ಬೆಂಗಳೂರು
ಹದಿನೈದು ದಿನಗಳ ಹಿಂದೆ ಹೆಗ್ಗನಹಳ್ಳಿಯ ಶ್ರೀಗಂಧನಗರದಲ್ಲಿ ಕಬಾಬ್ ವ್ಯಾಪಾರಿಯ ಸ್ನೇಹಿತರ ಜೊತೆ ಸೇರಿ ಕೊಲೆಗೈದು ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಕಿಶೋರ್‍ಗೆ ರಾಜಗೋಪಾಲನಗರ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಭಾನುವಾರ ಮುಂಜಾನೆ ಪೊಲೀಸರ ನಡೆಸಿದ ಕಾರ್ಯಾಚರಣೆಯಲ್ಲಿ ಗುಂಡೇಟು ತಗುಲಿ ಬಲಗಾಲಿಗೆ ಗಾಯಗೊಂಡಿರುವ ಹೆಗ್ಗನಹಳ್ಳಿಯ ಕಿಶೋರ್(32)ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಕಳೆದ ಮೇ 12 ರಂದು ರಾತ್ರಿ 9.30ರ ವೇಳೆ ಹೆಗ್ಗನಹಳ್ಳಿಯ ಶ್ರೀಗಂಧನಗರದ 2ನೇ ಕ್ರಾಸ್‍ನ ಕಬಾಬ್ ಅಂಗಡಿಗೆ ನುಗ್ಗಿದ್ದ ಕಿಶೋರ್ ನಾಲ್ವರ ಜೊತೆ ಸೇರಿ ಮಾಲೀಕ ಉಮೇಶ್ (27) ಅವರ ಕಣ್ಣಿಗೆ ಖಾರದಪುಡಿ ಎರಚಿ, ಲಾಂಗ್, ದೊಣ್ಣೆಗಳಿಂದ ಹೊಡೆದು ಕೊಲೆಮಾಡಿ ಪರಾರಿಯಾಗಿದ್ದರು.
ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ರಾಜಗೋಪಾಲನಗರ ಪೊಲೀಸರಿಗೆ ಕೃತ್ಯದಲ್ಲಿ ಉಮೇಶ್ ಅವರ ಪತ್ನಿ ರೂಪಳ ಮೂಲವಿರುವುದು ಪತ್ತೆಯಾಗಿ ಕಾರ್ಯಾಚರಣೆ ಕೈಗೊಂಡು ಹೆಗ್ಗನಹಳ್ಳಿಯ ರವೀಶ್ ಅಲಿಯಾಸ್ ರವಿ (44), ಜಿತೇಂದ್ರ ಅಲಿಯಾಸ್ ಜಿತು (30),ಅಂಧ್ರಹಳ್ಳಿಯ ಸುಮಂತ್ ರಾಜು ಅಲಿಯಾಸ್ ಸುಮಂತ್ (29) ಹಾಗೂ ಪ್ರದೀಪ್ ಕುಮಾರ್ ಅಲಿಯಾಸ್ ಪ್ರದೀಪ್ (40)ನನ್ನು ಬಂಧಿಸಿದರು.
ಅವರ ವಿಚಾರಣೆಯಲ್ಲಿ ಹೆಗ್ಗನಹಳ್ಳಿಯ ಕಿಶೋರ್ ಪ್ರಮುಖ ಪಾತ್ರ ವಹಿಸಿರುವುದು ಕಂಡುಬಂದಿದೆ.ಕಿಶೋರ್‍ಗೆ ತೀವ್ರ ಶೋಧ ನಡೆಸಿರುವ ಪೊಲೀಸರಿಗೆ ಆತ ಪೀಣ್ಯ ಕೈಗಾರಿಕಾ ಪ್ರದೇಶದ 4ನೇ ಹಂತದಲ್ಲಿ ಬೆಳಿಗ್ಗೆ 6.30ರ ವೇಳೆ ಸ್ಕೂಟರ್‍ನಲ್ಲಿ ಹೋಗುತ್ತಿರುವುದು ಪತ್ತೆಯಾಗಿದ್ದು ತಕ್ಷಣವೇ ರಾಜಗೋಪಾಲನಗರ ಇನ್ಸ್‍ಪೆಕ್ಟರ್ ದಿನೇಶ್ ಪಾಟೀಲ್ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಪೇದೆ ಮೇಲೆ ಹಲ್ಲೆ
ಕಿಶೋರ್‍ನನ್ನು ಅಡ್ಡಗಟ್ಟಿದ ಪೇದೆ ಶಿವಸ್ವಾಮಿ ಬಂಧಿಸಲು ಹೋದಾಗ ಆತ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಈವೇಳೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಇನ್ಸ್‍ಪೆಕ್ಟರ್ ದಿನೇಶ್ ಪಾಟೀಲ್ ಅವರು ಶರಣಾಗುವಂತೆ ಸೂಚನೆ ನೀಡಿದರೂ ಮತ್ತೆ ಹಲ್ಲೆಗೆ ಮುಂದಾದಾಗ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು ಅದು ಬಳಗಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ.
ಕೂಡಲೇ ಆತನನ್ನು ಬಂಧಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ತನಿಖೆಯಲ್ಲಿ ಕೊಲೆಯಾದ ಉಮೇಶ್‍ನ ಪತ್ನಿ ರೂಪಾ ಕಳೆದ 8 ತಿಂಗಳುಗಳಿಂದ ಆರೋಪಿ ಕಿಶೋರ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಸ್ವಲ್ಪ ದಿನಗಳ ನಂತರ, ಇಬ್ಬರ ನಡುವೆ ಗಲಾಟೆ ನಡೆದು ದೂರವಾಗಿದ್ದರು.ಅಕ್ರಮ ಸಂಬಂಧದ ವೇಳೆ ಕಿಶೋರ್,ರೂಪಾಳ ಜೊತೆ ಲೈಂಗಿಕ ಕ್ರಿಯೆ ನಡೆಸಿರುವುದನ್ನು ಆಕೆಗೆ ಗೊತ್ತಿಲ್ಲದಂತೆ ಚಿತ್ರೀಕರಿಸಿಟ್ಟುಕೊಂಡಿದ್ದು, ದೂರವಾದ ನಂತರ ಆಕ್ರೋಶಗೊಂಡು ಅದನ್ನು ಫೇಸ್ ಬುಕ್ ಖಾತೆಯಲ್ಲಿ ಹರಿಬಿಟ್ಟಿದ್ದ.
ಪತ್ನಿ ಪಾತ್ರವಿಲ್ಲ
ಈ ವಿಷಯ ಗೊತ್ತಾಗಿ ರೂಪ, ಪತಿ ಉಮೇಶ್ ಜೊತೆ ಸೇರಿ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಕಿಶೋರ್‍ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಜೈಲಿನಿಂದ ಬಿಡುಗಡೆಯಾಗಿ ಬಂದ ಕಿಶೋರ್, ತನ್ನನ್ನು ಜೈಲುಪಾಲು ಮಾಡಿದ ರೂಪ ಮತ್ತು ಆಕೆಯ ಪತಿ ಉಮೇಶ್ ಮೇಲೆ ಸೇಡು ತೀರಿಸಿಕೊಂಡು ರೂಪಾಳ ಜೊತೆ ಜೀವನ ಸಾಗಿಸಲು ನಾಲ್ವರು ಆರೋಪಿಗಳ ಜೊತೆ ಸೇರಿ, ಉಮೇಶ್‍ನ ಕೊಲೆಮಾಡಿ ಪರಾರಿಯಾಗಿದ್ದ ಕೃತ್ಯಕ್ಕೆ ಪತ್ನಿ ಮೂಲವಾದರೂ ಕೊಲೆಯಲ್ಲಿ ಆಕೆಯ ಪಾತ್ರವಿಲ್ಲಎಂದು ಶಶಿಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








