ದಾವಣಗೆರೆ :
ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ದಾವಣಗೆರೆ ಶಾಲೆ ಆರಂಭವಾಗಿ ಒಂದೇ ವರ್ಷದಲ್ಲಿ 1.75 ಕೋಟಿ ರೂ. ಲಾಭ ಗಳಿಸಿದೆ ಎಂದು ಶಾಖೆಯ ಆಡಳಿತ ಮಂಡಳಿ ಅಧ್ಯಕ್ಷ ಮಲ್ಲೋಕಾರಾಧ್ಯ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017ರ ಡಿಸೆಂಬರ್ 14ರಂದು ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ದಾವಣಗೆರೆ ಶಾಖೆಯನ್ನು ಆರಂಭಿಸಲಾಗಿತ್ತು. ಇಂದಿಗೆ ಶಾಖೆ ಆರಂಭವಾಗಿ ಒಂದು ವರ್ಷ ಪೂರೈಸಿದ್ದು, ಈ ಅವಧಿಯಲ್ಲಿ 23.40 ಕೋಟಿ ರೂ. ಠೇವಣಿ ಸಂಗ್ರಹಿಸಿ, ಕೇಂದ್ರ ಶಾಖೆಯಿಂದ ಸುಮಾರು 23 ಕೋಟಿ ರೂ. ಸಾಲ ಪಡೆದು 56.15 ಕೋಟಿ ರೂ. ಸಾಲ ವಿತರಿಸಿ, 1.75 ಕೋಟಿ ರೂ. ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.
ಒಂದು ವರ್ಷದ ಅವಧಿಯಲ್ಲಿ 185 ಕೋಟಿ ರೂ. ವಹಿವಾಟು ನಡೆಸಿದ್ದು, ಸದಸ್ಯರ ಠೇವಣಿಗಳಿಗೆ ಆಕರ್ಷಕ ಬಡ್ಡಿ ದರ ನೀಡಲಾಗುತ್ತಿದೆ. 2 ವರ್ಷದ ಠೇವಣಿಗೆ ಶೇ.10.50 ರಷ್ಟು, ಹಿರಿಯ ನಾಗರೀಕರಿಗೆ ಶೇ.11 ರಷ್ಟು ಬಡ್ಡಿ ದರ ನೀಡಲಾಗುತ್ತಿದೆ. ಅಲ್ಲದೆ, ಮಾಸಿಕ ಕಂತಿನ ಠೇವಣಿಗೆ ಶೇ.10 ರಷ್ಟು ಬಡ್ಡಿ ದರ ನೀಡುತ್ತಿದ್ದು, ಭಾಗ್ಯಜ್ಯೋತಿ ಠೇವಣಿಯಲ್ಲಿ ಹಣ ತೊಡಗಿಸುವವರಿಗೆ 7 ವರ್ಷಗಳಲ್ಲಿ ದ್ವಿಗುಣ ಹಣ ನೀಡಲಾಗುವುದು ಎಂದರು.
ಬಂಗಾರದ ಸಾಲಕ್ಕೆ ಶೇ.12 ರಷ್ಟು, ವಾಹನ ಮತ್ತು ಗೃಹ ಸಾಲಗಳಿಗೆ ಶೇ.13 ರಷ್ಟು ಬಡ್ಡಿ ದರವಿದೆ. ಆದ್ದರಿಂದ ಸಾರ್ವಜನಿಕರು ನಮ್ಮ ಬ್ಯಾಂಕ್‍ನಲ್ಲಿ ಖಾತೆ ಹೊಂದುವ ಮೂಲಕ ಬ್ಯಾಂಕ್‍ನ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶಾಖಾ ವ್ಯವಸ್ಥಾಪಕ ಸುನೀಲ್ ರಾನಡೆ, ಲೆಕ್ಕ ಪರಿಶೋಧಕ ಎಸ್.ಎಸ್.ಹುರಕಡ್ಲಿ, ಡಾ.ಮೋಹನ್ ನಾಡಿಗೇರ್, ಎಸ್.ಹೆಚ್.ಕಲ್ಲೇಶಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ