ತುಮಕೂರು: 1.93 ಲಕ್ಷ ರೂ. ಮೌಲ್ಯದ ಅಫೀಮು ವಶ

ತುಮಕೂರು

      ಶಾಲೆಯೊಂದರ ಮುಂದೆ ತಳ್ಳುವ ಗಾಡಿಯಲ್ಲಿ ಐಸ್ ಕ್ರೀಂ ಮಾರಾಟ ಮಾಡುವ ವ್ಯಕ್ತಿಯನ್ನು ಬಂಧಿಸುವ ಮೂಲಕ, ಆತನ ಬಳಿ ಇದ್ದ ಸರಿಸುಮಾರು 1 ಲಕ್ಷ 93 ಸಾವಿರ ರೂ. ಮೌಲ್ಯದ ಮಾದಕ ಪದಾರ್ಥವಾದ ಅಫೀಮನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

      ತುಮಕೂರು ನಗರದ ಹೊರಪೇಟೆ ವೃತ್ತದ ಬಳಿ ಇರುವ ಸರ್ಕಾರಿ ಬಾಲಕರ ಕಿರಿಯ ಪ್ರಾಥಮಿಕ ಪಾಠಶಾಲೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ತಳ್ಳುವ ಗಾಡಿಯಲ್ಲಿ ಬಾದಾಮಿ ಹಾಲು/ಐಸ್ ಕ್ರೀಂ ಮಾರಾಟ ಮಾಡುತ್ತಿದ್ದ ರಾಜಾಸ್ಥಾನ್ ಮೂಲದ ಕಿಶನ್ ಲಾಲ್ (41) ಎಂಬಾತನನ್ನು ಫೆ.25 ರಂದು ಸಂಜೆ ತುಮಕೂರು ನಗರದ ಪೊಲೀಸರು ಬಂಧಿಸಿದಾಗ, ಬೆಚ್ಚಿಬೀಳಿಸುವಂತಹ ಈ ಅಫೀಮು ದಂಧೆ ಬೆಳಕಿಗೆ ಬಂದಿದೆ.

      ತುಮಕೂರು ನಗರ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಬಿ.ನವೀನ್ ಮತ್ತು ನಗರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ವಿಜಯಲಕ್ಷ್ಮೀ ಮತ್ತು ಸಿಬ್ಬಂದಿಗಳಾದ ಪ್ರಸನ್ನಕುಮಾರ್, ನಾಗರಾಜ್, ಜಗದೀಶ್, ರಮೇಶ್, ಮಂಜುನಾಥ್, ರಾಮಚಂದ್ರಯ್ಯ, ನವೀನ್ ಕುಮಾರ್, ಸಿದ್ದೇಶ್ವರಯ್ಯ ಅವರು ತಮಗೆ ದೊರೆತ ಮಾಹಿತಿ ಅನುಸರಿಸಿ ದಾಳಿ ನಡೆಸಿದ್ದರು. ಆರೋಪಿ ಕಿಶನ್ ಲಾಲ್‍ನನ್ನು ಬಂಧಿಸಿದಾಗ, ಆತ ಅಕ್ರಮವಾಗಿ ಮಾದಕ ವಸ್ತುವಾದ ಅಫೀಮನ್ನು ಮಾರಾಟ ಮಾಡುತ್ತಿದ್ದುದು ಹಾಗೂ ಅದನ್ನು ಸಂಗ್ರಹಿಸಿಟ್ಟಿದ್ದುದು ಬೆಳಕಿಗೆ ಬಂದಿದೆ. ಅದೇ ಸ್ಥಳದಲ್ಲಿದ್ದ ಆತನ ಮನೆಯಲ್ಲೂ ಸಂಗ್ರಹಿಸಿದ್ದುದು ಗೊತ್ತಾಗಿದೆ. ಪೊಲೀಸರು ತಪಾಸಣೆ ನಡೆಸಿ ಆತನಿಂದ 1 ಕೆಜಿ ಹಾಗೂ 140 ಗ್ರಾಂಗಳಷ್ಟು ಅಫೀಮನ್ನು ವಶಪಡಿಸಿಕೊಂಡಿದ್ದಾರೆ. ಆತನ ವಿರುದ್ಧ ನಾರ್ಕೊಟಿಕ್ ಡ್ರಗ್ಸ್ ಅಂಡ್ ಸೈಕೋಟ್ರಾಪಿಕ್ ಸಬ್ಸ್‍ಟಾನ್ಸಸ್ ಆಕ್ಟ್-1985 (ಎನ್.ಡಿ.ಪಿ.ಎಸ್.) ರ ಕಲಂ 17 (ಬಿ) ಅನ್ವಯ ಮೊಕದ್ದಮೆ ದಾಖಲಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಜಿಲ್ಲೆಯಲ್ಲಿ ಇದೇ ಮೊದಲು

      ತುಮಕೂರು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಫೀಮು ದಂದೆಯು ಪತ್ತೆಯಾಗಿದೆಯೆಂದು ಪೊಲೀಸ್ ವಲಯದಲ್ಲಿ ಹೇಳಲಾಗುತ್ತಿದೆ. ಗಾಂಜಾ ಸೊಪ್ಪು/ಪುಡಿ ಪತ್ತೆಯಾಗುವುದನ್ನು ಬಿಟ್ಟರೆ ಅಫೀಮು ದಂದೆ ಜಿಲ್ಲೆಯಲ್ಲಿ ಇತ್ತೀಚೆಗೆ ಈವರೆಗೆ ಬೆಳಕಿಗೆ ಬಂದಿರಲಿಲ್ಲ ಎನ್ನಲಾಗಿದೆ.

ರಾಜಾಸ್ಥಾನದಿಂದ ಪೂರೈಕೆ

    ಗಸಗಸೆ ಮಾದರಿಯ ಅಫೀಮು ಪುಡಿಯನ್ನು ಖರೀದಿಸಲು ರಾಜಾಸ್ಥಾನ್ ಮೂಲದವರು ಈತನ ಬಳಿಗೆ ಬರುತ್ತಿದ್ದರೆಂದೂ, ಈತನು 50 ಗ್ರಾಂ ಅಫೀಮು ಪುಡಿಯನ್ನು 8,500 ರೂ.ಗಳಿಗೆ ಮಾರಾಟ ಮಾಡುತ್ತಿದ್ದನೆಂದೂ, ರಾಜಾಸ್ಥಾನದಿಂದ ಈತನಿಗೆ ಅಫೀಮು ಪುಡಿ ಸರಬರಾಜಾಗುತ್ತಿತ್ತೆಂದೂ ಹೇಳಲಾಗುತ್ತಿದೆ. ಈತ ಮಾರುತ್ತಿದ್ದ ದರದನ್ವಯ ಈತನಿಂದ ಪೊಲೀಸರು ವಶಪಡಿಸಿಕೊಂಡಿರುವ ಅಫೀಮಿಗೆ ಒಟ್ಟು ಸುಮಾರು 1 ಲಕ್ಷ 93 ಸಾವಿರ ರೂ. ಮೌಲ್ಯ ಆಗುತ್ತದೆಂದು ಅಂದಾಜಿಸಲಾಗಿದೆ.

ಮೂರು ವಿಧದಲ್ಲಿ ಬಳಕೆ

     ಅಫೀಮು ಪುಡಿಯ ಸೇವನೆಯು ಒಂದು ರೀತಿಯ ನಶೆಯನ್ನು ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ಅದರ ಚಟಕ್ಕೆ ಬಿದ್ದವರು ಇದನ್ನು ಖರೀದಿಸಿ ನೀರಿನಲ್ಲಿ ಬೆರೆಸಿ ಅದನ್ನು ಸೇವಿಸುವ ಅಥವಾ ದ್ರವರೂಪದಂತೆ ಮಾಡಿ ಅದನ್ನು ದೇಹಕ್ಕೆ ಇಂಜೆಕ್ಟ್ ಮಾಡಿಕೊಳ್ಳುವ ಅಥವಾ ಬೀಡಿ/ಸಿಗರೇಟ್ ಒಳಭಾಗ ಅದರ ಪುಡಿ ಹಾಕಿ ಆ ಹೊಗೆಯನ್ನು ಸೇವಿಸುವ ಮೂಲಕ ಬಳಕೆ ಮಾಡುತ್ತಿದ್ದರೆನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link