ಮನೆ ನಿರ್ಮಾಣ ಆರಂಭಿಸಲು 1000 ಕೋಟಿ ಬಿಡುಗಡೆ :ಜಗದೀಶ್ ಶೆಟ್ಟರ್

ಬೆಳಗಾವಿ

    ಪ್ರವಾಹದಿಂದ ಸಂಪೂರ್ಣ ಮನೆ ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಾಣ ಆರಂಭಿಸಲು ತಕ್ಷಣವೇ ಒಂದು ಲಕ್ಷ ರೂಪಾಯಿ ಬಿಡುಗಡೆಗೆ ಸಚಿವ ಸಂಪುಟ ಸಭೆ ನಿರ್ಧರಿಸಿದ್ದು, ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆಗೆ ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಸೆ.20) ನಡೆದ ಅಧಿಕಾರಿಗಳು ಹಾಗೂ ಮುಖಂಡರುಗಳ ಸಭೆಯ ಅಧ್ಯಕ್ಷತೆ ಅವರು ಮಾತನಾಡಿದರು.

    ಬೆಳೆಹಾನಿ ಸಮೀಕ್ಷೆ ಪೂರ್ಣಗೊಂಡ ತಕ್ಷಣವೇ ಎನ್.ಡಿ.ಆರ್.ಎಫ್. ಮಾರ್ಗಸೂಚಿಯ ಜತೆಗೆ ರಾಜ್ಯ ಸರ್ಕಾರ ಕೂಡ ವಿಶೇಷ ಪರಿಹಾರ ಪ್ರಕಟಿಸಲಿದೆ.ಪ್ರವಾಹದಿಂದ ಉಂಟಾಗಿರುವ ಹಾನಿಯ ಕುರಿತು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ನೀಡಲಾಗಿದ್ದು, ಶೀಘ್ರ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆಯನ್ನು ಮಾಡಲಿದೆ.

     ಆಗಿರುವ ಹಾನಿಯನ್ನು ಸರಿಪಡಿಸಿ ಸಾಮಾನ್ಯ ಸ್ಥಿತಿಗೆ ತರುವುದು ಸರ್ಕಾರದ ಆದ್ಯತೆಯಾಗಿದೆ. ಹಾನಿಯ ಗಂಭೀರತೆಯನ್ನು ಅರಿತು ತಕ್ಷಣವೇ ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗಿದೆ.

     ಸಮೀಕ್ಷೆ ಮತ್ತು ತಾಂತ್ರಿಕ ಲೋಪದೋಷಗಳಿಂದ ಪರಿಹಾರ ದಿಂದ ವಂಚಿತಗೊಂಡ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು.
ಎನ್.ಡಿ.ಆರ್.ಎಫ್. ಮಾರ್ಗಸೂಚಿಯ ಪ್ರಕಾರ ಪರಿಹಾರ ಕಡಿಮೆ ಆಗುವುದರಿಂದ ಸರ್ಕಾರ ಹೆಚ್ಚಿನ ಪರಿಹಾರವನ್ನು ಮೊಟ್ಟಮೊದಲ ಬಾರಿಗೆ ಘೋಷಣೆ ಮಾಡಿದೆ.

     ಬೆಳಗಾವಿ ಜಿಲ್ಲೆಗೆ ತಕ್ಷಣ ಎರಡು ನೂರು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದು ಸ್ವತಃ ಮುಖ್ಯಮಂತ್ರಿಗಳು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.ರಾಜ್ಯದ ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಸುಧಾರಣೆಗೆ ಐದು ನೂರು ಕೋಟಿ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಪರಿಹಾರ ಕಾರ್ಯ ಕೈಗೊಳ್ಳಲು ಯಾವುದೇ ರೀತಿಯ ತೊಂದರೆಯಾಗದಂತೆ ಸರ್ಕಾರ ಕ್ರಮ ವಹಿಸುವುದು.

      ಬೆಳೆಹಾನಿಯಾಗಿರುವುದರಿಂದ ಸಾಲ ವಸೂಲಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಈಗಾಗಲೇ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದ್ದು, ಸಾಲಮನ್ನಾ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದರು.

     ಪರಿಹಾರ ಕೆಲಸಕಾರ್ಯಗಳು ನಡೆಯುತ್ತಿರುವುದರಿಂದ ಅನಿವಾರ್ಯ ಕಾರಣಗಳಿಂದಾಗಿ ಈ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಲಾಗುತ್ತಿಲ್ಲ ಎಂದು ಹೇಳಿದರು.ರೈತರು ಹಾಗೂ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು ತುರ್ತಾಗಿ ಭೇಟಿ ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ಸಭೆ ನಡೆಸಿ ವಿಸ್ತೃತ ಚರ್ಚೆ ನಡೆಸುವುದಾಗಿ ತಿಳಿಸಿದರು.ಪ್ರವಾಹ ಸಂದರ್ಭದಲ್ಲಿ ತುರ್ತು ರಕ್ಷಣಾ ಕಾರ್ಯ ಕೈಗೊಂಡಿರುವ ಜಿಲ್ಲಾಡಳಿತದ ಕಾರ್ಯವನ್ನು ಸಚಿವ ಜಗದೀಶ್ ಶೆಟ್ಟರ್ ಶ್ಲಾಘಿಸಿದರು.

    ಸಭೆಯಲ್ಲಿ ಮಾತನಾಡಿದ ಸವದತ್ತಿ ಶಾಸಕ ಆನಂದ ಮಾಮನಿ, ಆದಷ್ಟು ಬೇಗನೇ ಬೆಳೆಹಾನಿ ಸಮೀಕ್ಷೆ ನಡೆಸಬೇಕು. ಅದೇ ರೀತಿ ಸಮೀಕ್ಷೆ ಬಳಿಕ ಮತ್ತಷ್ಟು ಮನೆಗಳು ಕುಸಿದಿದ್ದು, ಇದರ ಬಗ್ಗೆ ಮರು ಸಮೀಕ್ಷೆ ಕೈಗೊಳ್ಳಬೇಕು ಎಂದು ತಿಳಿಸಿದರು.
ಹಿಂಗಾರು ಹಂಗಾಮು ಆರಂಭಗೊಳ್ಳುತ್ತಿರುವುದರಿಂದ ಕೂಡಲೇ ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ಹಾನಿಯ ಸಮೀಕ್ಷೆ ತುರ್ತಾಗಿ ನಡೆಸಬೇಕು. ನೇಕಾರರು ತೀವ್ರ ಸಂಕಷ್ಟದಲ್ಲಿದ್ದು, ಸೂಕ್ತ ಪರಿಹಾರ ವಿತರಣೆ ನೀಡಬೇಕು ಎಂದರು.

    ಬೆಳಗಾವಿ(ಉತ್ತರ ) ಶಾಸಕ ಅನಿಲ್ ಬೆನಕೆ ಮಾತನಾಡಿ, ಶೇ.50 ರಷ್ಟು ಮನೆ ಆಗಿರುವ ಪ್ರಕರಣಗಳಲ್ಲಿ ಸಂಪೂರ್ಣ ಹಾನಿ ಎಂದು ಪರಿಗಣಿಸಬೇಕು ಮತ್ತು ಪರಿಹಾರ ಕೇಂದ್ರದ ಬದಲು ಸಂಬಂಧಿಕರ ಮನೆಗಳಲ್ಲಿ ರಕ್ಷಣೆ ಪಡೆದಿದ್ದ ಕುಟುಂಬಗಳಿಗೂ ಹತ್ತು ಸಾವಿರ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.

   ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಮಾತನಾಡಿ, ಸಂತ್ರಸ್ತರ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ ಹತ್ತು ಸಾವಿರ ಕೋಟಿ ಹಾನಿ:

    ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಒಟ್ಟಾರೆ ಹತ್ತು ಸಾವಿರ ಕೋಟಿ ಹಾನಿಯಾಗಿದ್ದು, ಇದುವರೆಗೆ 167 ಕೋಟಿ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ವಿವರಿಸಿದರು.

    ಜಿಲ್ಲೆಯಲ್ಲಿ ಪ್ರವಾಹದಿಂದ ಒಟ್ಟಾರೆ 6.66 ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆಯಾಗಿದ್ದು, ಇದರಲ್ಲಿ ಒಟ್ಟು 2.77 ಲಕ್ಷ ಹೆಕ್ಟೇರ್ ಹಾನಿಯಾಗಿದೆ. ಪ್ರಮುಖವಾಗಿ ಕಬ್ಬು ಬೆಳೆಹಾನಿಯಾಗಿರುತ್ತದೆ ಎಂದು ಸಭೆಯಲ್ಲಿ ವಿವರಿಸಿದರು.

    ಆಗಸ್ಟ್ ಮೊದಲ ವಾರದಲ್ಲಿ ಶೇ.490 ರಷ್ಟು ಅಧಿಕ ಮಳೆಯಾಗಿದ್ದು, ನೆರೆ ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಒಟ್ಟಾರೆ 5.20 ಲಕ್ಷ ಕ್ಯೂಸೆಕ್ ನೀರು ಹರಿದ ಪರಿಣಾಮ 377 ಗ್ರಾಮದಲ್ಲಿ ಪ್ರವಾಹ ಉಂಟಾಯಿತು.4.15 ಲಕ್ಷ ಜನರನ್ನು ಸುರಕ್ಷಿತ ಸ್ಥಳಾಂತರಗೊಳಿಸಿ 493 ಪರಿಹಾರ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ತುರ್ತು ರಕ್ಷಣಾ ಕಾರ್ಯ ಕೈಗೊಳ್ಳಲಾಯಿತು.ಜಿಲ್ಲೆಯಲ್ಲಿ ಒಟ್ಟಾರೆ 28 ಜನರ ಸಾವನ್ನಪ್ಪಿದ್ದು, ಈಗಾಹಲೇ 25 ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗಿದೆ. 1.12 ಲಕ್ಷ ಕುಟುಂಬಗಳಿಗೆ ತಲಾ ಹತ್ತು ಸಾವಿರ ರೂಪಾಯಿಗಳ ಪರಿಹಾರ ವಿತರಿಸಲಾಗಿದೆ.

     ಇದೀಗ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಒಟ್ಟು 69,183 ಮನೆಗಳು ಹಾನಿಗೊಳಗಾಗಿದ್ದು, ಕಂಡುಬಂದಿದೆ. ಅವುಗಳ ಸಂಪೂರ್ಣ ವಿವರಗಳನ್ನು ರಾಜೀವ ಗಾಂಧಿ ವಸತಿ ನಿಗಮದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.ಮನೆಹಾನಿಯ ಬಗ್ಗೆ ಕೆಲವು ಹೊಸದಾಗಿ ಮಾಹಿತಿ ಅಥವಾ ದೂರು ಆಧರಿಸಿ ಪಟ್ಟಿಯನ್ನು ಪರಿಷ್ಕರಿಸಲಾಗುವುದು ಎಂದು ತಿಳಿಸಿದರು.ನಿಗಮದ ವೆಬ್ ಸೈಟ್ ನಲ್ಲಿ ಅಳವಡಿಸಿದ ಮಾಹಿತಿಯ ಪ್ರಕಾರ ಮನೆಹಾನಿಗೆ ಸಂಬಂಧಿಸಿದ ಪರಿಹಾರ ವಿತರಣೆ ಕಾರ್ಯ ಒಂದು ವಾರದೊಳಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.

ಸಂಪೂರ್ಣ ಸಾಲಮನ್ನಾ-ಒತ್ತಾಯ:

    ರೈತ ಮುಖಂಡರಾದ ಚೂನಪ್ಪ ಪೂಜಾರಿ ಮಾತನಾಡಿ, ತಕ್ಷಣ ಬೆಳೆಪರಿಹಾರ ಬಿಡುಗಡೆಗೊಳಿಸಬೇಕು ಹಾಗೂ ಬೆಳೆಸಾಲ ಸೇರಿದಂತೆ ಎಲ್ಲ ಬಗೆಯ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.ಕಬ್ಬು ಬೆಳೆಹಾನಿ 1.50 ಲಕ್ಷ ಹಾಗೂ ಉಳಿದ ಬೆಳೆಗೆ ಒಂದು ಲಕ್ಷ ಪರಿಹಾರ ನೀಡಬೇಕು. ಅದೇ ರೀತಿ ಜಾನುವಾರುಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು. ಸಂಪೂರ್ಣ ಮುಳುಗಡೆಯಾಗಿರುವ ಗ್ರಾಮಗಳ ಶಾಶ್ವತ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.

   ರೈತ ಮುಖಂಡರಾದ ಸಿದರಾಯ ಮೋದಗಿ ಮಾತನಾಡಿ, ಅವಿಭಕ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ ಎಂದರು.
ಹೊಲದಲ್ಲಿ ಕಟ್ಟಿರುವ ಮನೆಗಳು ಪ್ರವಾಹದಿಂದ ನಾಶವಾಗಿದ್ದು, ಅವುಗಳಿಗೆ ಪರಿಹಾರ ನೀಡುತ್ತಿಲ್ಲ.ಪ್ರವಾಹದಿಂದ ಹಾನಿ ಇಡೀ ಉತ್ತರ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಋಣಮುಕ್ತ ಪರಿಹಾರ ಕಾಯ್ದೆ ಅರ್ಜಿ ಸ್ವೀಕರಿಸುವ ಅವಧಿ ವಿಸ್ತರಿಸಬೇಕು. ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಸಿ, ತಕ್ಷಣವೇ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

   ರೈತ ಮುಖಂಡರಾದ ಪ್ರಕಾಶ್ ನಾಯಕ ಅವರು ಮಾತನಾಡಿ, ಸಂತ್ರಸ್ತರ ಕಷ್ಟಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಪರಿಹಾರ ಕಾರ್ಯಕೈಗೊಳ್ಳಬೇಕು ಮತ್ತು ಪ್ರತಿ ರೈತ ಕುಟುಂಬಕ್ಕೆ ಒಂದು ಹಸು ಅಥವಾ ಎಮ್ಮೆ ನೀಡಿ ಹೈನುಗಾರಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಮನೆ ನಿರ್ಮಾಣಕ್ಕೆ ಕನಿಷ್ಠ ಹದಿನೈದು ಲಕ್ಷ ಪರಿಹಾರ ನೀಡಬೇಕು ಎಂದರು.

   ಪ್ರವಾಹದಿಂದ ಹಾನಿಗೊಳಗಾಗಿರುವ ಜಮೀನುಗಳ ಸ್ವಚ್ಛತೆಗಾಗಿ ಆಯಾ ಕುಟುಂಬಗಳಿಗೆ ಮತ್ತು ಕೃಷಿ ಕಾರ್ಮಿಕರಿಗೂ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಒದಗಿಸಬೇಕು; ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಕೆಲವು ಮುಖಂಡರು ಸಲಹೆ ನೀಡಿದರು. ಜಯಶ್ರೀ ಗುರನ್ನವರ ಮತ್ತಿತರರು ಮಾತನಾಡಿದರು.

   ಶಾಸಕ ಅಭಯ್ ಪಾಟೀಲ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap