ಲಾಕ್ ಡೌನ್ ನಿಯಮ ಉಲ್ಲಂಘನೆ : 10591 ವಾಹನಗಳ ಜಪ್ತಿ

ಬೆಂಗಳೂರು

      ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ 10,591 ವಾಹನಗಳನ್ನು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

      ನಗರದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಆಗ್ನೇಯ, ಈಶಾನ್ಯ, ಕೇಂದ್ರ ವೈಟ್ ಫೀಲ್ಡ್ ವಿಭಾಗಗಳಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿರುವ ಪೊಲೀಸರು 10,591 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

      ವಶಪಡಿಸಿಕೊಂಡಿರುವ ವಾಹನಗಳಲ್ಲಿ 9,815 ದ್ವಿಚಕ್ರ ವಾಹನಗಳಾಗಿದ್ದರೆ, 349 ಆಟೋಗಳು, 427 ಕಾರುಗಳಾಗಿವೆ. ವಶಪಡಿಸಿಕೊಂಡಿರುವ ವಾಹನಗಳನ್ನು ಠಾಣೆಗಳ ಆವರಣ ಹಾಗೂ ಇನ್ನಿತರ ನಿಗದಿತ ಸ್ಥಳಗಳಲ್ಲಿ ನಿಲ್ಲಿಸಲಾಗಿದ್ದು, ಲಾಕ್ ಡೌನ್ ಅವಧಿ ಮುಗಿಯುವವರೆಗೆ ಹಿಂತಿರುಗಿಸುವುದಿಲ್ಲ.

     ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಗರದ ಜನ, ಹಣ್ಣು, ತರಕಾರಿ, ಹಾಲು, ವೈದ್ಯಕೀಯ ಉಪಕರಣಗಳು ಸೇರಿದಂತೆ, ಇನ್ನಿತರ ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಎಲ್ಲಾ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಅನಗತ್ಯವಾಗಿ ರಸ್ತೆಗೆ ವಾಹನಗಳನ್ನು ತೆಗೆದುಕೊಂಡು ಬರುವವರ ವಾಹನಗಳನ್ನು ಮುಲಾಜಿಲ್ಲದೆ ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಎಚ್ಚರಿಕೆ ನೀಡಿದ್ದಾರೆ.

ತುರ್ತು ಪಾಸ್

     ಅಗತ್ಯ ವಸ್ತುಗಳ ಸರಬರಾಜುಗಳಿಗೆ ನೀಡಲಾಗುತ್ತಿದ್ದ ಪಾಸ್ ಸೌಲಭ್ಯವನ್ನು ತುರ್ತು ಕೆಲಸಗಳಿಗಾಗಿ 12 ಗಂಟೆಗಳ ಪಾಸ್ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ತುರ್ತು ಕೆಲಸದ ನಿಮಿತ್ತ ಮನೆಯಿಂದ ಹೊರಗೆಬಂದು ವಾಹನಗಳಲ್ಲಿ ಸಂಚರಿಸಲು 12 ಗಂಟೆಗಳ ಅವಧಿಯ ಪಾಸ್ ಅನ್ನು ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪಡೆಯಬಹುದಾಗಿದೆ.

     ಆಸ್ಪತ್ರೆಗಳಿಗೆ ಚಿಕಿತ್ಸೆಗೆ ತೆರಳಲು, ಸಂಬಂಧಿಕರ ಅನಾರೋಗ್ಯ ವಿಚಾರಿಸಲು, ಅಂತ್ಯ ಸಂಸ್ಕಾರಗಳಲ್ಲಿ ಭಾಗಿಯಾಗಲು ಪಾಸ್ ದೊರೆಯಲಿದ್ದು, ಸ್ಥಳೀಯ ಠಾಣೆಗೆ ಭೇಟಿಕೊಟ್ಟು, ಪೂರಕ ದಾಖಲೆಗಳನ್ನು ಒದಗಿಸಿದರೆ, ಅಗತ್ಯತೆ ಇರುವುದನ್ನು ಮನವರಿಕೆ ಮಾಡಿಕೊಂಡು ಪಾಸ್ ವಿತರಿಸಲಾಗುತ್ತದೆ.

     ಗುರುತಿನ ಚೀಟಿ, ಮೊಬೈಲ್ ನಂಬರ್, ಇನ್ನಿತರ ವಿವರಗಳನ್ನು ನೀಡಿ, ತಮಗಿರುವ ತುರ್ತು ಅವಶ್ಯಕತೆ ಮಾಹಿತಿಯನ್ನು ಒದಗಿಸಿದರೆ, ತುರ್ತು ಪಾಸ್ ಲಭ್ಯವಿದ್ದು, ಪ್ರತಿ ಠಾಣೆಗೆ 200 ತುರ್ತು ಪಾಸ್‌ಗಳ ಅವಕಾಶ ಕಲ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap