ಕಳಿಗೆ ಹೇಗೆ ಪ್ರೀತಿಯಿಂದ ವಿದ್ಯೆ ಕಲಿಸುತ್ತಾಳೋ, ಹಾಗೆಯೇ ಕರ್ನಾಟಕ ರಾಜ್ಯ ಎಲ್ಲರನ್ನೂ ಪ್ರೀತಿಯಿಂದ ಬಾಳಲು ಕಲಿಸಿದ ನಾಡಾಗಿದೆ ಎಂದ ಅವರು, ವಿದ್ಯಾರ್ಥಿಗಳು ನಮ್ಮ ನಾಡಿನ ಪರಂಪರೆಯನ್ನು ಅರಿಯಲು ಚೆನ್ನಾಗಿ ಓದುವ ಮೂಲಕ ತಿಳಿದು ನಮ್ಮ ನಾಡಿನ ಶ್ರೇಷ್ಠತೆಯ ಬಗ್ಗೆ ಇತರರಿಗೂ ಹೇಳುವಂತಾಗಬೇಕೆಂದು ಹೇಳಿದರು.
ಭಾಷೆ ಎಂಬುದು ಒಂದು ಸಂವಹನ ಮಾಧ್ಯಮವಾಗಿದೆ. ಆದರೆ, ಇದು ಗೊತ್ತಿದ್ದರೂ ಸಹ ಪ್ರತಿಷ್ಠೆಗಾಗಿ ಕನ್ನಡ ಮಾತನಾಡುವುದಿಲ್ಲ. ನಮ್ಮದು ಅಖಂಡ ಭಾಷೆಯಾಗಿದ್ದು, ಇದಕ್ಕೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಸುಂದರ ಮತ್ತು ಬೆಳವಣಿಗೆ ಹೊಂದಿದ ಭಾಷೆಯಾಗಿದೆ. ಕನ್ನಡಿಗರಾದ ನಾವು ಹೆಮ್ಮೆಯಿಂದ ನಮ್ಮ ಭಾಷೆಯನ್ನು ಉಳಿಸಿ, ಬೆಳೆಸಬೇಕೆಂದು ಕಿವಿಮಾತು ಹೆಳಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ . ಕೆ.ಎಸ್.ಬಸವರಾಜ್ಪ, ಕೆ.ಬೊಮ್ಮಣ್ಣ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ