1001 ಕಾಯಿ ಒಡೆದು ಹರಿಕೆ ತೀರಿಸಿದ ಬಿಜೆಪಿ

ದಾವಣಗೆರೆ:

     ಭಾರೀ ಬಹುಮತದೊಂದಿಗೆ ನರೇಂದ್ರ ಮೋದಿಯವರು 2ನೇ ಬಾರಿಗೆ ಪ್ರಧಾನಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಗುರುವಾರ ಸಂಜೆ ನಗರದ ಶ್ರೀಲಿಂಗೇಶ್ವರ ದೇವಸ್ಥಾನದಲ್ಲಿ 1001 ತೆಂಗಿನಕಾಯಿ ಒಡೆಯುವ ಮೂಲಕ ಹರಕೆ ತೀರಿಸಲಾಯಿತು.

      ಇಲ್ಲಿನ ಶ್ರೀಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ.ಶ್ರೀನಿವಾಸ ಹಾಗೂ ಕಾರ್ಯಕರ್ತರು, ದೇವಸ್ಥಾನದ ಎದುರು 1001 ತೆಂಗಿನ ಕಾಯಿ ಒಡೆಯುವ ಮೂಲಕ, ಪ್ರಧಾನಿಯಾಗಿ ಮೋದಿ ಪುನಾರಾಯ್ಕೆಯಾಗಲೆಂಬ ಹರಕೆ ತೀರಿಸಲಾಯಿತು.

      ಈ ಸಂದರ್ಭದಲ್ಲಿ ಮಾತನಾಡಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಸಿ.ಶ್ರೀನಿವಾಸ, ಲೋಕಸಭೆ ಚುನಾವಣೆ ಪೂರ್ವದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು, ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ, ವಿಶೇಷ ಪೂಜೆ ಸಲ್ಲಿಸಿ, 1001 ತೆಂಗಿನ ಕಾಯಿ ಒಡೆಯುವುದಾಗಿ ಹರಕೆ ಹೊತ್ತಿದ್ದೇವು. ಈಗ ಮತ್ತೊಮ್ಮೆ ಮೋದಿ ಪ್ರಧಾನಿಯಾಗಿರುವ ಹಿನ್ನೆಲೆಯಲ್ಲಿ ಹರಕೆ ತೀರಿಸುತ್ತಿದ್ದೇವೆ ಎಂದು ಹೇಳಿದರು.

      ಮಹಾಘಟ ಬಂಧನ್ ಸೇರಿದಂತೆ ದೇಶದ ಪ್ರಮುಖ ರಾಜಕೀಯ ಪಕ್ಷಗಳು, ತೃತೀಯ ರಂಗವು ಬಿಜೆಪಿ ಹಾಗೂ ನರೇಂದ್ರ ಮೋದಿ ಅವರನ್ನು ಕಟ್ಟಿ ಹಾಕಲು ಪ್ರಯತ್ನಿಸಿದ್ದರು. ಆದರೆ, ದೇಶದ ಜನತೆ ನರೇಂದ್ರ ಮೋದಿ, ಅಮಿತ್ ಶಾ ಸಾರಥ್ಯದ ಬಿಜೆಪಿಯನ್ನು 303 ಕ್ಷೇತ್ರಗಳಲ್ಲಿ ಭಾರೀ ಮತಗಳೊಂದಿಗೆ ಗೆಲ್ಲಿಸುವ ಮೂಲಕ ಮೋದಿ ಆಳ್ವಿಕೆಗೆ ಮತ್ತೊಮ್ಮೆ ಆಶೀರ್ವದಿಸಿದ್ದಾರೆ ಎಂದರು.

      ಕಳೆದ ಐೈದು ವರ್ಷದಲ್ಲಿ ಮೋದಿ ಆಳ್ವಿಕೆಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೇ, ಭ್ರಷ್ಟಾಚಾರ ರಹಿತವಾದ ಪಾರದರ್ಶಕ ಆಡಳಿತವನ್ನು ನೀಡಲಾಗಿದೆ. ಇದೀಗ ಮೋದಿ ಆಡಳಿತ ಮೆಚ್ಚಿದ ಜನರು ಮೋದಿ ಸರ್ಕಾರನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದಿದ್ದಾರೆ. ದೇಶದ ಭದ್ರತೆ, ಸುರಕ್ಷತೆ, ಅಭಿವೃದ್ಧಿ, ಜನ ಸಾಮಾನ್ಯರು, ರೈತರು, ಕಾರ್ಮಿಕರ ಹಿತ ಕಾಯುವ ವಿಚಾರದಲ್ಲಿ ಮೋದಿ ಹಿಂದೆ ನೋಡಿದವರಲ್ಲ. ಮುಂದಿನ 5 ವರ್ಷದಲ್ಲೂ ಇದಕ್ಕಿಂತ ಉತ್ತಮ ಆಡಳಿತ ಮೋದಿ ಸರ್ಕಾರ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

      ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ಟೀಕೆಯಿಂದ ಹಿಡಿದು ಇಲ್ಲದ ಅಪವಾದಗಳನ್ನೆಲ್ಲಾ ಮಾಡಿದ್ದ ಮಹಾ ಘಟ ಬಂಧನ್ ಸೇರಿದಂತೆ ದೇಶದ ಎದುರಾಳಿ ಪಕ್ಷಗಳ ನಾಯಕರಿಗೆ ದೇಶ ವಾಸಿಗಳು ಮುಟ್ಟಿ ನೋಡಿಕೊಳ್ಳುವಂತಹ ಪಾಠವನ್ನು ಕಲಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಪಕ್ಷದ ಯುವ ಮುಖಂಡರಾದ ಹೆಚ್.ಎನ್.ಶಿವಕುಮಾರ್, ಶಿವನಗೌಡ ಪಾಟೀಲ್, ಗೌತಮ್ ಜೈನ್, ಕುಮಾರ, ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap