15 ಬಾರಿ ಜಿಲ್ಲಾ ಮಂತ್ರಿ ಭೇಟಿ, ಅಭಿವೃದ್ಧಿಗೆ ಕ್ರಮ

ದಾವಣಗೆರೆ:

        ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಅವರು ಕಳೆದ ಎಂಟು ತಿಂಗಳಲ್ಲಿ ಸುಮಾರು ಹದಿನೈದು ಬಾರಿ ಜಿಲ್ಲೆಗೆ ಭೇಟಿ ಕೊಟ್ಟು, ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆಂದು ಜೆಡಿಎಸ್ ಮುಖಂಡ ಎಂ.ಭೈರಪ್ಪ ತಿಳಿಸಿದ್ದಾರೆ.

         ಗುರುವಾರದ ಪ್ರಜಾಪ್ರಗತಿ ಸಂಚಿಕೆಯಲ್ಲಿ ಪ್ರಕಟವಾಗಿದ್ದ ‘ಜಿಲ್ಲೆಯತ್ತ ಸುಳಿಯದ ಉಸ್ತುವಾರಿ ಸಚಿವರು’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಗೊಂಡ ವರದಿಯ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಅವರು ಕಳೆದ ಎಂಟು ತಿಂಗಳಲ್ಲಿ ಹಲವು ಬಾರಿ ದಾವಣಗೆರೆಗೆ ಭೇಟಿ ನೀಡಿ, ವಿವಿಧ ಕಾರ್ಯಕ್ರಮಗಳಲ್ಲಿ ಚಾಚೂ ತಪ್ಪದೇ ಭಾಗವಹಿಸಿ, ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆಂದು ಹೇಳಿದರು.

       ಹಲವು ಬಾರಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿರುವ ಸಚಿವ ಶ್ರೀನಿವಾಸ್ ಅವರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ, ದನಕರುಗಳಿಗೆ ಮೇವಿನ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹಾಗೂ ಸ್ಮಾರ್ಟ್‍ಸಿಟಿ ಕಾಮಗಾರಿಗಳಲ್ಲಿ ಯಾವುದೇ ಲೋಪವಾಗದಂತೆ ಅಭಿವೃದ್ಧಿ ಕಾಮಗಾರಿ ನಡೆಸಬೇಕೆಂದು ಸೂಚನೆ ನೀಡಿದ್ದಾರೆಂದು ಮಾಹಿತಿ ನೀಡಿದರು.

      2018ರ ಆಗಸ್ಟ್ 8ರಂದು ಜಿಲ್ಲಾ ಪಂಚಾಯತ್‍ನಲ್ಲಿ ಅಧಿಕಾರಿಗಳ ಸಭೆ ನಡೆಸಿ, ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗದಂತೆ ಗಮನ ಹರಿಸಬೇಕೆಂದು ಸೂಚನೆ ನೀಡಿದ್ದರು. ಅಲ್ಲದೆ, ಅಕ್ಟೋಬರ್ 24ರಂದು ನಡೆದ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿದ್ದರು. ನವೆಂಬರ್ 1ರಂದು ರಾಜ್ಯೋತ್ಸವದಲ್ಲಿ ಭಾಗವಹಿಸಿ, ನಂತರ ಸ್ಮಾರ್ಟ್‍ಸಿಟಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ್ದರು.

        ನವೆಂಬರ್ 10ರಂದು ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ, ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವುದರ ಜೊತೆಗೆ, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮ ವಹಿಸಲು ತಂಡವೊಂದನ್ನು ರಚಿಸಿದ್ದರು. ನಂತರದಲ್ಲಿ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದ್ದರು. ನ.26ರಂದು ಕನಕ ಗುರುಪೀಠದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಧಿಕಾರಿಗಳೊಂದಿಗೆ ಕೆಡಿಪಿ ಸಭೆ ನಡೆಸಿದ್ದರು. ಡಿಸೆಂಬರ್ 1ರಂದು ಕ್ರೀಡಾಪಟುಗಳ ಆಹ್ವಾನದ ಮೇರೆಗೆ, ಜಗಳೂರಿನಲ್ಲಿ ನಡೆದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗಹಿಸಿದ್ದರು.

        ಜ.13ರಂದು ಚನ್ನಗಿರಿ ತಾಲೂಕಿಗೆ ಭೇಟಿ ನೀಡಿದ್ದರು. ಆ.25ರಂದು ದಾವಣಗೆರೆ ರೈಲ್ವೆ ನಿಲ್ದಾಣದ 2ನೇ ಮಹಾದ್ವಾರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಜ.26ರಂದು ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ, ಗಾಜಿನಮನೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿದ್ದರು ಎಂದು ಅವರು ವಿವರಿಸಿದರು.

        ಜಿಲ್ಲಾ ಪಂಚಾಯತ್‍ನಲ್ಲಿ ನಡೆದ ಸಭೆಯಲ್ಲಿ ಕೇವಲ 700 ಅಡಿಗೆ ಮಾತ್ರ ಕೊಳವೆಬಾವಿ ಕೊರೆಸದೇ, 1200 ಅಡಿಯ ವರೆಗೂ ನೀರು ಬರುವ ವರೆಗೂ ಕೊಳವೆಬಾವಿ ಕೊರೆಸಿ, ಅದಕ್ಕೆ ಬೇಕಾದ ಅನುದಾನವನ್ನು ನಾನು ಕೊಡಿಸಲು ಸಿದ್ಧನಿದ್ದೇನೆ ಎಂದಿದ್ದರು. ಹೀಗೆ ಜಿಲ್ಲೆಯ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕಾಮಗಾರಿಯಲ್ಲಿ ತೊಡಗಿರುವ ಸಚಿವ ಎಸ್.ಎ.ಶ್ರೀನಿವಾಸ್ ಅವರ ಬಗ್ಗೆ ಖಾಸಗಿವಾಹಿನಿಯೊಂದು, ಪ್ರಸಾರ ಮಾಡಿದ ಸ್ಟೋರಿಯಲ್ಲಿ ಸಚಿವರನ್ನು ಕುರಿತು ‘ಎಲ್ಲಿದಿಯಪ್ಪಾ ಶ್ರೀನಿವಾಸ’ ಎಂಬುದಾಗಿ ಗೇಲಿ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

       ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಎಂ.ಆನಂದ, ಹೆಚ್.ಸಿ.ಗುಡ್ಡಪ್ಪ, ಐ.ಹೆಚ್.ಭೀಮೇಶ್ ಕುಮಾರ್, ವಿ.ಕೆ.ಶಾಸ್ತ್ರೀ, ಬೆಳಲಗೆರೆ ಶಿವಣ್ಣ, ಹುಲ್ಮನಿ ಠಾಕೂರ್, ಹನುಮಂತಪ್ಪ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap