ಇಂದಿರಾ ಕ್ಯಾಂಟೀನ್: ಪಾಲಿಕೆಯಿಂದ 1.08 ಕೋಟಿ ಬಾಕಿ…!!

ತುಮಕೂರು

        ಹಿಂದಿನ ಸಿದ್ದರಾಮಯ್ಯ ಸರ್ಕಾರ ರೂಪಿಸಿದ್ದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ “ಇಂದಿರಾ ಕ್ಯಾಂಟೀನ್”ಗಳ ನಿರ್ವಹಣಾ ಪರಿಸ್ಥಿತಿ ತುಮಕೂರು ನಗರದಲ್ಲಿ “ಇಂದಿರಾ ಕ್ಯಾಂಟೀನ್ ಪ್ರಿಯರಿಗೆ” ಹಾಗೂ “ಇಂದಿರಾ ಕ್ಯಾಂಟೀನ್ ಬಳಕೆದಾರರ ಪಾಲಿಗೆ” ಆಘಾತಕಾರಿಯಾಗಿದೆ. ಇಂದಿರಾ ಕ್ಯಾಂಟೀನ್‍ಗಳ ನಿರ್ವಹಣೆಗೆ ತನ್ನ ಪಾಲಿನ ಮೊತ್ತವನ್ನು ತುಮಕೂರು ಮಹಾನಗರ ಪಾಲಿಕೆಯು ಕಳೆದ ಎಂಟು ತಿಂಗಳುಗಳಿಂದ ಪಾವತಿಸಿಲ್ಲವಾದ ಕಾರಣ, ಆ ಬಾಕಿ ಮೊತ್ತವೇ ಇದೀಗ ಬರೋಬ್ಬರಿ 1.08 ಕೋಟಿಯಷ್ಟು ಆಗಿದೆ.

4 ಕ್ಯಾಂಟೀನ್, 1 ಅಡುಗೆ ಮನೆ

       ಜಿಲ್ಲಾ ಕೇಂದ್ರವೂ ಆಗಿರುವ ತುಮಕೂರು ನಗರದಲ್ಲಿ ಒಟ್ಟು ನಾಲ್ಕು ಸ್ಥಳಗಳಲ್ಲಿ ಇಂದಿರಾ ಕ್ಯಾಂಟೀನ್‍ಗಳನ್ನು ಸ್ಥಾಪಿಸಲಾಗಿದೆ. ತುಮಕೂರು ಮಹಾನಗರ ಪಾಲಿಕೆ ಆವರಣ, ಜಯಚಾಮರಾಜೇಂದ್ರ ರಸ್ತೆಯ ಬಾಳನಕಟ್ಟೆ ಪ್ರದೇಶ, ಶಿರಾಗೇಟ್ ಮತ್ತು ಕ್ಯಾತಸಂದ್ರದಲ್ಲಿ ಇಂದಿರಾ ಕ್ಯಾಂಟೀನ್‍ಗಳು 2018 ರ ಫೆಬ್ರವರಿ 24 ರಿಂದ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಬೆಳಗ್ಗೆ 7 ರಿಂದ 10 ಗಂಟೆಯವರೆಗೆ 5 ರೂಪಾಯಿಗೆ ಉಪಹಾರ, ಮಧ್ಯಾಹ್ನ 12-30 ರಿಂದ 3 ಗಂಟೆಯವರೆಗೆ 10 ರೂಪಾಯಿಗೆ ಊಟ, ಸಂಜೆ 7 ರಿಂದ ರಾತ್ರಿ 9 ಗಂಟೆಯವರೆಗೆ 10 ರೂಪಾಯಿಗೆ ಊಟವನ್ನು ಸರ್ಕಾರ ರೂಪಿಸಿರುವ `ಮೆನು’ (ಆಹಾರದ ಪಟ್ಟಿ) ಅನುಸಾರ ವಿತರಿಸಲಾಗುತ್ತಿದೆ. ಮಹಾನಗರ ಪಾಲಿಕೆ ಆವರಣದ ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿ “ಸುಸಜ್ಜಿತ ಅಡುಗೆ ಮನೆ” (ಮಾಸ್ಟರ್ ಕಿಚನ್) ಇದ್ದು, ಇಲ್ಲಿ ಆಹಾರವನ್ನು ಸಿದ್ಧಪಡಿಸಿ ಈ ನಾಲ್ಕೂ ಕ್ಯಾಂಟೀನ್‍ಗಳಿಗೆ ಸಕಾಲಕ್ಕೆ ವ್ಯವಸ್ಥಿತವಾಗಿ ಸರಬರಾಜು ಮಾಡಲಾಗುತ್ತಿದೆ.

37 ಜನ ಸಿಬ್ಬಂದಿಗಳು

        ಇಂದಿರಾ ಕ್ಯಾಂಟೀನ್ ನಿರ್ವಹಿಸುವ ಗುತ್ತಿಗೆಯನ್ನು ಮುಂಬೈನ ರಶ್ಮಿ ಹಾಸ್ಪಿಟಾಲಿಟೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಪಡೆದುಕೊಂಡಿದೆ. ಆ ಸಂಸ್ಥೆಯೇ ತುಮಕೂರಿನ ನಾಲ್ಕು ಕ್ಯಾಂಟೀನ್‍ಗಳನ್ನು ನಿರ್ವಹಿಸುತ್ತಿದೆ. ಪ್ರತಿ ಕ್ಯಾಂಟೀನ್‍ನಲ್ಲಿ ಐವರು ಸಿಬ್ಬಂದಿಗಳಿರುತ್ತಾರೆ. ಅಡುಗೆ ಮನೆ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ವಾಹನ ಚಾಲಕರು ಹೀಗೆ ಒಟ್ಟು 34 ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಆಡಳಿತ ನಿರ್ವಹಣೆಗೆ ಪ್ರತ್ಯೇಕ ಮೂವರು ನೌಕರರು ಇದ್ದು, ಒಟ್ಟಾರೆ ಸಿಬ್ಬಂದಿ ಸಂಖ್ಯೆ 37 ಆಗುತ್ತದೆ.

ಒಂದು ಹೊತ್ತಿಗೆ 2000 ಜನರಿಗೆ ಆಹಾರ ಸಿದ್ಧತೆ

          ಪ್ರತಿ ಕ್ಯಾಂಟೀನ್‍ನಲ್ಲಿ ಒಂದು ಹೊತ್ತಿಗೆ ಗರಿಷ್ಟ 500 ಜನರಿಗೆ ಆಹಾರ ಲಭಿಸಬೇಕೆಂಬುದು ಸರ್ಕಾರದ ನಿಯಮ. ಅಂದರೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟವು ಆಯಾ ಹೊತ್ತಿಗೆ 500 ಜನರಿಗೆ ಲಭಿಸಬೇಕು. ಈ ಲೆಕ್ಕಾಚಾರದ ಪ್ರಕಾರ ತುಮಕೂರಿನ ನಾಲ್ಕು ಇಂದಿರಾ ಕ್ಯಾಂಟೀನ್‍ಗಳಿಗಾಗಿ ಒಟ್ಟು 2000 ಜನರಿಗೆ ಬೆಳಗಿನ ಉಪಹಾರ, 2000 ಜನರಿಗೆ ಮಧ್ಯಾಹ್ನದ ಊಟ, 2000 ಜನರಿಗೆ ರಾತ್ರಿ ಊಟವನ್ನು ಪ್ರತಿನಿತ್ಯ ಸಿದ್ಧಪಡಿಸಿ ವಿತರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸುತ್ತವೆ.

ಪಾಲಿಕೆ ಪಾಲು ಶೇ.70

           ಇಂದಿರಾ ಕ್ಯಾಂಟೀನ್‍ನಲ್ಲಿ ವಿತರಿಸುವ ಒಂದು ಉಪಹಾರ ಮತ್ತು ಎರಡು ಊಟಗಳಿಗೆ ರಾಜ್ಯ ಸರ್ಕಾರ ಒಟ್ಟಾರೆ 57 ರೂ. ಎಂದು ದರವನ್ನು ನಿಗದಿಪಡಿಸಿದ್ದು, ಆ ಪ್ರಕಾರ ಗುತ್ತಿಗೆದಾರರಿಗೆ ಹಣವನ್ನು ಪಾವತಿ ಮಾಡುವ ವ್ಯವಸ್ಥೆ ಮಾಡಿದೆ. ಗ್ರಾಹಕರಿಗೆ ಕ್ಯಾಂಟೀನ್‍ನಲ್ಲಿ ಬೆಳಗಿನ ಉಪಹಾರಕ್ಕೆ 5 ರೂ., ಮಧ್ಯಾಹ್ನ ಹಾಗೂ ರಾತ್ರಿ ಊಟಗಳಿಗೆ ತಲಾ 10 ರೂ. ಎಂದು ದರವನ್ನು ನಿಗದಿಪಡಿಸಿದ್ದು, ಇದರಿಂದ 25 ರೂ.ಗಳು ಗುತ್ತಿಗೆದಾರರಿಗೆ ಸಂಗ್ರಹವಾಗುತ್ತದೆ. ಮಿಕ್ಕ 32 ರೂ.ಗಳಲ್ಲಿ ಶೇ.70 ರಷ್ಟು ಹಣವನ್ನು ತುಮಕೂರು ಮಹಾನಗರ ಪಾಲಿಕೆ ಹಾಗೂ ಉಳಿದ ಶೇ.30 ರಷ್ಟು ಹಣವನ್ನು ಕಾರ್ಮಿಕ ಇಲಾಖೆಯು ಸರ್ಕಾರದ ಆದೇಶದಂತೆ ಭರಿಸಬೇಕು.

          ಅದರ ಪ್ರಕಾರ ಪ್ರತಿ ತಿಂಗಳೂ ಪಾಲಿಕೆಯು ಇಂದಿರಾ ಕ್ಯಾಂಟೀನ್ ನಿರ್ವಹಣಾ ಮೊತ್ತವಾಗಿ ಸುಮಾರು 13 ಲಕ್ಷ 60 ಸಾವಿರ ರೂ.ಗಳನ್ನು ಗುತ್ತಿಗೆದಾರ ಸಂಸ್ಥೆಗೆ ಪಾವತಿಸಬೇಕು. ಆದರೆ 2018 ರ ಜೂನ್ ತಿಂಗಳಿನಿಂದ ಈವರೆಗೆ ಒಟ್ಟು ಎಂಟು ತಿಂಗಳುಗಳ ಮೊತ್ತವನ್ನು ಪಾವತಿ ಮಾಡದಿರುವುದರಿಂದ ಆ ಮೊತ್ತವು ಇದೀಗ 1 ಕೋಟಿ 8 ಲಕ್ಷ ರೂ.ಗಳನ್ನು ದಾಟುತ್ತಿದೆ ಎಂದು ಮೂಲಗಳು ಹೇಳುತ್ತವೆ.

            ಪಾಲಿಕೆಯು ಮೊದಲಿಗೆ ತನ್ನ ಪಾಲನ್ನು ಪಾವತಿ ಮಾಡಬೇಕು. ಇದನ್ನು ಅನುಸರಿಸಿ ಕಾರ್ಮಿಕ ಇಲಾಖೆಯು ತನ್ನ ಪಾಲನ್ನು ಭರಿಸುತ್ತದೆ. ಆದರೆ ಈವರೆಗೆ ಪಾಲಿಕೆ ಪಾವತಿಸದಿರುವುದರಿಂದ, ಕಾರ್ಮಿಕ ಇಲಾಖೆಯಿಂದಲೂ ಗುತ್ತಿಗೆದಾರ ಸಂಸ್ಥೆಗೆ ಹಣ ಸಂದಾಯವಾಗಿಲ್ಲವೆನ್ನಲಾಗಿದೆ.

ಮೆನು ವ್ಯತ್ಯಾಸವಿಲ್ಲ

            ಸಕಾಲಕ್ಕೆ ಹಣ ಪಾವತಿ ಆಗುತ್ತಿಲ್ಲವೆಂಬ ಕಾರಣದಿಂದ ಇಂದಿರಾ ಕ್ಯಾಂಟೀನ್‍ಗಳ ಆಹಾರ ಪಟ್ಟಿಯಲ್ಲಿ (ಮೆನು) ವ್ಯತ್ಯಾಸವೇನೂ ಆಗಿಲ್ಲ. ಮೆನು ಅನುಸರಿಸಿಯೇ ಸಾರ್ವಜನಿಕರು ಇಲ್ಲಿಗೆ ಬರುತ್ತಿದ್ದಾರೆ. ಜವಾಬ್ದಾರಿಯನ್ನು ಹೊತ್ತಿರುವ ಗುತ್ತಿಗೆದಾರ ಸಂಸ್ಥೆಯು ಈವರೆಗೆ ಯಾವುದೇ ಬದಲಾವಣೆ ಇಲ್ಲದಂತೆ ನಿರ್ವಹಣೆ ಮಾಡುತ್ತಿದೆ ಎನ್ನಲಾಗಿದೆ.

           ಇಂದಿರಾ ಕ್ಯಾಂಟೀನ್ ಅನ್ನು ಬಡವರಷ್ಟೇ ಅಲ್ಲದೆ ವಿದ್ಯಾರ್ಥಿ ಸಮುದಾಯವೂ ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದೆ. ನಗರದ ಹಾಗೂ ಪರಸ್ಥಳಗಳಿಂದ ಬರುವ ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಿಯಮದ ಪ್ರಕಾರ ಪ್ರತಿ ಕ್ಯಾಂಟೀನ್‍ನಲ್ಲೂ 500 ಉಪಹಾರ, 500 ಮಧ್ಯಾಹ್ನದ ಊಟ, 500 ರಾತ್ರಿ ಊಟ ವಿತರಣೆ ಆಗುತ್ತಿದೆ” ಎಂದೂ ಮೂಲಗಳು ತಿಳಿಸುತ್ತವೆ.

          ಗುತ್ತಿಗೆದಾರ ಸಂಸ್ಥೆಗೂ ಒಂದು ಮಿತಿಯಿರುತ್ತದೆ. ಬಾಕಿ ಮೊತ್ತ ಇದೇ ರೀತಿ ಏರುತ್ತಾ ಹೋದರೆ ಆ ಸಂಸ್ಥೆಯಾದರೂ ಏನು ಮಾಡಲಾದೀತು? ಕ್ಯಾಂಟೀನ್ ಬಂದ್ ಆಗುವುದಷ್ಟೇ” ಎಂಬ ಆತಂಕದ ಮಾತುಗಳೂ ಕೇಳಿಬರತೊಡಗಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link