ಪಾಲಿಕೆ ಕಾರ್ಯಾಚರಣೆ: 103 ಹಂದಿಗಳು ವಶ

ತುಮಕೂರು

    ತುಮಕೂರು ನಗರದಲ್ಲಿ ಹಂದಿ ಹಿಡಿಯುವ ಕಾರ್ಯಾಚರಣೆಯನ್ನು ತುಮಕೂರು ಮಹಾನಗರ ಪಾಲಿಕೆಯು ಕೈಗೊಂಡಿದ್ದು, ಸೋಮವಾರ ಬೆಳಗಿನಿಂದ ಸಂಜೆಯವರೆಗೆ ತಮಿಳುನಾಡಿನಿಂದ ಬಂದಿದ್ದ ತಂಡವೊಂದು ಸುಮಾರು 103 ಹಂದಿಗಳನ್ನು ಹಿಡಿದು ಸಾಗಿಸಿದೆ.

    ಇತ್ತೀಚೆಗೆ ತುಮಕೂರು ನಗರದ ಬಡ್ಡಿಹಳ್ಳಿಯಲ್ಲಿ ಶಾಲಾ ವಿದ್ಯಾರ್ಥಿಯೊಬ್ಬನಿಗೆ ಮೆದುಳುಜ್ವರ ಕಂಡುಬಂದ ಕಾರಣ, ನಗರದಲ್ಲಿ ಕಾಣಿಸಿಕೊಂಡಿರುವ ಹಂದಿಗಳನ್ನು ನಿರ್ಮೂಲನೆ ಮಾಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪಾಲಿಕೆ ಈ ಕ್ರಮ ಜರುಗಿಸಿದೆ.

     ಒಂದು ಸಶಸ್ತ್ರ ಪೊಲೀಸ್ ಪಡೆಯ ವ್ಯಾನ್ ಸಹಿತ ಪೊಲೀಸ್ ಬೆಂಗಾವಲಿನಲ್ಲಿ ತಮಿಳುನಾಡಿನಿಂದ ಬಂದಿದ್ದ 40 ಜನರ ತಂಡವೊಂದು ಸೋಮವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6.30 ರವರೆಗೆ ಕಾರ್ಯಾಚರಣೆ ನಡೆಸಿತು. ನಗರದ ವಿವಿಧ ಬಡಾವಣೆಗಳಿಂದ ಒಟ್ಟಾರೆ 103 ಹಂದಿಗಳನ್ನು ಹಿಡಿದು ಒಯ್ಯಲಾಯಿತು. ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್‍ಕುಮಾರ್ ನೇತೃತ್ವದಲಿ,್ಲ ಹೆಲ್ತ್‍ಇನ್ಸ್‍ಪೆಕ್ಟರ್‍ಗಳಾದ ನಟೇಶ್, ಜಿ.ಎನ್.ಸಚಿನ್, ಕೃತಿಕ್‍ಕುಮಾರ್, ಸಂತೋಷ್‍ಕುಮಾರ್, ಪ್ರಸನ್ನಕುಮಾರ್, ಜಯಣ್ಣ, ರುದ್ರೇಶ್ ಮತ್ತು ಸಿಬ್ಬಂದಿ ವರ್ಗದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

      ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆ, ಸಿದ್ದರಾಮೇಶ್ವರ ಬಡಾವಣೆ, ಮಾರುತಿನಗರ, ಭಾರತಿನಗರ, ವಿಶ್ವವಿದ್ಯಾನಿಲಯ ಹಿಂಭಾಗ, ಕೃಷ್ಣನಗರ, ಗಿರಿನಗರ, ಟುಡಾ ಲೇಔಟ್, ಗೋಕುಲ ಬಡಾವಣೆ, ಬಡ್ಡಿಹಳಿ,್ಳ ಕ್ಯಾತ್ಸಂದ್ರ, ಸಿದ್ದಗಂಗಾ ಮಠದ ಸುತ್ತಮುತ್ತ, ಬಂಡೆಪಾಳ್ಯ, ಎಚ್‍ಎಂಟಿ ಸುತ್ತಮುತ್ತ, ಖಾದರ್‍ನಗರ, ಶ್ರೀನಗರ, ಮಂಜುನಾಥನಗರ, ರಿಂಗ್ ರಸ್ತೆ ಮೊದಲಾದ ಕಡೆಗಳಲ್ಲಿ ಸೋಮವಾರ ಹಂದಿ ಹಿಡಿದು ಸಾಗಿಸುವ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ.

      ನಗರಾದ್ಯಂತ ಹಂದಿ ಹಾವಳಿ ಇದ್ದು, ಪಾಲಿಕೆ ಸದಸ್ಯರಿಂದ ಹಾಗೂ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಅಲ್ಲದೆ ಈಗ ಮೆದುಳುಜ್ವರ ಕಾಣಿಸಿರುವುದು ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಹಂದಿ ಹಿಡಿಯುವ ಕಾರ್ಯಾಚರಣೆ ನಗರದಲ್ಲಿ ಇನ್ನೂ ಸಹ ಮುಂದುವರಿಯುತ್ತದೆ ಎಂದು ಆರೋಗ್ಯಶಾಖೆಯ ಮೂಲಗಳು ಹೇಳಿವೆ. ತಮಿಳುನಾಡಿನ ತಂಡವೊಂದು ಹಂದಿ ಹಿಡಿಯುವಲ್ಲಿ ನುರಿತವರಾಗಿದ್ದು, ಅವರು ತಾವೇ ತರುವ ವಾಹನಗಳಲ್ಲಿ ಈ ಹಂದಿಗಳನ್ನು ಹಾಕಿಕೊಂಡು ನಗರದಿಂದ ಹೊರಕ್ಕೆ ಸಾಗಿಸುವರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link