100 ಬರ ಪೀಡಿತ ತಾಲ್ಲೂಕು ಅಭಿವೃದ್ಧಿಗೆ ಸರ್ಕಾರದಿಂದ ಹೊಸ ಯೋಜನೆ

ಬೆಂಗಳೂರು

     ರಾಜ್ಯದ 100 ಬರ ಪೀಡಿತ ತಾಲೂಕುಗಳ ಪರಿಸ್ಥಿತಿ ಸುಧಾರಣೆಗಾಗಿ ‘ಬರ ನಿಯಂತ್ರಣ ಜಲಾನಯನ ಅಭಿವೃದ್ಧಿ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಎಂದು ರಾಜ್ಯಪಾಲ ವಜೂಭಾಯಿ ವಾಲಾ ವಿಧಾನಮಂಡಲಕ್ಕೆ ತಿಳಿಸಿದರು.

     ಸೋಮವಾರ ಆರಂಭಗೊಂಡ ವಿಧಾನಮಂಡಲ ಅಧಿವೇಶನದ ಜಂಟಿ ಸದನವನ್ನುದ್ದೇಶಿಸಿ ಸರ್ಕಾರದ ಸಾಧನೆಗಳನ್ನೊಳಗೊಂಡ ಭಾಷಣದ ಪ್ರತಿಯನ್ನು ಓದಿದ ರಾಜ್ಯಪಾಲರು, ಸರ್ಕಾರದ ಸಾಧನೆಗಳ 67 ಅಂಶಗಳನ್ನು ಸದನದ ಮುಂದಿಟ್ಟರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಮನ್ರೇಗ) ಮತ್ತು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್ ವೈ) ಗಳನ್ನು ಸಂಯೋಜಿಸಿ, 100 ಬರಪೀಡಿತ ಹಳ್ಳಿಗಳಿಗೆ ಹೊಸ ಯೋಜನೆ ರೂಪಿಸಲು ಸರ್ಕಾರ ಮುಂದಾಗಿದೆ ಎಂದರು.

      ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಒಳಚರಂಡಿ ನೀರನ್ನು ಸಂಸ್ಕರಿಸಿ ಬರಪೀಡಿತ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಕೆರೆಗಳನ್ನು ತುಂಬಿಸಲಾಗುತ್ತಿದೆ. ಈ ಯೋಜನೆಯನ್ನು ಇತರ ಪ್ರಮುಖ ನಗರಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.ಪೋಡಿ ಅಭಿಯಾನ ಯೋಜನೆಯಡಿ 2,452 ಗ್ರಾಮಗಳಲ್ಲಿ ಪೋಡಿ ಅಭಿಯಾನ ಪೂರ್ಣಗೊಳಿಸಲಾಗಿದೆ. ಉಳಿದ ಗ್ರಾಮಗಳಲ್ಲಿ ಚುರುಕುಗತಿಯಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

    ಎಲ್ಲ ನ್ಯಾಯಾಲಯಗಳಲ್ಲಿ ಮಹಿಳಾ ವಕೀಲರ ಅನುಕೂಲಕ್ಕಾಗಿ ಅಗತ್ಯ ಸೌಲಭ್ಯಗಳೊಂದಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳನ್ನು ಆರಂಭಿಸಲಾಗುವುದು. ಪೊಲೀಸ್ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ. 25ರಷ್ಟು ಮೀಸಲಾತಿ ಕಲ್ಪಿಸಲಾಗುವುದು ಎಂದರು.

    ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಗಂಭೀರ ಅಪರಾಧಿಗಳು ಮತ್ತು ಭಯೋತ್ಪಾದಕರನ್ನು ಬಂಧಿಸಿಡಲು ಪರಪ್ಪನ ಅಗ್ರಹಾರದಲ್ಲಿ ಅತಿ ಭದ್ರತಾ ಕಾರಾಗೃಹವನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ, ವಿಜಯಪುರ ಹಾಗೂ ಬೀದರ್ ನಲ್ಲಿ ಕೇಂದ್ರ ಕಾರಾಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದು ರಾಜ್ಯಪಾಲರು ಹೇಳಿದರು.

    ಸರ್ಕಾರ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, 2019ರ ನವೆಂಬರ್ ನಲ್ಲಿ ಕಲಬುರಗಿ ಹಾಗೂ 2020ರ ಫೆ. 7ರಂದು ಬೀದರ್ ವಿಮಾನ ನಿಲ್ದಾಣ ಕಾರ್ಯಚರಣೆ ಆರಂಬಿಸಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಹಾಸನ, ವಿಜಯಪುರ ಹಾಗೂ ಕಾರವಾರ ನಿಲ್ದಾಣಗಳ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

   ಪಾವಗಡದ ಅಲ್ಟ್ರಾಮೆಗಾ ಸೋಲಾರ್ ಯೋಜನೆಯ ಮಾದರಿಯಲ್ಲೇ ಕೊಪ್ಪಳ, ಬೀದರ್ ಹಾಗೂ ಗದಗದಲ್ಲಿ ತಲಾ 2,500 ಮೆಗಾವ್ಯಾಟ್ ಸಾಮರ್ಥ್ಯದ ಮೂರು ಅಲ್ಟ್ರಾ ಮೆಗಾ ನವೀಕರಿಸಬಹುದಾದ ಇಂಧನ ಪವರ್ ಪಾರ್ಕ್ ಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಸ್ವತಂತ್ರ ಮತ್ತು ಗ್ರಿಡ್ ?ಸಂಪರ್ಕ ಹೊಂದಿದ ಸೌರಶಕ್ತಿ ಚಾಲಿತ ಕೃಷಿ ಪಂಪ್ ಸೆಟ್ ಗಳನ್ನು ಉತ್ತೇಜಿಸುವ ನೀತಿ ರೂಪಿಸಲು ಸರ್ಕಾರ ಉದ್ದೇಶಿಸಿದೆ ಎಂದರು.

    ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮ(ಎಸ್‍ಎಚ್ ಡಿಪಿ) ಹಂತ -4ರ ಅನುಷ್ಠಾನ ಯೋಜನೆಯಡಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ 10 ಸಾವಿರ ಕಿಮೀ ಉದ್ದದ ಹೆದ್ದಾರಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಮೊದಲ ಹಂತದಲ್ಲಿ 3,698 ಕಿಮಿ ಉದ್ದದ ಹೆದ್ದಾರಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

     ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 136 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 47 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜಲಾನಯ ಅಭಿವೃದ್ಧಿಯನ್ನು ಅನುಷ್ಠಾನಗೊಳಿಸಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸುಮಾರು 41 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ 825 ಕೋಟಿ ರೂ. ಜಮೆ ಮಾಡಲಾಗಿದೆ. ಮನ್ರೇಗಾ ಯೋಜನೆಯಡಿ ಉದ್ಯೋಗದ ಅವಧಿಯನ್ನು 100 ದಿನಗಳ ಬದಲಿಗೆ 150ಕ್ಕೆ ಹೆಚ್ಚಿಸಲಾಗಿದೆ ಎಂದರು.

    ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2019-20 ನೇ ಸಾಲಿನಲ್ಲಿ 1500 ಕೋಟಿ ರೂ. ಅನುದಾನ ನೀಡಲಾಗಿದೆ. 2019ರ ಡಿಸೆಂಬರ್ ವರೆಗೆ 1000 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು.

     ಕೃಷಿಕರಿಗೆ ಅನುಕೂಲ ಕಲ್ಪಿಸಲು ಸಹಕಾರಿ ಬ್ಯಾಂಕುಗಳಲ್ಲಿ 1 ಲಕ್ಷದವರೆಗೆ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ 2 ಲಕ್ಷ ರೂ.ಗಳವರೆಗೆ ಬಾಕಿಯಿರುವ ಅವಧಿ ಮೀರಿದ ಸಾಲಗಳನ್ನು ಮನ್ನಾ ಮಾಡಲಾಗಿದೆ. ರಾಜ್ಯದ ಪ್ರಮುಖ ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಇ-ಹರಾಜು ಪ್ರಕ್ರಿಯೆಯನ್ನು ಜಾರಿಗೊಳಿಸಿದ್ದು, ಇ-ಪೇಮೆಂಟ್ ವ್ಯವಸ್ಥೆಯನ್ನೂ ಪರಿಚಯಿಸಲಾಗಿದೆ. 2019ರ ಡಿಸೆಂಬರ್ ವರೆಗೆ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ 5 ರೂ.ಗಳ ಪೆÇ್ರೀತ್ಸಾಹ ಧನ ವಿತರಿಸಲು 691 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

     ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು. ಐಟಿ ಬಿಟಿ ನಗರ ಬೆಂಗಳೂರಿನಲ್ಲಿ ಸೈಬರ್ ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು 8 ಸೈಬರ್ ಅಪರಾಧ ನಿಗ್ರಹಿಸುವ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುತ್ತಿದ್ದು, ಭಯೋತ್ಪಾದನಾ ವಿರೋಧಿ ಘಟಕ ಸ್ಥಾಪಿಸಲಾಗುತ್ತಿದೆ. ಪೋಕ್ಸೋ ಪ್ರಕರಣಗಳ ವಿಚಾರಣೆಗೆ 17 ಹಾಗೂ ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣಗಳ ವಿಚಾರಣೆಗೆ 14 ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ನೆರೆ ಸಂತ್ರಸ್ತರ ಸಮಸ್ಯೆಯನ್ನು ಸರ್ಕಾರ ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಿದ್ದು, ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿದೆ.

     ಈವರೆಗೆ ನೆರೆ ಪರಿಹಾರಕ್ಕಾಗಿ 827 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ರಾಜ್ಯಪಾಲರು ಹೇಳಿದರು. ಕೈಗಾರಿಕಾ ಕ್ಷೇತ್ರದ ಅಭ್ಯುದಯ ಸರ್ಕಾರದ ಆದ್ಯತೆಯಾಗಿದ್ದು, 4,050 ಕೋಟಿ ವೆಚ್ಚದ 21 ಯೋಜನೆಗಳಿಗೆ ಅನುಮೋದನೆ ಕೊಡಲಾಗಿದ್ದು, ಆಯುಷ್ಮಾನ್ ಯೋಜನೆ ಅಡಿ 3.3 ಲಕ್ಷ ಫಲಾನುಭವಿಗಳ ಚಿಕಿತ್ಸೆ ಒದಗಿಸಲಾಗಿದೆ. ಅಪೌಷ್ಟಿಕತೆ ಮಕ್ಕಳ ಚಿಕಿತ್ಸೆಗಾಗಿ 49 ಕೇಂದ್ರಗಳು ಸ್ಥಾಪಿಸಲಾಗುತ್ತಿದೆ ಎಂದರು.

     ಕರ್ನಾಟಕ ಇಡೀ ದೇಶದಲ್ಲಿ ಆರ್ಥಿಕ ಸಂಪನ್ಮೂಲ ವೃದ್ಧಿಗೆ ಆರ್ಥಿಕ ಕ್ರೋಢೀಕರಣದ ಮಾರ್ಗನಕ್ಷೆ ರೂಪಿಸಿದ ಮೊದಲ ರಾಜ್ಯವಾಗಿದೆ. ದೇಶದ ಒಟ್ಟು ಜಿಡಿಪಿಗೆ ಕರ್ನಾಟಕದ ಕೊಡುಗೆ ಗಣನೀಯವಾಗಿದೆ. 2019ರ ನವೆಂಬರ್ ವರೆಗೆ 71,475 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ಮೂಲಕ ರಾಜ್ಯ ದೇಶದ ಎರಡನೇ ಹೂಡಿಕೆಯ ತಾಣವಾಗಿದೆ ಎಂದರು. ಬೆಳಗ್ಗೆ 10.55ಕ್ಕೆ ವಿಧಾನಸೌಧ ಪೂರ್ವ ದ್ವಾರಕ್ಕೆ ಆಗಮಿಸಿದ ರಾಜ್ಯಪಾಲರನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ತಿನ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಬರ ಮಾಡಿಕೊಂಡರು.

ಹಿಂದಿ ಭಾಷಣಕ್ಕೆ ಆಕ್ಷೇಪ

     ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಆರಂಭಿಸುತ್ತಿದ್ದ ಜೆಡಿಎಸ್ ಶಾಸಕ ಅನ್ನದಾನಿ, ಹಿಂದಿಯಲ್ಲಿ ಭಾಷಣ ಮಾಡಿದರೆ ತಮಗೆ ಅರ್ಥವಾಗುವುದಿಲ್ಲ. ಕನ್ನಡದಲ್ಲಿ ಹೇಳಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap