ಮಧುಗಿರಿ
ಪುರಸಭೆ ಅಧಿಕಾರಿಗಳು ಪಟ್ಟಣದ ಕೆಲ ಅಂಗಡಿ ಮಳಿಗೆಗಳಮೇಲೆ ದಾಳಿ ನಡೆಸಿ ಸುಮಾರು 400 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ಕನ್ನು ವಶಕ್ಕೆ ಪಡೆದು ಅಂಗಡಿ ಮಾಲೀಕರಿಗೆ ದಂಡ ವಿಧಿಸಿದ್ದಾರೆ.
ಪಟ್ಟಣದ ರಾಯರ ಮಠದ ಸಮೀಪದಿಂದ ತುಮಕೂರು ಗೇಟ್ ಹಾಗೂ ಮತ್ತಿತರ ಕಡೆ ಇರುವ ಅಂಗಡಿ ಮಳಿಗೆಗಳ ಮೇಲೆ ಪುರಸಭೆ ಮುಖ್ಯಾಧಿಕಾರಿ ಡಿ.ಲೋಹಿತ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಅಂಗಡಿಗಳಲ್ಲಿ ದಾಸ್ತಾನು ಮಾಡಿದ್ದ ನಿಷೇಧಿತ ಪ್ಲಾಸ್ಟಿಕ್ ಕವರ್‍ಗಳು ಮತ್ತು ತಟ್ಟೆ, ಲೋಟ ಸೇರಿದಂತೆ ಪ್ಲಾಸ್ಟಿಕ್ ಸಂಬಂಧಿತ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಸುಮಾರು 10 ಸಾವಿರ ರೂ.ಗಳವರೆಗೆ ದಂಡ ವಿಧಿಸಿದ್ದಾರೆ.
ಡಿ. ಲೋಹಿತ್ ಮಾತನಾಡಿ, ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದ್ದು, ವಾತಾವರಣ ಕಲುಷಿತಗೊಳಿಸುತ್ತಿದೆ. ಪುರಸಭೆ ವತಿಯಿಂದ ಹಲವಾರು ಬಾರಿ ಅಂಗಡಿ ಮಾಲೀಕರೊಂದಿಗೆ ಸಭೆ ನಡೆಸಿ ಅರಿವು ಮೂಡಿಸಿದ್ದರೂ ಸಹ, ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ ದಿಢೀರ್ ದಾಳಿ ನಡೆಸಿ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಮೊದಲ ಬಾರಿಗೆ ಅಲ್ಪ ಮಟ್ಟದ ದಂಡವನ್ನು ಮಾತ್ರ ವಿಧಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಅದೇ ಅಂಗಡಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳು ದೊರೆತರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ಲಾಸ್ಟಿಕ್‍ನಿಂದಾಗುವ ತೊಂದರೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿದಾಗ ಮಾತ್ರ ಇದರ ನಿಯಂತ್ರಣ ಸಾಧ್ಯ. ಸಾರ್ವಜನಿಕರು ಸಾಧ್ಯವಾದಷ್ಟು ಬಟ್ಟೆ ಬ್ಯಾಗುಗಳನ್ನು ಉಪಯೋಗಿಸಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಪರಿಸರ ಅಭಿಯಂತರೆ ಸೌಮ್ಯ, ಆರೋಗ್ಯ ನಿರೀಕ್ಷಕ ಬಾಲಾಜಿ, ಉಮೇಶ್ ಮತ್ತು ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.