ತುಮಕೂರು
ತುಮಕೂರು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಪೂರ್ವಾನುಮತಿ ಇಲ್ಲದೆ ಗೈರುಹಾಜರಾದ 10 ಇಲಾಖೆಗಳ ಅಧಿಕಾರಿಗಳಿಗೆ ತುಮಕೂರು ತಾಲ್ಲೂಕು ಪಂಚಾಯಿತಿ ಆಡಳಿತವು ‘‘ಕಾರಣ ಕೇಳಿ ನೋಟೀಸು’’ ಜಾರಿಮಾಡಿರುವ ಅಪರೂಪದ ಬೆಳವಣಿಗೆ ನಡೆದಿದೆ.
ತಾ.ಪಂ.ನ ಅಧ್ಯಕ್ಷ ಗಂಗಾಂಜನೇಯ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 25 ರಂದು ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆ ಏರ್ಪಟ್ಟಿತ್ತು. ಆ ಸಭೆಯಲ್ಲಿ ತಾಲ್ಲೂಕು ಮಟ್ಟದ ಅನೇಕ ಅಧಿಕಾರಿಗಳು ಗೈರುಹಾಜರಾಗಿದ್ದರು. ಇವರುಗಳು ಪೂರ್ವಾನುಮತಿಯನ್ನೂ ಪಡೆದಿರಲಿಲ್ಲ. ಆಯಾ ಇಲಾಖೆ ವಿಷಯ ಚರ್ಚೆಗೆ ಬಂದಾಗ ಮಾಹಿತಿ ಕೊಡುವವರು ಇರಲಿಲ್ಲ. ಇದು ಸಭೆಯ ಅಧ್ಯಕ್ಷ ಗಂಗಾಂಜನೇಯ, ಉಪಾಧ್ಯಕ್ಷ ಶಾಂತಕುಮಾರ್ ಮತ್ತು ತಾ.ಪಂ. ಸದಸ್ಯರನ್ನು ಕೆರಳಿಸಿತ್ತು.
‘‘ಸಭೆಗೆ ಹಾಜರಾಗಿ ಅಧಿಕಾರಿಗಳು ಸರಿಯಾದ ಮಾಹಿತಿ ಕೊಡದಿದ್ದರೆ, ನಾವು ನಮ್ಮ ಕ್ಷೇತ್ರಗಳಲ್ಲಿ ಜನರಿಗೆ ಉತ್ತರಿಸುವುದು ಹೇಗೆ?’’ ಎಂದು ಎಲ್ಲ ಜನಪ್ರತಿನಿಧಿಗಳು ಕೆಂಡಾಮಂಡಲವಾಗಿದ್ದರು. ‘‘ಮೊದಲಿನಿಂದಲೂ ಇದೇ ಪರಿಸ್ಥಿತಿ ಇದೆ. ಸಭೆಯ ಬಗ್ಗೆ ಅಧಿಕಾರಿಗಳಿಗೆ ಗೌರವವೇ ಇಲ್ಲ’’ ಎಂದು ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದ್ದರು. ‘‘ಸಭೆಗೆ ಬಾರದಿರುವ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ಕೊಡಿ’’ ಎಂದು ಸದಸ್ಯರು ಆಗ್ರಹಿಸಿದರು. ತಹಸೀಲ್ದಾರ್ ಗೈರಿಗೂ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
3 ದಿನಗಳೊಳಗೆ ವಿವರಿಸಿ
ಈ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಅಂದಿನ ಸಭೆಗೆ ಗೈರು ಹಾಜರಾಗಿದ್ದ ಅಧಿಕಾರಿಗಳಿಗೆ ಸೆಪ್ಟೆಂಬರ್ 26 ರಂದು ‘‘ಕಾರಣ ಕೇಳಿ ನೋಟೀಸ್’’ (ನಂ/ಕಾನಿಅ/ತಾಪಂತು/ಕಾ.ಕೇ.ನೋ./ಕೆಡಿಪಿ/02/2018-19, ದಿನಾಂಕ: 26-09-2018) ಜಾರಿಗೊಳಿಸಿದ್ದಾರೆ. ‘‘ನಿಮಗೆ ಕಾರಣ ಕೇಳಿ ನೋಟೀಸು ನೀಡಲು ನಿರ್ದೇಶಿತನಾಗಿರುತ್ತೇನೆ. ನೀವು ಈ ನೋಟೀಸು ತಲುಪಿದ ಮೂರು ದಿನಗಳೊಳಗಾಗಿ ಸಭೆಗೆ ಗೈರುಹಾಜರಾದ ಬಗ್ಗೆ ವಿವರಣೆಯನ್ನು ನೀಡಲು ತಿಳಿಸಲಾಗಿದೆ. ತಪ್ಪಿದಲ್ಲಿ ತಮ್ಮ ಉತ್ತರ ಏನೂ ಇರುವುದಿಲ್ಲವೆಂದು ಪರಿಗಣಿಸಿ, ಸರ್ಕಾರಕ್ಕೆ ವರದಿಸುವುದು ಅನಿವಾರ್ಯ ಎಂಬ ವಿಚಾರವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ’’ ಎಂದು ಸದರಿ ‘‘ನೋಟೀಸ್’’ನಲ್ಲಿ ತಿಳಿಸಿದ್ದಾರೆ.
ನೋಟೀಸ್ ಪಡೆದ ಅಧಿಕಾರಿಗಳು
ಸಭೆಗೆ ಗೈರುಹಾಜರಾಗಿದ್ದ 1) ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು, 2)ಅಲ್ಪಸಂಖ್ಯಾತರ ಇಲಾಖೆಯ ವಿಸ್ತರಣಾಧಿಕಾರಿಗಳು, 3)ಹೆಬ್ಬೂರಿನ ಹೇಮಾವತಿ ನಾಲಾ ಉಪವಿ‘ಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್, 4)ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು, 5)ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್, 6)ಎ.ಪಿ.ಎಂ.ಸಿ. ಕಾರ್ಯದರ್ಶಿ, 7)ನಿರ್ಮಿತಿ ಕೇಂದ್ರದ ತಾಲ್ಲೂಕು ಇಂಜಿನಿಯರ್, 8)ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರು, 9)ಕೆ.ಆರ್.ಐ.ಡಿ.ಎಲ್. ನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, 10)ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು -ಇವರುಗಳಿಗೆ ‘‘ಶೋಕಾಸ್ ನೋಟೀಸ್’’ ನೀಡಲಾಗಿದೆ.
ಸದರಿ ‘‘ಶೋಕಾಸ್ ನೋಟೀಸ್’’ನ ಪ್ರತಿಯನ್ನು ಜಿಲ್ಲಾ ಪಂಚಾಯತ್‌ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಮಾಹಿತಿಗೆ ಕಳುಹಿಸಲಾಗಿದೆ.
ಇನ್ನು ಈ ಸಭೆಗೆ ತುಮಕೂರು ತಹಸೀಲ್ದಾರ್ ಅವರು ಬಾರದಿರುವ ಹಿನ್ನೆಲೆಯಲ್ಲಿ ಈ ವಿಷಯವನ್ನು ಉನ್ನತಾಧಿಕಾರಿಗಳಿಗೆ ಪತ್ರ ಮುಖೇನ ತಿಳಿಸಲು ತಾಲ್ಲೂಕು ಪಂಚಾಯಿತಿಯು ನಿರ್ಧರಿ ಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ