ಶಿರಾ
ನಂಬಿದರೆ ನಂಬಿ ಬಿಟ್ಟರೆ ಬಿಡಿ, ಶಿರಾ ನಗರದಲ್ಲಿ ಈ ಹಿಂದೆ ಇದ್ದ ಹಳೆಯ ಪುರಸಭಾ ಕಟ್ಟಡದ ಪುಟ್ಟಮ್ಮನ ಛತ್ರದ ಹೆಸರಲ್ಲಿ ಛತ್ರದ ಅಭಿವೃದ್ಧಿಗೆಂದು ಪುರಸಭೆಯು ಸಂಗ್ರಹಿಸಿ ಬ್ಯಾಂಕೊಂದರಲ್ಲಿ ಠೇವಣಿಯಾಗಿಟ್ಟಿದ್ದ ಸುಮಾರು 1.20 ಕೋಟಿ ರೂ. ಖರ್ಚಾಗದೆ ಉಳಿದ ಸತ್ಯವೊಂದು ನಗರಸಭೆಯ ಸಭಾಂಗಣದಲ್ಲಿ ಸೋಮವಾರ ನಡೆದ ಸಾರ್ವಜನಿಕ ಆಯವ್ಯಯ ಸಭೆಯಲ್ಲಿ ಬಹಿರಂಗಗೊಂಡಿದೆ.
ಇಲ್ಲಿನ ನಗರಸಭೆಗೆ ಹರಿದು ಬರುವ ವಿವಿಧ ಯೋಜನೆಗಳ ಹಣವನ್ನೇ ಸರಿಯಾಗಿ ಸದ್ಬಳಕೆ ಮಾಡಿಕೊಳ್ಳದ ನಗರಸಭೆಯ ಅಧಿಕಾರಿಗಳಿಗೆ, ಹಳೆಯ ಪುರಸಭಾ ಕಟ್ಟಡದ ಪುಟ್ಟಮ್ಮನ ಛತ್ರದ ಅಭಿವೃದ್ಧಿಗೆಂದು ಶೇಖರಿಸಿಟ್ಟಿದ್ದ 90 ಲಕ್ಷ ರೂ.ಗಳ ಠೇವಣಿಯ ಹಣ ಯಾರ ಕಣ್ಣಿಗೂ ಬಿದ್ದಿಲ್ಲವೆಂದರೆ ನಿಜಕ್ಕೂ ಇದು ವಿಪರ್ಯಾಸವೇ ಸರಿ.
ಸೋಮವಾರ ನಡೆದ 2019-20ನೇ ಸಾಲಿನ ಸಾರ್ವಜನಿಕ ಆಯವ್ಯಯ ಮಂಡನೆಯ ಸಭೆಯಲ್ಲಿ ಅನೇಕ ಮಂದಿ ಸಾರ್ವಜನಿಕರು ಪಾಲ್ಗೊಂಡರು. ಅಧ್ಯಕ್ಷ ಅಮಾನುಲ್ಲಾಖಾನ್ ಅವರ ಅಧ್ಯಕ್ಷತೆಯಲ್ಲಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಎಸ್.ಜೆ.ರಾಜಣ್ಣ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನಗರದ ಅನೇಕ ಸಮಸ್ಯೆಗಳ ಬಗ್ಗೆ ಕೆಲ ಸದಸ್ಯರಷ್ಟೇ ಅಲ್ಲದೆ ಅನೇಕ ಮಂದಿ ನಗರದ ಪ್ರಮುಖರು ಸಭೆಯ ಗಮನ ಸೆಳೆದರು.
ನಗರದಲ್ಲಿದ್ದ ಹಳೆಯ ಪುರಸಭಾ ಕಟ್ಟಡವನ್ನು ದಂಡು ಪಾಪಣ್ಣ ಅನ್ನುವವರು ಧಾರ್ಮಿಕ ಕಾರ್ಯ ನಡೆಸಲೆಂದು ಪುರಸಭೆಗೆ ಪುಟ್ಟಮ್ಮನವರ ಹೆಸರಲ್ಲಿ ದಾನ ನೀಡಿದ್ದರು.
ಸದರಿ ಕಟ್ಟಡವನ್ನು ಧಾರ್ಮಿಕ ಕಾರ್ಯಕ್ಕೆ ಬಳಸದ ಪುರಸಭೆ ಕಚೇರಿಯನ್ನಾಗಿ ಪರಿವರ್ತಿಸಿಕೊಂಡಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿದ ದಂಡು ಪಾಪಣ್ಣ ಅವರ ವಂಶಸ್ಥರು ಸದರಿ ಕಟ್ಟಡವನ್ನು ತೆರವುಗೊಳಿಸುವಂತೆ ನ್ಯಾಯಾಲಯದ ಮೊರೆ ಹೋದಾಗ ನ್ಯಾಯಾಲಯವು ಕಟ್ಟಡ ಖಾಲಿ ಮಾಡಿ ಧಾರ್ಮಿಕ ಕಾರ್ಯಕ್ಕೆ ಬಳಸುವಂತೆ ಆದೇಶ ನೀಡಿತ್ತು.
ಇದೇ ಸಂದರ್ಭದಲ್ಲಿ ಐ.ಡಿ.ಎಸ್.ಎಂ.ಟಿ. ಯೋಜನೆಯಲ್ಲಿ ಉಳಿಕೆಯಾಗಿದ್ದ ಸುಮಾರು 90 ಲಕ್ಷ ರೂ.ಗಳನ್ನು 2005 ರಲ್ಲಿ ಸಭಾ ನಡವಳಿಕೆ ತಯಾರಿಸಿ ಪುಟ್ಟಮ್ಮನ ಛತ್ರÀ್ರದ ಅಭಿವೃದ್ಧಿಗೆಂದು ಎಸ್.ಬಿ.ಎಂ. ಬ್ಯಾಂಕಿನಲ್ಲಿ ಠೇವಣಿ ಇಡಲಾಗಿತ್ತು. ಇದೀಗ ಈ ಠೇವಣಿಯ ಹಣಕ್ಕೆ ಬಡ್ಡಿಯೂ ಸೇರಿಕೊಂಡು 1.20 ಕೋಟಿ ರೂ. ಹಣವಿದೆ. ಈ ಹಣದ ಬಗ್ಗೆ ಮಾಹಿತಿ ಕೊಡಿ ಎಂದು ಮಾಜಿ ಪುರಸಭಾಧ್ಯಕ್ಷ ಆರ್.ರಾಮು ಸಭೆಯಲ್ಲಿ ಒತ್ತಾಯಿಸಿದಾಗ ಎಲ್ಲಾ ದಾಖಲೆಗಳನ್ನು ಸಿಬ್ಬಂದಿ ತಂದಾಗ ಸದರಿ ಹಣ ಠೇವಣಿಯಾಗಿರುವುದು ಬೆಳಕಿಗೆ ಬಂದಿದೆ. ಈ ಕೂಡಲೇ ಪುಟ್ಟಮ್ಮನ ಅಭಿವೃದ್ಧಿಗೆ ಸದರಿ ಹಣವನ್ನು ಬಳಸುವಂತೆ ಸಭೆಯಲ್ಲಿದ್ದ ಸಾರ್ವಜನಿಕರು ಕೂಡ ಒತ್ತಾಯಿಸಿದ್ದು ಯಾರ ಕಣ್ಣಿಗೂ ಕಾಣದೆ ಕುಳಿತಿದ್ದ ಕೋಟಿ ರೂ. ಬೆಳಕಿಗೆ ಬಂದಿದೆ.
ಸಮಸ್ಯೆಗಳ ಆಗರ :
ಇಡೀ ನಗರಸಭಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ವ್ಯಾಪಾರ ಕೇಂದ್ರವಾದ ಶಿರಾದಲ್ಲಿ ನಗರಸಭೆಯಿಂದ ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯೇ ಆಗುತ್ತಿಲ್ಲ. ಈ ಕೂಡಲೇ ಸಂಚಾರಿ ನಿಯಮಗಳ ಬಗ್ಗೆ ಆರಕ್ಷಕ ಇಲಾಖೆಯೊಡಗೂಡಿ ಕ್ರಮ ಕೈಗೊಳ್ಳುವಂತೆ ಎಸ್.ಕೆ.ಜಿ. ಟೆಕ್ಸ್ಟೈಲ್ಸ್ ಮಾಲೀಕ ರಾಮಚಂದ್ರಗುಪ್ತ ಹಾಗೂ ಅನಂತರಾಮ್ಸಿಂಗ್ ಸಭೆಯಲ್ಲಿ ಒತ್ತಾಯಿಸಿದಾಗ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಆಯುಕ್ತ ಗಂಗಣ್ಣ ಭರವಸೆ ನೀಡಿದರು.
ದೊಡ್ಡ ಕೆರೆಯ ಕುಡಿಯುವ ನೀರಿನ ಸಂಗ್ರಹಾಗಾರಕ್ಕೆ ಕೊಳಚೆ ನೀರು ಹರಿಯುತ್ತಿದ್ದು ಈ ಬಗ್ಗೆ ಮಾಧ್ಯಮಗಳು ಎಚ್ಚರಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಕರವೇ ಗೌರವಾಧ್ಯಕ್ಷ ಅನಂತರಾಮ್ಸಿಂಗ್ ಹಾಗೂ ರಾಮಚಂದ್ರಗುಪ್ತ ಆರೋಪಿಸಿದಾಗ ನಗರೋತ್ಥಾನದ ಮೂರನೇ ಹಂತದಲ್ಲಿ ಚರಂಡಿಯ ನಿರ್ಮಾಣ ಮಾಡಲು ಕ್ರಮ ಕೈಗೊಂಡಿದ್ದು ಕೊಳಚೆ ನೀರು ಕೆರೆಗೆ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದರು.
ನಗರಸಭೆಯ ಸಿಬ್ಬಂದಿ ಕಂದಾಯದ ಹಣವನ್ನು ಸರಿಯಾಗಿ ವಸೂಲು ಮಾಡದ ಪರಿಣಾಮ ನಗರದ ಅಭಿವೃದ್ಧಿಗೆ ಹಣ ಶೇಖರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕಂದಾಯಗಳನ್ನು ಬಾಕಿ ಉಳಿಸಿಕೊಂಡು ಬರಲು ಅಧಿಕಾರಿಗಳ ನಿರಾಸಕ್ತಿಯೇ ಕಾರಣ ಎಂದು ನಗರಸಭಾ ಸದಸ್ಯ ಆರ್.ಉಗ್ರೇಶ್, ಶ್ರೀನಿವಾಸ ಗುಪ್ತ, ಪುಟ್ಟರಾಜು ಮುಂತಾದವರು ಆರೋಪಿಸಿದರು.
ನಗರಸಭೆಯ ಲೆಕ್ಕ ಅಧೀಕ್ಷಕ ವಿಶ್ವೇಶ್ವರಯ್ಯ ಸಭೆಗೆ ಮಾಹಿತಿ ನೀಡಿ, ಪ್ರಸಕ್ತ ವರ್ಷದ ಆಯವ್ಯವದಲ್ಲಿ ನೀರಿನ ಕರ 85 ಲಕ್ಷ ರೂ.ಗಳ ವಸೂಲಾತಿ ನಿಗದಿ ಮಾಡಲಾಗಿದ್ದು, ಈ ಪೈಕಿ 40 ಲಕ್ಷ ರೂ. ವಸೂಲಾಗಿದೆ. 2.5 ಲಕ್ಷ ರೂ. ಮನೆ ಕಂದಾಯ ಇದ್ದು, ಈ ಪೈಕಿ 1.40 ಲಕ್ಷ ರೂ. ವಸೂಲಾತಿ ಮಾಡಲಾಗಿದೆ ಎಂದು ತಿಳಿಸಿದರು.
ವರ್ಷ ಪೂರೈಸುತ್ತಾ ಬಂದರೂ ಕಂದಾಯ ವಸೂಲಾತಿ ಸರಿಯಾಗಿ ಮಾಡಿಲ್ಲ. ಈ ಕೂಡಲೆ ವಸೂಲಾತಿ ಕಾರ್ಯ ಕೈಗೊಳ್ಳುವಂತೆ ಸಾರ್ವಜನಿಕರು ಸಭೆಯಲ್ಲಿ ಆಗ್ರಹಿಸಿದರು. ನಗರಸಭಾ ಸದಸ್ಯರಾದ ಡಿ.ಮಂಜುನಾಥ್, ಬಸವರಾಜು, ನಟರಾಜು, ದಲಿತ ಮುಖಂಡ ಲಕ್ಷ್ಮೀಕಾಂತ್, ಮಾರುತೀಶ್ ಸೇರಿದಂತೆ ನಗರದ ಪ್ರಮುಖರು ಸಭೆಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








