ಗೂಳೂರಿನಲ್ಲಿ ಮಿನಿವಿಧಾನಸೌಧಕ್ಕೆ 10 ಕೊಟಿ ರೂ. ಮಂಜೂರು

ತುಮಕೂರು

     ತುಮಕೂರು ತಾಲ್ಲೂಕು ಗೂಳೂರಿನಲ್ಲಿ ಮಿನಿವಿಧಾನಸೌಧ ನಿರ್ಮಾಣಕ್ಕೆ ಸರ್ಕಾರ 10 ಕೊಟಿ ರೂ.ಗಳ ಅನುಮೋದನೆ ನೀಡಿದೆ. ಮಿನಿವಿಧಾನಸೌಧ ಪೂರ್ಣಗೊಂಡ ನಂತರ ತುಮಕೂರು ಗ್ರಾಮಾಂತರದ ತಾಲ್ಲೂಕು ಮಟ್ಟದ ಆಡಳಿತ ತುಮಕೂರು ನಗರದಿಂದ ಇಲ್ಲಿಗೆ ಸ್ಥಳಾಂತರಗೊಳ್ಳುತ್ತದೆ. ಇದರೊಂದಿಗೆ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರವನ್ನು ಪ್ರತ್ಯೇಕ ತಾಲ್ಲೂಕು ಮಾಡಬೇಕೆಂಬ ಬೇಡಿಕೆಗೆ ಸರ್ಕಾರದಿಂದ ಆರಂಭಿಕ ಸ್ಪಂದನೆ ದೊರೆತಂತಿದೆ.

      ಆದರೆ, ಗ್ರಾಮಾಂತರ ಪ್ರದೇಶವನ್ನು ಪ್ರತ್ಯೇಕ ತಾಲ್ಲೂಕು ಮಾಡುವ ಕುರಿತು ಸರ್ಕಾರ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಅದಕ್ಕೆ ಮೊದಲು ಗ್ರಾಮಾಂತರ ಕ್ಷೇತ್ರದ ಆಡಳಿತವನ್ನು ತುಮಕೂರು ನಗರ ಕ್ಷೇತ್ರದಿಂದ ಪ್ರತ್ಯೇಕಿಸಿ, ಗೂಳೂರಿನಲ್ಲಿ ಮಿನಿವಿಧಾನಸೌಧ ನಿರ್ಮಿಸಿ, ಗ್ರಾಮಾಂತರ ಕ್ಷೇತ್ರದ ತಾಲ್ಲೂಕು ಆಡಳಿತ ಕೇಂದ್ರವನ್ನು ಗೂಳೂರಿನಲ್ಲಿ ಸ್ಥಾಪಿಸಿ, ಆ ವ್ಯಾಪ್ತಿಗೆ ಸಂಬಂಧಿಸಿದ ಇಲಾಖೆಗಳ ತಾಲ್ಲೂಕು ಕಛೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸುವ ಪ್ರಯತ್ನಕ್ಕೆ ಸರ್ಕಾರ ಹಸಿರು ನಿಶಾನೆ ನೀಡಿದಂತಾಗಿದೆ.

       ಗೂಳೂರಿನಲ್ಲಿ ಮಿನಿ ವಿಧಾನ ಸೌಧ ನಿರ್ಮಿಸಲು ರಾಜ್ಯ ಸಕಾರ 10 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಗೂಳೂರಿನ ಶೂಲದ ಆಂಜನೇಯ ದೇವಸ್ಥಾನದ ಬಳಿ ಮಿನಿವಿಧಾನಸೌಧ ನಿರ್ಮಾಣ ಮಾಡಲಾಗುತ್ತದೆ. ಇಲ್ಲಿ 7 ಎಕರೆ ಸರ್ಕಾರಿ ಜಮೀನು ಇದ್ದು ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕಂದಾಯ ಇಲಾಖೆಗೆ ಜಮೀನು ಹಸ್ತಾಂತರಿಸಿದರೆ ಮಿನಿವಿಧಾನಸೌಧ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಲೋಕಸಭಾ ಚುನಾವಣೆಯ ನೀತಿಸಂಹಿತೆ ಮುಗಿದ ನಂತರ ಜಿಲ್ಲಾಧಿಕಾರಿಗಳು ಮಿನಿವಿಧಾನಸೌಧಕ್ಕೆ ಅಗತ್ಯ ಜಮೀನು ಹಸ್ತಾಂತರಿಸುವ ಸಂಬಂಧ ಕ್ರಮತೆಗೆದುಕೊಳ್ಳುವರು ಎಂದು ಶಾಸಕ ಡಿ ಸಿ ಗೌರಿಶಂಕರ್ ಹೇಳಿದರು.

      ತುಮಕೂರು ನಗರ ವಿಸ್ತಾರಗೊಂಡು ಬೆಳವಣಿಗೆಯಾಗುತ್ತಿದೆ. ನಗರದಲ್ಲಿ 32 ವಾರ್ಡ್‍ಗಳು, ಸುಮಾರು ಮೂರೂವರೆ ಲಕ್ಷದಷ್ಟು ಜನಸಂಖ್ಯೆ ಇದೆ, ಇದರ ಜೊತೆಗೆ 7 ಹೋಬಳಿ ಒಳಗೊಂಡ ಗ್ರಾಮಾಂತರ ಪ್ರದೇಶವೂ ತುಮಕೂರು ತಾಲ್ಲೂಕಿಗೆ ಸೇರಿರುವುದರಿಂದ ತಾಲ್ಲೂಕು ಆಡಳಿತಕ್ಕೆ ಒತ್ತಡ ಹೆಚ್ಚಿದೆ. ಆಡಳಿತ ಒತ್ತಡ ಕಡಿಮೆ ಮಾಡಲು ಹಾಗೂ ಆಡಳಿತ ಸರಳೀಕರಣಗೊಳಿಸಿ, ಗ್ರಾಮಾಂತರ ಪ್ರದೇಶದ ಜನರಿಗೆ ಸುಲಭವಾಗಿ ಇಲಾಖೆಗಳ ಸೇವಾಸೌಕರ್ಯ ಒದಗಿಸುವ ಸಲುವಾಗಿ ಪ್ರತ್ಯೇಕ ತಾಲ್ಲೂಕು ಆಡಳಿತ ಕಛೇರಿಗಳ ಅಗತ್ಯವಿದೆ. ಈ ಕಾರಣದಿಂದ ಗೂಳೂರು ಆಡಳಿತ ಕೇಂದ್ರವಾಗಬೇಕಾಗಿದೆ. ಇದರ ಜೊತೆಗೆ ಗ್ರಾಮಾಂತರ ಪ್ರದೇಶವನ್ನು ಪ್ರತೇಕ ತಾಲ್ಲೂಕಾಗಿ ಮಾಡಬೇಕು ಎಂದು ಶಾಸಕ ಡಿ ಸಿ ಗೌರಿಶಂಕರ್ ಸರ್ಕಾರಕ್ಕೆ ಮನವಿ ಮಾಡಿದ್ದರು.

     ಬೆಳಗುಂಬ, ಬೆಳ್ಳಾವಿ, ಹೆಬ್ಬೂರು, ಹೊನ್ನುಡಿಕೆ, ಗೂಳೂರು, ಊರ್ಡಿಗೆರೆ, ಕೋರ ಹೋಬಳಿಗಳನ್ನು ಒಳಗೊಂಡಿರುವ ತುಮಕೂರು ತಾಲ್ಲೂಕಿನ ಗ್ರಾಮಾಂತರ ಪ್ರದೇಶ ಪ್ರತ್ಯೇಕ ತಾಲ್ಲೂಕು ಆಗಲು ಪೂರಕ ವಿಸ್ತೀರ್ಣ, ಜನಸಂಖ್ಯೆ ಹೊಂದಿದೆ. ಹಿಗಾಗಿ ಪ್ರತ್ಯೇಕ ತಾಲ್ಲೂಕು ಮಾಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಈ ಹಿನ್ನೆಲೆಯಲ್ಲಿ ಸರ್ಕಾರ ಗೂಳೂರಿನಲ್ಲಿ ತಾಲ್ಲೂಕು ಆಡಳಿತ ಕೇಂದ್ರ ಆರಂಭಿಸಲು ಮುಂದಾಗಿದೆ.

        ಗೂಳೂರಿನಲ್ಲಿ ಮಿನಿವಿಧಾನಸೌಧ ಸ್ಥಾಪನೆಯಾದ ನಂತರ ಎಲ್ಲಾ ತಾಲ್ಲೂಕು ಕಛೇರಿಗಳ ಜೊತೆಗೆ ತಹಶೀಲ್ದಾರರನ್ನೂ ನಿಯೋಜಿಸ ಬೇಕಾಗುತ್ತದೆ. ಈ ಪ್ರಕ್ರಿಯೆಗಳು ಮುಂದೆ ಗ್ರಾಮಾಂತರ ಪ್ರದೇಶ ಪ್ರತ್ಯೇಕ ತಾಲ್ಲೂಕಾಗಿ ರೂಪುಗೊಳ್ಳುವ ಬೇಡಿಕೆ ಈಡೇರಿಕೆಗೆ ಸುಲಭವಾಗುತ್ತವೆ ಎನ್ನಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap