ಚಿತ್ರದುರ್ಗ:
ತಾಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ರವಿಕುಮಾರ್‍ರವರ ಜಮೀನಿನಲ್ಲಿ ಕ್ರಿ.ಶ. 12-13 ನೇ ಶತಮಾನದ ಹೊಯ್ಸಳರ ಕಾಲದ ಪುರಾತನ ವೀರಗಲ್ಲು ಪತ್ತೆಯಾಗಿದ್ದು, ರಂಗಯ್ಯನಬಾಗಿಲು ಬಳಿಯಿರುವ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಗಿದೆ.
ಪತ್ತೆಯಾಗಿರುವ ವೀರಗಲ್ಲು ಮೂರು ಪಟ್ಟಿಕೆಗಳಿಂದ ಕೂಡಿದ್ದು, ಪಟ್ಟಿಕೆಯ ಮಧ್ಯಭಾಗದಲ್ಲಿ ಐದು ಸಾಲುಗಳ ಶಾಸನವಿದೆ. ಮೊದಲ ಪಟ್ಟಿಕೆಯಲ್ಲಿ ರಣರಂಗದಲ್ಲಿ ವೀರನು ವೀರಾವೇಶದಿಂದ ಹೋರಾಡುವ ಚಿತ್ರ. ತನ್ನ ಎರಡು ಕೈಯಲ್ಲಿರುವ ಭರ್ಚಿಯಿಂದ ಎಡ ಮತ್ತು ಬಲಭಾಗದ ವೈರಿಗಳಿಗೆ ಇರಿದಿರುವುದು. ಮತ್ತೊಬ್ಬ ವೈರಿ ಹೋರಾಟದಲ್ಲಿ ಮಡಿದಿರುವುದು. ಮತ್ತು ಅವನ ತಲೆ ತುಂಡರಿಸಿರುವುದು ಕಂಡು ಬಂದಿದೆ.
ಎರಡನೆ ಪಟ್ಟಿಕೆಯಲ್ಲಿ ವೀರನ ಬಲ ಮತ್ತು ಎಡ ಭಾಗದಲ್ಲಿ ದೇವತಾ ಸ್ತ್ರೀಯರು, ಅಪ್ಸರೆಯರು, ತನ್ನ ತೋಳ್ಬಲದಿಂದ ಸ್ವರ್ಗ ಲೋಕಕ್ಕೆ ವೀರರನ್ನು ಕರೆದೊಯ್ಯುತ್ತಿರುವ ಚಿತ್ರ.ಮೂರನೆ ಪಟ್ಟಿಕೆಯಲ್ಲಿ ವೀರ ಮರಣದ ನಂತರ ವೀರನು ಮುಕ್ತಿ ಹೊಂದಿದ ಚಿತ್ರ. ಒಬ್ಬ ಯತಿ ಶಿವನನ್ನು ಆರಾಧನೆ ಮಾಡುತ್ತಿರುವುದು ವೀರನು ಧ್ಯಾನಸ್ಥನಾಗಿ ಕುಳಿತಿರುವುದು. ಆಕಳು ಮತ್ತು ಕರು ಶಿವಲಿಂಗ ಸೂರ್ಯ ಮತ್ತು ಚಂದ್ರ ಚಿತ್ರಗಳು ಕಂಡು ಬರುತ್ತವೆ.
ಮಹಾಸಾಮಂತಾಧಿಪತಿ ಮಾಚನಾಯಕನ ಕಾಲದಲ್ಲಿ ಆಶ್ವೀಜ ಶುದ್ದ ವಿಜಯದಶಮಿಯಂದು ಮೃತನಾದ ವೀರನಿಗೆ ನೀಡುವ ಮತ್ತರು-ಭೂಮಿ ದಾನ ನೀಡಿದ ಉಲ್ಲೇಖವಿದೆ.ಪಟ್ಟಿಕೆಯ ಮಧ್ಯಭಾಗದಲ್ಲಿರುವ ಶಾಸನದ ಅಕ್ಷರಗಳು ಅಲ್ಲಲ್ಲಿ ಅಳಿಸಿ ಹೋಗಿದ್ದು, ಶಿವಮೊಗ್ಗದ ಇತಿಹಾಸ ಸಂಶೋಧಕರಾದ ಡಾ.ಜಗದೀಶ್ ಶಾಸನವನ್ನು ಓದಲು ಸಹಕರಿಸಿದರು ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕರಾದ ಜಿ.ಪ್ರಹ್ಲಾದ್ ತಿಳಿಸಿದ್ದಾರೆ.