ತುಮಕೂರು : ಟ್ರಾಫಿಕ್ ನಿಯಮ ಉಲ್ಲಂಘನೆ ; 1.32 ಕೋಟಿ ದಂಡ ಸಂಗ್ರಹ!

ತುಮಕೂರು

ವಿಶೇಷ ವರದಿ: ಆರ್.ಎಸ್.ಅಯ್ಯರ್

      ತುಮಕೂರು ನಗರವೊಂದರಲ್ಲೇ 2019 ರ ಜನವರಿ 1 ರಿಂದ ಜೂನ್ 30 ರವರೆಗಿನ ಆರು ತಿಂಗಳ ಅವಧಿಯಲ್ಲಿ ಟ್ರಾಫಿಕ್ ನಿಯಮಗಳ ಉಲ್ಲಂಘನೆಯ 68,653 ಪ್ರಕರಣಗಳು ದಾಖಲಾಗಿ, ಒಟ್ಟು 1,32,99,800 ರೂ.ಗಳು ದಂಡ ರೂಪದಲ್ಲಿ ಸಂಗ್ರಹವಾಗಿದೆಯೆಂಬ ಅಂಕಿ-ಅಂಶವು ಪ್ರಜ್ಞಾವಂತರ ವಲಯದಲ್ಲಿ ಕಳವಳದ ಚರ್ಚೆಗೆ ಎಡೆಮಾಡಿದೆ.

      ತುಮಕೂರು ನಗರ ವೃತ್ತದಲ್ಲಿರುವ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಕಚೇರಿಯ ಮೂಲಕ ಹಾಗೂ ಪೂರ್ವ ಮತ್ತು ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಗಳೆರಡರಿಂದ ಇಷ್ಟೊಂದು ದೊಡ್ಡ ಮೊತ್ತದ ದಂಡ ಸಂಗ್ರಹವಾಗಿದೆ.ಬೆಳೆಯುತ್ತಿರುವ ತುಮಕೂರು ನಗರದಲ್ಲಿ ದಿನೇ ದಿನೇ ಜನ-ವಾಹನ ಸಂಚಾರ ಊರ್ದ್ವ ಮುಖವಾಗಿದೆ. ಜಿಲ್ಲಾ ಕೇಂದ್ರವಾದ ತುಮಕೂರು ನಗರದಲ್ಲಿ ಮಹಾನಗರ ಪಾಲಿಕೆಯಿದೆ. ಪಾಲಿಕೆಯ ವ್ಯಾಪ್ತಿಯೇ ಒಂದು ವಿಧಾನ ಸಭಾ ಕ್ಷೇತ್ರವಾಗಿದೆ. ಇವೆಲ್ಲದರ ಜೊತೆಗೆ ಇದೀಗ `ಸ್ಮಾರ್ಟ್‍ಸಿಟಿ’ ಆಗುತ್ತಿರುವ ಹೆಗ್ಗಳಿಕೆ ಇದ್ದರೂ, ತುಮಕೂರು ನಗರದಲ್ಲಿ ಟ್ರಾಫಿಕ್ ನಿಯಮಗಳ ಉಲ್ಲಂಘನೆಯು ಎಗ್ಗಿಲ್ಲದಂತೆ ಸಾಗಿರುವುದು ಈ ದಂಡ ಸಂಗ್ರಹದ ಅಂಕಿ ಅಂಶಗಳಿಂದ ಸುಸ್ಪಷ್ಟವಾಗಿ ಕಾಣುತ್ತಿದೆ.

ಸ್ಥಳದಂಡವೇ 1.20 ಕೋಟಿ:

      ಸಂಗ್ರಹವಾಗಿರುವ 1,32,99,800 ರೂ. ಒಟ್ಟು ದಂಡದ ಮೊತ್ತದಲ್ಲಿ `ಸ್ಥಳ ದಂಡ’ (ಸ್ಪಾಟ್ ಫೈನ್)ವಾಗಿಯೇ 1,20,94,100 ರೂ. ಸಂಗ್ರಹವಾಗಿದೆಯೆಂಬುದು ಗಮನಾರ್ಹ. ಇದರೊಂದಿಗೆ ನ್ಯಾಯಾಲಯಕ್ಕೆ ದಂಡದ (ಕೋರ್ಟ್ ಫೈನ್) ರೂಪದಲ್ಲಿ 12,05,700 ರೂ. ಸಂದಾಯವಾಗಿದೆ.

ಮಾಹೆಯಾನ ಕೇಸು, ದಂಡ

       ಜನವರಿಯಿಂದ ಜೂನ್ ಅಂತ್ಯದವರೆಗೆ ದಾಖಲಿಸಲಾಗಿರುವ ಮೊಕದ್ದಮೆಗಳ ಸಂಖ್ಯೆ ಹಾಗೂ ಅವುಗಳಿಂದ ಸಂಗ್ರಹವಾಗಿರುವ ಸ್ಥಳದಂಡ, ಕೋರ್ಟ್ ಫೈನ್ ಮತ್ತು ಒಟ್ಟು ಮೊತ್ತದ ವಿವರ ಮಾಹೆಯಾನ ಈ ಕೆಳಕಂಡಂತಿದೆ:-

ಪ್ರಕರಣಗಳ ಸಂಖ್ಯೆ:-

   ಜನವರಿ-5.568; ಫೆಬ್ರವರಿ-10,615; ಮಾರ್ಚ್-12,077; ಏಪ್ರಿಲ್-9,085; ಮೇ- 15,956; ಜೂನ್-15,352.

ದಂಡ ಸಂಗ್ರಹ:-

      ಜನವರಿಯಲ್ಲಿ 9,18,100 ರೂ. ಸ್ಥಳದಂಡ, 1,07,00 ರೂ. ಕೋರ್ಟ್ ಫೈನ್ ಸೇರಿ 10,25,100 ರೂ. ಸಂಗ್ರಹವಾಗಿದೆ. ಫೆಬ್ರವರಿಯಲ್ಲಿ 17,38,500 ರೂ. ಸ್ಥಳದಂಡ, 2,86,900 ರೂ. ಕೋರ್ಟ್ ಫೈನ್ ಸೇರಿ 20,25,400 ರೂ. ಸಂಗ್ರಹವಾಗಿದೆ. ಮಾರ್ಚ್‍ನಲ್ಲಿ 20,38,100 ರೂ. ಸ್ಥಳದಂಡ, 2,37,100 ರೂ. ಕೋರ್ಟ್ ಫೈನ್ ಸೇರಿ 22,75,200 ರೂ. ಸಂಗ್ರಹಗೊಂಡಿದೆ. ಏಪ್ರಿಲ್‍ನಲ್ಲಿ 16,66,000 ರೂ. ಸ್ಥಳದಂಡ, 1,21,000 ರೂ. ಕೋರ್ಟ್ ಫೈನ್ ಸೇರಿ 17,87,000 ರೂ. ಸಂಗ್ರಹವಾಗಿದೆ. ಮೇನಲ್ಲಿ 28,21,600 ರೂ. ಸ್ಥಳದಂಡ, 3,42,400 ರೂ. ಕೋರ್ಟ್ ಫೈನ್ ಸೇರಿ 31,64,000 ರೂ. ಸಂಗ್ರಹಗೊಂಡಿದೆ. ಜೂನ್ ಮಾಹೆಯಲ್ಲಿ 29,11,800 ರೂ. ಸ್ಥಳದಂಡ, 1,11,300 ರೂ. ಕೋರ್ಟ್ ಫೈನ್ ಸೇರಿ 30,23,100 ರೂ. ಸಂಗ್ರಹವಾಗಿದೆ.

2017, 2018 ರ ಅಂಕಿಅಂಶ:

       ತುಮಕೂರು ನಗರ ವೃತ್ತದಲ್ಲಿ 2017 ಮತ್ತು 2018 ರಲ್ಲಿ ಟ್ರಾಫಿಕ್ ನಿಯಮೋಲ್ಲಂಘನೆಗಾಗಿ ದಾಖಲಾಗಿದ್ದ ಪ್ರಕರಣಗಳ ಸಂಖ್ಯೆ ಹಾಗೂ ಸಂಗ್ರಹವಾಗಿದ್ದ ದಂಡದ ಮೊತ್ತದ ವಿವರವೂ ಈಗಿನ ಅಂಕಿಅಂಶದೊಡನೆ ಹೋಲಿಕೆಗೆ ಅರ್ಹವಾಗಿದೆ.2017 ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೆ 1,06,878 ಪ್ರಕರಣಗಳು ದಾಖಲಾಗಿದ್ದು, ಒಟ್ಟು 1,68,82,800 ರೂ. ದಂಡ ಸಂಗ್ರಹವಾಗಿತ್ತು.
2018 ರಲ್ಲಿ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೆ 98,525 ಪ್ರಕರಣಗಳು ದಾಖಲಾಗಿದ್ದು, ಒಟ್ಟು 1,81,15,200 ರೂ. ದಂಡ ಸಂಗ್ರಹಗೊಂಡಿತ್ತು.

       ಈ ವರ್ಷ ಅಂದರೆ 2019 ರಲ್ಲಿ ಜನವರಿಯಿಂದ ಜೂನ್‍ವರೆಗಿನ ಕೇವಲ 6 ತಿಂಗಳ ಅವಧಿಯಲ್ಲೇ 68,653 ಮೊಕದ್ದಮೆಗಳು ದಾಖಲಾಗಿ, ದಂಡದ ಮೊತ್ತವು 1,32,99,800 ರೂ. ಆಗಿರುವುದನ್ನು ನೋಡಿದಾಗ, ಈ ವರ್ಷಾಂತ್ಯದ ಹೊತ್ತಿಗೆ ಪ್ರಕರಣಗಳ ಸಂಖ್ಯೆ ಮತ್ತು ದಂಡದ ಮೊತ್ತ ಕಳೆದೆರಡು ವರ್ಷಗಳಿಗಿಂತ ಅಧಿಕಗೊಳ್ಳಬಹುದೆಂದು ಲೆಕ್ಕ ಹಾಕಲಾಗುತ್ತಿದೆ.

145 ಅಪಘಾತ, 24 ಸಾವು:

      ಮತ್ತೊಂದು ಕಳವಳದ ಸಂಗತಿಯೆಂದರೆ, ಇದೇ ವರ್ಷದ ಈ 6 ತಿಂಗಳುಗಳ ಅವಧಿಯಲ್ಲಿ ತುಮಕೂರು ನಗರದಲ್ಲಿ ಒಟ್ಟು 145 ಅಪಘಾತ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 24 ಜನರು ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೊಂಡಿದ್ದಾರೆ. 133 ಜನರು ಗಾಯಗೊಂಡಿದ್ದಾರೆಂಬುದು ಸಹ ಗಮನ ಸೆಳೆಯುತ್ತಿದೆ.

ನಿಯಮ ಪಾಲನೆಗೆ ಸೂಚನೆ :

     ಈ ಮಧ್ಯ  ಟ್ರಾಫಿಕ್ ನಿಯಮಗಳ ಪಾಲನೆಗೆ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯು ಕಿವಿಮಾತು ಹೇಳುತ್ತಿದೆ. “ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡಬೇಡಿ. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನಗಳನ್ನು ಚಾಲನೆಗೆ ನೀಡಬೇಡಿ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ. ವಾಹನ ಸವಾರಿ ಮಾಡುವಾಗ ಅಥವಾ ಚಾಲನೆ ಮಾಡುವಾಗ ಮೊಬೈಲ್ ಫೋನ್‍ನಲ್ಲಿ ಮಾತನಾಡಬೇಡಿ. ಪಾನಮತ್ತರಾಗಿ ವಾಹನ ಚಾಲನೆ/ಸವಾರಿ ಮಾಡದಿರಿ. ವೃತ್ತಗಳಲ್ಲಿ ಸಿಗ್ನಲ್ ಜಂಪ್ ಮಾಡಬೇಡಿ.

     ಅತಿವೇಗದಿಂದ ವಾಹನಚಾಲನೆ ಮಾಡದಿರಿ. ವಾಹನ ತಿರುವು ಪಡೆಯುವಾಗ ಕಡ್ಡಾಯವಾಗಿ ಇಂಡಿಕೇಟರ್ ಬಳಸಿ. ರಸ್ತೆ ದಾಟುವ ಪಾದಚಾರಿಗಳಿಗೆ ಆದ್ಯತೆ ನೀಡಿ. ಜಂಕ್ಷನ್‍ಗಳಲ್ಲಿ, ತಿರುವುಗಳಲ್ಲಿ, ರಸ್ತೆಯಲ್ಲಿ ಇತರರಿಗೆ ತೊಂದರೆ ಆಗುವಂತೆ ವಾಹನಗಳನ್ನು ನಿಲುಗಡೆ ಮಾಡಬೇಡಿ. ವಾಹನ ಚಾಲಕರು ಕಡ್ಡಾಯವಾಗಿ ಸೀಟ್‍ಬೆಲ್ಟ್ ಧರಿಸಬೇಕು. ವಾಹನ ಚಾಲಕರು/ಸವಾರರು ಲೇನ್ ಶಿಸ್ತನ್ನು ಪಾಲಿಸಬೇಕು. ಅವಶ್ಯಕತೆ ಇದ್ದರೆ ಮಾತ್ರ ಹಾರನ್ ಉಪಯೋಗಿಸಿ. ವಾಹನಗಳಿಗೆ ವಿಮೆ ಇರಲಿ” ಎಂಬಿತ್ಯಾದಿ ಟ್ರಾಫಿಕ್ ನಿಯಮಗಳನ್ನು ಪಾಲಿಸುವಂತೆ ಪೊಲೀಸ್ ಇಲಾಖೆಯು ಸೂಚಿಸುತ್ತಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link