ದಾವಣಗೆರೆ:
ಉಜ್ಜಯಿನಿ ಶ್ರೀಮರುಳಸಿದ್ದೇಶ್ವರ ಸ್ವಾಮಿಯ ಗೋಪುರದ ಶಿಖರಕ್ಕೆ ತೈಲಾಭಿಷೇಕಕ್ಕೆ ಈ ಬಾರಿ ಶ್ರೀಎಸ್.ಎ.ರವೀಂದ್ರನಾಥ್ ಅಭಿಮಾನಿ ಬಳಗದಿಂದ 101 ಟಿನ್ ಎಣ್ಣೆ ಸಮರ್ಪಿಸಲಾಗುವುದು ಎಂದು ಬಳಗದ ಅಧ್ಯಕ್ಷ ಧನಂಜಯ ಸಿ. ಕಡ್ಲೇಬಾಳ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2013ರಿಂದಲೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜಯಿನಿಯಲ್ಲಿ ನಡೆಯುವ ಶ್ರೀಮರುಳಸಿದ್ದೇಶ್ವರ ಸ್ವಾಮಿಯ ಗೋಪುರದ ಶಿಖರದ ತೈಲಾಭಿಷೇಕಕ್ಕೆ ಪ್ರತಿವರ್ಷವು ನಮ್ಮ ಬಳಗದಿಂದ ತಮ್ಮ ಕೈಲಾದಷ್ಟು ಎಣ್ಣೆ ಸಮರ್ಪಣೆ ಮಾಡುತ್ತಿದ್ದೇವು. ಆದರೆ, 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಸ್.ಎ.ರವೀಂದ್ರನಾಥ್ ಅವರು ಗೆಲುವು ಸಾಧಿಸಿದರೆ, 101 ಟಿನ್ ಎಣ್ಣೆ ಸಮರ್ಪಿಸುವುದಾಗಿ ಹರಕೆ ಹೊತ್ತಿಕೊಳ್ಳಲಾಗಿತ್ತು.
ಈ ಹಿನ್ನೆಲೆಯಲ್ಲಿ ಈ ಬಾರಿ 101 ಟಿನ್ ಎಂದರೆ, 1,515 ಲೀಟರ್ ಎಣ್ಣೆ ಸಮರ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಮೇ 10ರಂದು ಬೆಳಿಗ್ಗೆ 11.30ಕ್ಕೆ ದಾವಣಗೆರೆಯ ತರಳಬಾಳು ಬಡಾವಣೆಯ ಶ್ರೀಸಿದ್ದೇಶ್ವರ ಐಕ್ಯ ಮಂಟಪದಲ್ಲಿ ಸಭೆ ಸೇರಿ, ನಂತರ ಉಜ್ಜಯಿನಿಗೆ ಪ್ರಯಾಣ ಬೆಳೆಸಿ, ಅಂದು ಸಂಜೆ 4.30ಕ್ಕೆ ದೇವಸ್ಥಾನಕ್ಕೆ ತೈಲ ಸಮರ್ಪಿಸಲಾಗುವುದು ಎಂದರು.
ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ, ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿಯಾಗಿ ಹಾಗೂ ಈಗಾಗಲೇ ಗೆದ್ದಿರುವ ಸಿದ್ದೇಶ್ವರ್ ಅವರು ಕೇಂದ್ರ ಸಚಿವರಾಗಬೇಕೆಂದು ಹರಕೆ ಹೊತ್ತು ಬರುವುದಾಗಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ಮುಖಂಡ ಬಿ.ಎಸ್.ಜಗದೀಶ್ ಮಾತನಾಡಿ, ಹಿಂದೂ ಧರ್ಮದಲ್ಲಿ ಏನೇ ಶುಭ ಕಾರ್ಯ ನಡೆದರೂ, ದೇವರಲ್ಲಿ ಪಾರ್ಥನೆ ಮಾಡುವುದು ಒಂದು ನಂಬಿಕೆಯಾಗಿದೆ. ಅದರಂತೆ, ಎಸ್.ಎ.ರವೀಂದ್ರನಾಥ್ ಅವರ ಗೆಲುವಿಗೆ ದೈವ ಇಚ್ಛೆಯೂ ಇದೆ. ಆದ್ದರಿಂದ ನಾವು ಈ ಹಿಂದೆ ಹರಕೆ ಹೊತ್ತಕೊಂಡಿರುವಂತೆ, ಎಣ್ಣೆ ಸಮರ್ಪಿಸಿ ಹರಕೆ ತೀರಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಳಗದ ಮುಖಂಡರಾದ ಕಡ್ಲೇಬಾಳು ಬಸವರಾಜ್, ನರೇಂದ್ರ, ಶಿವಕುಮಾರ್, ವಿರೂಪಾಕ್ಷಪ್ಪ ಬೇತೂರು, ಉಮೇಶ್ ಪಾಟೀಲ್, ಸಿದ್ದೇಶ್ ಕೋಟೆಹಾಳ್, ತಿಮ್ಮೇಶ್ ಕರಾಟೆ, ಯಶವಂತ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
