ತುಮಕೂರು
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ)ವು 2012 ರಿಂದ 2018-19 ರ ಅಂತ್ಯದವರೆಗೆ “ಕೆರೆ ಅಭಿವೃದ್ಧಿ ಶುಲ್ಕ”ವಾಗಿ ಒಟ್ಟು 12 ಕೋಟಿ 21 ಲಕ್ಷ 66,105 ರೂ.ಗಳನ್ನು ಸಂಗ್ರಹ ಮಾಡಿದೆ.
ತುಮಕೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಇಮ್ರಾನ್ ಪಾಷ ಅವರು “ಈವರೆಗೆ ಸಂಗ್ರಹಿಸಲಾಗಿರುವ ಕೆರೆ ಅಭಿವೃದ್ಧಿ ಶುಲ್ಕದ ಮೊತ್ತ ಹಾಗೂ ಸದರಿ ಮೊತ್ತವನ್ನು ಕೆರೆ ಅಭಿವೃದ್ಧಿಗೆ ಬಳಕೆ ಮಾಡಿರುವ ಬಗ್ಗೆ” ಮಾಹಿತಿ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಾಧಿಕಾರಕ್ಕೆ ಮಾರ್ಚ್ 2 ರಂದು ಸಲ್ಲಿಸಿದ್ದ ಅರ್ಜಿಗೆ ಪ್ರಾಧಿಕಾರದ ಸಾರ್ವಜನಿಕ ಮಾಹಿತಿ ಅಧಿಕಾರಿಯು ಏಪ್ರಿಲ್ 3 ರಂದು ನೀಡಿರುವ ವಿವರಣೆ (ನಂ. ಟಿಯುಡಿಎ/ಮಾ.ಹ./91-12/2018-19, ದಿನಾಂಕ 03-04-2019)ಯಲ್ಲಿ ಈ ಸಂಗತಿ ಇದೆ.
ವರ್ಷವಾರು ವಿವರ
ಪ್ರಾಧಿಕಾರವು `ಕೆರೆ ಅಭಿವೃದ್ಧಿ ಶುಲ್ಕ’ವನ್ನು ಸಂಗ್ರಹ ಮಾಡಿರುವ ಮೊತ್ತದ ವಿವರ ವರ್ಷವಾರು ಈ ಕೆಳಕಂಡಂತಿದೆ:-
ಎ)2012 ರ ಜುಲೈನಿಂದ 2013 ರ ಮಾರ್ಚ್‍ವರೆಗೆ 1,90,92,460 ರೂ., ಬಿ)2013-14 ನೇ ಸಾಲಿನಲ್ಲಿ 1,26,59,000 ರೂ., ಸಿ)2014-15 ರಲ್ಲಿ 2,19,53,399 ರೂ., ಡಿ) 2015-16 ರಲ್ಲಿ 2,41,66,310 ರೂ., ಇ)2016-17 ರಲ್ಲಿ 1,72,67,967 ರೂ., ಎï) 2017-18 ರಲ್ಲಿ 1,60,88,928 ರೂ., ಜಿ) 2018-19 ರಲ್ಲಿ 1,09,38,041 ರೂ. -ಹೀಗೆ ಒಟ್ಟು 12,21,66,105 ರೂ. ಸಂಗ್ರಹವಾಗಿದೆ.
3 ಕೆರೆಗಳಿಗೆ 8.5 ಕೋಟಿ
ಸಂಗ್ರಹಗೊಂಡಿರುವ ಈ ಮೊತ್ತದಲ್ಲಿ ಮೂರು ಕೆರೆಗಳ ಅಭಿವೃದ್ಧಿಗಾಗಿ ಒಟ್ಟು 8 ಕೋಟಿ 50 ಲಕ್ಷ ರೂ.ಗಳನ್ನು ಬಳಸಿಕೊಳ್ಳಲು ಪ್ರಾಧಿಕಾರವು 2019-20 ನೇ ಸಾಲಿನ ತನ್ನ ಆಯವ್ಯಯದಲ್ಲಿ ಕಾಯ್ದಿರಿಸಿದೆ.
ವಿವರ ಹೀಗಿದೆ:-
ತುಮಕೂರು ತಾಲ್ಲೂಕಿನ ಗೂಳೂರು ಗ್ರಾಮದ ಕೆರೆಯ ಅಭಿವೃದ್ಧಿಗಾಗಿ 3 ಕೋಟಿ 50 ಲಕ್ಷ ರೂ.ಗಳನ್ನು ತೆಗೆದಿರಿಸಲಾಗಿದೆ. ತುಮಕೂರು ನಗರದ ಉಪ್ಪಾರಹಳ್ಳಿಯ ಕೆರೆ ಅಭಿವೃದ್ಧಿಗಾಗಿ 2 ಕೋಟಿ 50 ಲಕ್ಷ ರೂ.ಗಳನ್ನು ಮೀಸಲಿರಿಸಲಾಗಿದೆ. ಇನ್ನು ತುಮಕೂರು ತಾಲ್ಲೂಕಿನ ಕೆಸರುಮಡು, ಜೋಗಿಕಟ್ಟೆ ಅಭಿವೃದ್ಧಿಗಾಗಿ 2 ಕೋಟಿ 50 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ.
ಮಿಕ್ಕ ಶೇ.25 ರಷ್ಟು ಅಂದರೆ 3,05,41,526 ರೂ.ಗಳನ್ನು `ಮಂಡಲಿ’ಗೆ ವರ್ಗಾಯಿಸಬೇಕಾಗುವುದು ಎಂದು ಪ್ರಾಧಿಕಾರವು ಇಮ್ರಾನ್ ಪಾಷ ಅವರಿಗೆ ಮಾಹಿತಿ ನೀಡಿದೆ. ಆದರೆ `ಮಂಡಲಿ` ಯ ಪೂರ್ಣ ಹೆಸರು, ವಿಳಾಸದ ಬಗ್ಗೆ ಯಾವುದೇ ವಿವರಣೆಯನ್ನು ಪ್ರಾಧಿಕಾರ ನೀಡಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
