ಒಂದು ಸಾವಿರ ಪ್ರಕರಣ ಇತ್ಯರ್ಥಕ್ಕೆ ಗುರಿ

ದಾವಣಗೆರೆ:

      ರಾಜಿಯಾಗಬಲ್ಲ ಪ್ರಕರಣಗಳ ಇತ್ಯರ್ಥಕ್ಕಾಗಿ ಕರ್ನಾಟಕ ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಹಯೋಗದಲ್ಲಿ ನ್ಯಾಯಾಲಯದ ಆವರಣದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ರಾಷ್ಟ್ರೀಯ ಲೋಕ್ ಅದಾಲತ್ ನಡೆಸಲುದ್ದೇಶಿಸಿದ್ದು, ಫೆಬ್ರವರಿ 8ರಂದು ನಡೆಯುವ ಪ್ರಥಮ ಲೋಕ್ ಅದಾಲತ್‍ನಲ್ಲಿ ಒಂದು ಸಾವಿರ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸುವ ಗುರಿ ಹೊಂದಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ವೈ.ಬಸಾಪುರ ತಿಳಿಸಿದರು.

ವರ್ಷದಲ್ಲಿ 5 ಲೋಕ್ ಅದಾಲತ್:

       ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020ರ ಸಾಲಿನಲ್ಲಿ ಫೆಬ್ರವರಿ 8, ಏಪ್ರೀಲ್ 11, ಜುಲೈ 11, ಸೆಪ್ಟೆಂಬರ್ 12 ಹಾಗೂ ಡಿಸೆಂಬರ್ 12ರಂದು ಸೇರಿ ಒಟ್ಟು ಐದು ಮೇಗಾ ಲೋಕ್ ಅದಾಲತ್ ನಡೆಸಲು ಉದ್ದೇಶಿಸಲಾಗಿದ್ದು, ಈ ದಿನಗಳಂದು ಜಿಲ್ಲೆಯ ನ್ಯಾಯಾಲಯಗಳಲ್ಲಿ ಎರಡು ಕಡೆಯ ಪಕ್ಷದಾರರು ಸಂಧಾನದ ಮೂಲಕ ರಾಜಿ ಆಗುವ ಪ್ರಕರಣಗಳನ್ನು ನ್ಯಾಯಾಧೀಶರು ಮತ್ತು ವಕೀಲರ ಸಮಕ್ಷಮದಲ್ಲಿ ಇತ್ಯರ್ಥ ಪಡೆಸಲಾಗುವುದು. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

30,419 ಪ್ರಕರಣ ಬಾಕಿ:

       ಜಿಲ್ಲೆಯಲ್ಲಿ 2019ರ ಡಿಸೆಂಬರ್ 31ರ ವರೆಗೆ 15,791 ಸಿವಿಲ್ ಹಾಗೂ 14,628 ಕ್ರಿಮಿನಲ್ ಪ್ರಕರಣಗಳು ಸೇರಿ ಒಟ್ಟು 30,419 ಪ್ರಕರಣಗಳು ಬಾಕಿ ಇದ್ದು, ಇವುಗಳಲ್ಲಿ ಸಂಧಾನದ ಮೂಲಕ ರಾಜಿಯಾಗಬಲ್ಲ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅದರಲ್ಲೂ, 5, 7 ಹಾಗೂ 10 ವರ್ಷಕ್ಕೂ ಹೆಚ್ಚು ಹಳೆಯದಾದ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

      2019ರ ಡಿಸೆಂಬರ್ 14ರಂದು ನಡೆದ ಮೇಗಾ ಲೋಕ್ ಅದಾಲತ್‍ನಲ್ಲಿ 3,490 ಪ್ರಕರಣಗಳ ಇತ್ಯರ್ಥಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ, ಈ ಪೈಕಿ 678 ಪ್ರಕರಣಗಳು ಇತ್ಯರ್ಥ ಪಡಿಸಲಾಗಿದ್ದು, ಇವುಗಳಿಗೆ ಸಂಬಂಧಿಸಿದ ಕಕ್ಷಿದಾರರಿಗೆ 7,34,566 ರೂ. ಪರಿಹಾರ ಕೊಡಿಸಲಾಗಿದೆ. ಬರುವ ಫೆಬ್ರವರಿ 8ರಂದು ಆಯೋಜಿಸಲುದ್ದೇಶಿಸಿರುವ 2020ರ ಪ್ರಪ್ರಥಮ ಲೋಕ್ ಅದಾಲತ್‍ನಲ್ಲಿ ಒಂದು ಸಾವಿರ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ವಾಜ್ಯ ಪೂರ್ವ ಪ್ರಕರಣಗಳು:

    ಈ ಲೋಕ್ ಅದಾಲತ್‍ನಲ್ಲಿ ವಾಜ್ಯ ಪೂರ್ವ ಪ್ರಕರಣಗಳಾದ ಚೆಕ್ಕು ಅಮಾನ್ಯದ ಪ್ರಕರಣಗಳು ಯು/ಎಸ್ 138 ಎನ್‍ಐ ಆಕ್ಟ್, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು ಸೇರಿದಂತೆ ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಮೈಂಟನೆನ್ಸ್ ಪ್ರಕರಣಗಳು ಹಾಗೂ ಇತರೆ ಪ್ರಕರಣಗಳು (ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ವೈವಾಹಿಕ) ಕುಟುಂಬ ನ್ಯಾಯಾಲಯ ಹಾಗೂ ಇತರೆ ಸಿವಿಲ್ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದರು.

ಬಾಕಿ ಇರುವ ಪ್ರಕರಣಗಳು:

      ಅಲ್ಲದೆ, ನ್ಯಾಯಾಲಯದಲ್ಲಿ ಬಾಕಿ ಇರುವ ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳಾದ ಚೆಕ್ಕು ಅಮಾನ್ಯದ ಪ್ರಕರಣಗಳು ಯು/ಎಸ್ 138 ಎನ್‍ಐ ಆಕ್ಟ್ , ಬ್ಯಾಂಕ್ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ಉದ್ಯೋಗದಲ್ಲಿ ಪುನರ್‍ಸ್ಥಾಪಿಸಲ್ಪಡುವ ಪ್ರಕರಣಗಳು ಸೇರಿದಂತೆ ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ವೈವಾಹಿಕ/ಕುಟುಂಬ ನ್ಯಾಯಾಲಯ ಪ್ರಕರಣಗಳು, ಭೂಸ್ವಾದೀನ ಪ್ರಕರಣಗಳು, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಗಾಗೂ ಪಿಂಚಣಿ

     ಪ್ರಕರಣಗಳು,ಕಂದಾಯ ಪ್ರಕರಣಗಳು (ಜಿಲ್ಲಾ ಹಾಗೂ ಉಚ್ಚ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಮಾತ್ರ), ಸಿವಿಲ್ ಪ್ರಕರಣಗಳನ್ನು (ಬಾಡಿಗೆ, ಅನುಭೋಗದ ಹಕ್ಕುಗಳ ನಿರ್ಬಂಧಾಜ್ಞೆ ಮೊಕದ್ದಮೆಗಳು) ಲೋಕ ಅದಾಲತ್‍ನಲ್ಲಿ ಬಗೆಹರಿಸಲಾಗುವುದು. ಈ ದಿನಾಂಕಗಳ ಹೊರತಾಗಿಯೂ ಸತತವಾಗಿ ನಡೆಯುವ ಲೋಕ ಅದಾಲತ್ ಮುಖಾಂತರ ಕೂಡ ಕಕ್ಷಿದಾರರು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು.

    ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಭು ಎನ್.ಬಡಿಗೇರ್, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣ್‍ಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap