ಸರ್ಕಾರದ ಶತದಿನದ ಸಂಭ್ರಮ ಸರಳ ಆಚರಣೆಗೆ ನಿರ್ಧಾರ : ಸಿ ಎಂ

ಬೆಂಗಳೂರು

     ಒಂದೆಡೆ ಪ್ರವಾಹ ಸಂತ್ರಸ್ತರ ಪಡಿಪಾಟಲು, ಮತ್ತೊಂದೆಡೆ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯತೆ ಕೊರತೆ, ಪಕ್ಷದ ಮುಖಂಡರ ನಡುವೆ ಹೊಂದಾಣಿಕೆ, ಸಾಮರಸ್ಯ ಇಲ್ಲದಿರುವುದು ಈ ಎಲ್ಲ ಕಾರಣಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರದ ಶತದಿನ ಸಂಭ್ರಮಕ್ಕೆ ಮಂಕು ಕವಿದಿದ್ದು, ಶತದಿನ ಸಂಭ್ರಮವನ್ನು ಸರಳವಾಗಿ ಆಚರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ.

      ಸದ್ಯದ ಪರಿಸ್ಥಿತಿಯಲ್ಲಿ ಸಾಧನೆಯ ಸಮಾವೇಶ ನಡೆಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿರುವ ಮುಖ್ಯಮಂತ್ರಿ ಯಡಿಯೂರಪ್ಪರವರು ಸರ್ಕಾರದ 100 ದಿನಗಳ ಸಾಧನೆಯನ್ನು ಮಾದ್ಯಮಗಳ ಮೂಲಕ ಜನರಿಗೆ ಮನದಟ್ಟು ಮಾಡಲು ಮುಂದಾಗಿದ್ದಾರೆ.
ಈ ಹಿಂದೆ ಯಡಿಯೂರಪ್ಪನವರು ಶತದಿನದ ಸಂಭ್ರಮವನ್ನು ಸರ್ಕಾರದ ಸಾಧನೆಯ ಸಮಾವೇಶವನ್ನಾಗಿ ಆಚರಿಸಿ, ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಕೇಂದ್ರದ ನಾಯಕರನ್ನು ಆಹ್ವಾನಿಸಿ, ಸರ್ಕಾರ ನೆರೆ ಸಂತ್ರಸ್ಥರಿಗೆ ಸ್ಪಂದಿಸಿರುವ ರೀತಿ, ಜನಪರ ಕಾರ್ಯಕ್ರಮಗಳ ಜಾರಿ ಎಲ್ಲವನ್ನೂ ಕೇಂದ್ರ ನಾಯಕರಿಗೆ ಮನವರಿಕೆ ಮಾಡಲು ದೊಡ್ಡ ಮಟ್ಟದಲ್ಲಿ ಶತದಿನದ ಸಂಭ್ರಮವನ್ನು ಆಚರಿಸಲು ಚಿಂತನೆ ನಡೆಸಿದ್ದರು.

       ಈ ಶತದಿನದ ಸಂಭ್ರಮವನ್ನು ಸರ್ಕಾರದಿಂದ ಆಚರಿಸಿದರೆ ಮುಖ್ಯಮಂತ್ರಿ ಯಡಿಯೂರಪ್ಪನವರ ಒನ್ ಮ್ಯಾನ್ ಶೋ ಆಗಲಿದೆ. ಇದನ್ನು ಪಕ್ಷದಿಂದ ಆಚರಿಸೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ತಗಾದೆ ತೆಗೆದಿದ್ದರು. ಇದಕ್ಕೆ ಯಡಿಯೂರಪ್ಪನವರ ಬಗ್ಗೆ ಅಸಂತೋಷವುಳ್ಳ ರಾಷ್ಟ್ರೀಯ ನಾಯಕರೊಬ್ಬರ ಬೆಂಬಲವೂ ಇತ್ತು. ಹಾಗಾಗಿ, ಶತದಿನ ಸಂಭ್ರಮ ನಡೆಯುವುದು ಅನುಮಾನವಾಗಿತ್ತು. ಈ ನಡುವೆಯೇ 2ನೇ ಬಾರಿಗೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೆರೆ ಕಾಣಿಸಿಕೊಂಡಿದ್ದು ಸರ್ಕಾರಕ್ಕೆ ಸವಾಲಾಯಿತು.

      ರಾಜ್ಯದಲ್ಲಿ ನೆರೆಯಿಂದ ಜನ ಕಷ್ಟದಲ್ಲಿರುವಾಗ ಶತದಿನದ ಸಂಭ್ರಮ ಬೇಡ ಎಂಬ ಮಾತುಗಳು ಕೇಳಿ ಬಂದಿದ್ದವು. ಶತದಿನದ ಸಂಭ್ರಮ ವಿವಾದಕ್ಕೆಡೆಯಾಗುತ್ತಿರುವುದನ್ನು ಗಮನಿಸಿದ ಬಿಎಸ್‍ವೈ, ಈ ಎಲ್ಲ ವಿವಾದಕ್ಕೆ ತೆರೆ ಎಳೆಯುವಂತೆ ಶತದಿನದ ಸಂಭ್ರಮಕ್ಕೆ ತಡೆ ಹಾಕಿ ಸರಳವಾಗಿ ಸರ್ಕಾರದ 100 ದಿನದ ಆಚರಿಸಲು ಮುಂದಾಗಿದ್ದಾರೆ. ಬಿಜೆಪಿ ಸರ್ಕಾರಕ್ಕೆ ನ.2 ರಂದು 100 ದಿನ ತುಂಬಲಿದ್ದು, ಅದಕ್ಕೂ ಮೊದಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಸುದ್ದಿಗೋಷ್ಠಿ ನಡೆಸಿ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡಲು ತೀರ್ಮಾನಿಸಿದ್ದಾರೆ.

      ಕಳೆದ 100 ದಿನಗಳಲ್ಲಿ ಸರ್ಕಾರ ಕೈಗೊಂಡಿರುವ ಜನಪರ ಯೋಜನೆಗಳು, ಪ್ರವಾಹ ಸಂತ್ರಸ್ಥರ ನೆರವಿಗೆ ಸರ್ಕಾರ ಸ್ಪಂದಿಸಿದ ರೀತಿ, ಅವರ ಪುನರ್‍ವಸತಿಗೆ ಹಾಕಿಕೊಂಡಿರುವ ಕಾರ್ಯಕ್ರಮ ಎಲ್ಲವನ್ನೂ ಜನರ ಮುಂದಿಡಲು ಮುಂದಾಗಿದ್ದಾರೆ. ಅದರಂತೆ 100 ದಿನಗಳ ಸರ್ಕಾರದ ಸಾಧನೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪನವರೇ ಜನರಿಗೆ ತಿಳಿಸುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಮುಂದೆ ನೆರೆ ಸಂತ್ರಸ್ಥರ ಪುನರ್‍ವಸತಿ ಕಲ್ಪಿಸಿದ ನಂತರ ಸರ್ಕಾರದ ಸಾಧನೆಯ ಸಮಾವೇಶವನ್ನು ನಡೆಸುವ ಚಿಂತನೆಯೂ ಇದೆ. ಸದ್ಯಕ್ಕಂತೂ ಯಾವುದೇ ಸಾಧನೆಯ ಸಮಾವೇಶ ಇಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap