ಒಂದೇ ದಿನ 119 ದಾಖಲು: ಸಾವಿರದ ಗಡಿ ದಾಟಿದ ಸೋಂಕು

ತುಮಕೂರು:

     ಶನಿವಾರ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನೂರರ ಗಡಿ ದಾಟಿ ಹೋಗಿದ್ದು, ದಿನೆ ದಿನೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಲೇ ಇದೆ. ಒಂದೇ ದಿನ 119 ಮಂದಿಗೆ ಪಾಸಿಟಿವ್ ವರದಿ ಬಂದಿರುವುದನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಬಿಡುಗಡೆ ಮಾಡಿರುವ ಆರೋಗ್ಯ ಬುಲೆಟಿನ್‍ನಲ್ಲಿ ಉಲ್ಲೇಖಿಸಲಾಗಿದೆ.

     119 ಪ್ರಕರಣಗಳ ಪೈಕಿ ಅತಿ ಹೆಚ್ಚು ತುಮಕೂರು ತಾಲ್ಲೂಕಿನಿಂದಲೇ ವರದಿಯಾಗಿವೆ. ತುಮಕೂರು-49, ಪಾವಗಡ ಮತ್ತು ಚಿ.ನಾ.ಹಳ್ಳಿ ತಲಾ 13, ತಿಪಟೂರು ಮತ್ತು ಮಧುಗಿರಿಯಲ್ಲಿ ತಲಾ 9, ಕೊರಟಗೆರೆ ಮತ್ತು ಕುಣಿಗಲ್ ತಲಾ 8, ತುರುವೇಕೆರೆ 5, ಶಿರಾ 4, ಗುಬ್ಬಿಯಲ್ಲಿ 1 ಪ್ರಕರಣದ ವರದಿಯಾಗಿದೆ. ಪ್ರತಿದಿನ ಒಂದಲ್ಲ ಒಂದು ತಾಲ್ಲೂಕಿನಲ್ಲಿ ಶೂನ್ಯ ಪ್ರಕರಣ ಕಂಡುಬರುತ್ತಿತ್ತು. ಶನಿವಾರದ ವರದಿಯಲ್ಲಿ ಎಲ್ಲ ತಾಲ್ಲೂಕುಗಳಲ್ಲಿಯೂ ಪಾಸಿಟಿವ್ ವರದಿ ದೃಢಪಟ್ಟಿರುವುದು ಕಂಡುಬಂದಿದೆ. ನಾಲ್ಕು ಮಂದಿ ಸೋಂಕಿತರು ಮರಣ ಹೊಂದಿದ್ದಾರೆ.

     ಜಿಲ್ಲೆಯಲ್ಲಿ ಒಟ್ಟು 1110 ಕೊರೊನಾ ಪಾಸಿಟಿವ್ ಪ್ರಕರಣಗಳಿದ್ದು, ಇದರಲ್ಲಿ ಶನಿವಾರದಂದು 43 ಮಂದಿ ಪಾಸಿಟಿವ್ ವ್ಯಕ್ತಿಗಳು ಆಸ್ಪತ್ರೆಯಿಂದ ಗುಣಮುಖರಾಗಿ ಮನೆ ಸೇರಿದ್ದಾರೆ. ಈವರೆಗೆ ಒಟ್ಟು 595 ಮಂದಿ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 473 ಸಕ್ರಿಯ ಪ್ರಕರಣಗಳಿವೆ.

     ಮೃತಪಟ್ಟ 119 ಮಂದಿಯಲ್ಲಿ 44 ಮಂದಿ ಸಿಂಪ್ಟಮ್ಯಾಟಿಕ್ (ರೋಗ ಲಕ್ಷಣ ಸಹಿತ ಸೋಂಕಿತರು), ಎ ಸಿಂಪ್ಟಮ್ಯಾಟಿಕ್-69 (ರೋಗ ಲಕ್ಷಣರಹಿತ), ಪ್ರಾಥಮಿಕ ಸಂಪರ್ಕದ 26 ಮಂದಿ, ಒಬ್ಬರು ಪೊಲೀಸರು, 69 ಪುರುಷರು, 50 ಮಹಿಳೆಯರು, 5 ವರ್ಷದೊಳಗಿನ 6 ಮಕ್ಕಳು, 60 ವರ್ಷ ಮೇಲ್ಪಟ್ಟ 10 ಮಂದಿ ಸೇರಿದ್ದಾರೆ.

     ಚಿಕ್ಕನಾಯಕನಹಳ್ಳಿ ತಾಲ್ಲೂಕು ಲಿಂಗಾಯಿತರ ಬೀದಿ ಸೀಲ್‍ಡೌನ್ ಪ್ರದೇಶದಲ್ಲಿ ಕೊರೊನಾದಿಂದ ಕ್ವಾರಂಟೈನ್‍ಗೆ ಒಳಗಾಗಿದ್ದ 11 ಮಂದಿ, ಕೆ.ಸಿ.ಪಾಳ್ಯದ ಕ್ವಾರಂಟೈನ್‍ನಲ್ಲಿದ್ದ ಇಬ್ಬರು ವ್ಯಕ್ತಿಗಳು ಸೇರಿ, ಹುಳಿಯಾರು ಹೋಬಳಿಯಲ್ಲಿ 13 ಜನರಿಗೆ ಒಂದೇ ದಿನ ಪಾಸಿಟಿವ್ ವರದಿ ಬಂದಿದೆ. ಎಲ್ಲರನ್ನೂ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆತರಲಾಗಿದೆ.

     ದಿನೆ ದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಇದೊಂದು ಸಾಮಾನ್ಯ ಸುದ್ದಿ ಎನ್ನುವಂತಾಗಿದೆ. ಈವರೆಗೆ 25 ಅಥವಾ 50 ರವರೆಗೆ ಸೋಂಕು ದೃಢಪಟ್ಟ ಸಂದರ್ಭದಲ್ಲಿ ಅತ್ಯಂತ ಆತಂಕದಿಂದ ನೋಡುತ್ತಿದ್ದವರಿಗೆ ಈಗ ಒಂದೇ ದಿನ ಶತಕದ ಗಡಿ ದಾಟಿ ಮುನ್ನುಗ್ಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಸಭೆಯೊಂದರಲ್ಲಿ ಮಾತನಾಡುತ್ತಾ ಕೊರೊನಾ ಪ್ರಕರಣಗಳು ಇಳಿಮುಖವಾಗುವ ಲಕ್ಷಣಗಳಿವೆ ಎಂದು ಹೇಳಿದ್ದರು. ಆದರೆ ದಿನೆ ದಿನೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅಷ್ಟೇ ಅಲ್ಲ, ಮರಣ ಹೊಂದುವವರ ಸಂಖ್ಯೆಯೂ ಹೆಚ್ಚುತ್ತಿದೆ.

      ಜಿಲ್ಲೆಯಲ್ಲಿ ದಿನೆ ದಿನೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದು ಕಡೆ ಸರ್ಕಾರ ವಿವಿಧ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಸೂಚಿಸುತ್ತಿದ್ದರೂ ತಹಬದಿಗೆ ಬಂದಿಲ್ಲ. ಈಗಾಗಲೇ ಸಮುದಾಯದ ಹಂತಕ್ಕೆ ಕೊರೊನಾ ಬಂದು ನಿಂತಿದ್ದು, ತಾಲ್ಲೂಕಿನಿಂದ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಪ್ರತಿ ಗ್ರಾಮದಲ್ಲಿಯೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಕೊರೊನಾ ನಿಗ್ರಹಿಸುವ ಅವಶ್ಯಕತೆ ಇದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap