ಬರ ನಿರ್ವಹಣೆಗೆ 12 ಕೋಟಿ ಅನುದಾನ: ಡಿಸಿ

ದಾವಣಗೆರೆ:

     ಬರ ನಿರ್ವಹಣೆಗಾಗಿ ಜಿಲ್ಲೆಗೆ ಜನವರಿಯಿಂದ ಈ ವರೆಗೂ ಒಟ್ಟು 12 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ತಿಳಿಸಿದರು.

     ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಪರಿಸ್ಥಿತಿಯ ನಿರ್ವಹಣೆಗಾಗಿ ಸರ್ಕಾರ ಜಿಲ್ಲೆಗೆ ಜನವರಿಯಿಂದ ಇಲ್ಲಿಯ ವರೆಗೂ 12 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಈಗಾಗಲೇ ಆಯಾ ತಾಲೂಕುಗಳ ತಹಶೀಲ್ದಾರ್‍ಗಳಿಗೆ ಹಾಗೂ ತಾಲೂಕು ಪಂಚಾಯತ್ ಇಒಗಳಿಗೆ ಹಂಚಿಕೆ ಮಾಡಿ, ಜನ-ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಪಶುಗಳಿಗೆ ಮೇವಿನ ಕೊರತೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಾರದ ದನ-ಕರು:

     ಬರಗಾಲದ ಹಿನ್ನೆಲೆಯಲ್ಲಿ ಮೇವಿನ ಕೊರತೆ ಇರುವ ಜಗಳೂರು ತಾಲೂಕಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಗೋಶಾಲೆ ಆರಂಭಿಸಿ, ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಈ ವರೆಗೂ ಗೋಶಾಲೆಗೆ ದನ-ಕರುಗಳು ಬಂದಿಲ್ಲ. ಇನ್ನೂ ಮುಂದೆ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.

ಮೇವು ಖರೀದಿಗೆ ಯೋಚನೆ:

     ಜಿಲ್ಲೆಯಲ್ಲಿ ಇನ್ನೂ 10 ವಾರಗಳಿಗೆ ಸಾಕಾಗುವಷ್ಟು ಮೇವು ದಾಸ್ತಾನು ಇದೆ. ಈಗಾಗಲೇ ಜಿಲ್ಲೆಯ ಕೆಲ ಭಾಗಗಳಲ್ಲಿ ಭತ್ತ ಕೋಯ್ಲಿಗೆ ಬಂದಿದ್ದು, ಭತ್ತ ಕಟಾವು ಆದ ತಕ್ಷಣವೇ ಮೇವು ಖರೀದಿಸಿ, ದಾಸ್ತಾನು ಮಾಡಲಾಗುವುದು ಎಂದರು.

ಇನ್ನೊಂದು ಯೋಜನೆಗೆ ಪ್ರಸ್ತಾವನೆ:

     ಜಿಲ್ಲಾ ಪಂಚಾಯತ್ ಸಿಇಒ ಹೆಚ್.ಬಸವರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ 33 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿವೆ. ಇವೆಲ್ಲವೂ ಸುಸ್ಥಿತಿಯಲ್ಲಿರುವ ಕಾರಣ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ. ಇತ್ತೀಚೆಗೆ ಇನ್ನೊಂದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಯೋಜನೆಗೆ ಮಂಜೂರಾತಿ ದೊರೆತು ಅನುಷ್ಠಾನಗೊಂಡರೆ, ಪ್ರಸ್ತುತ ಕೆಲ ಹಳ್ಳಿಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆಯೂ ನೀಗಲಿದೆ ಎಂದು ಹೇಳಿದರು.

      ಜಿಲ್ಲೆಯ ಜಗಳೂರು ಹಾಗೂ ದಾವಣಗೆರೆ ತಾಲೂಕುಗಳ 67 ಗ್ರಾಮಗಳನ್ನು ಹೊರತು ಪಡಿಸಿದರೆ, ಇನ್ನುಳಿದ ತಾಲೂಕುಗಳಲ್ಲಿ ಹೇಳಿಕೊಳ್ಳುವಂತೆ ಕುಡಿಯುವ ನೀರಿನ ತೊಂದರೆ ಇಲ್ಲ. ಸಣ್ಣ-ಪುಟ್ಟ ತೊಂದರೆಗಳಿದ್ದರೂ ಗ್ರಾಮ ಪಂಚಾಯತ್ ಮಟ್ಟದಲ್ಲಿಯೇ ನೀರಿನ ಸಮಸ್ಯೆ ಬಗೆಹರಿಸಲಾಗುತ್ತಿದೆ. ಆದರೆ, ಜಗಳೂರು ಹಾಗೂ ದಾವಣಗೆರೆ ತಾಲೂಕುಗಳಲ್ಲಿ ಗುರುತಿಸಿರುವ ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್ ಹಾಗೂ ಖಾಸಗಿ ಬೊರ್‍ವೆಲ್‍ಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರೆ ಮಾಡಿ:

     ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ, ಸಹಾಯವಾಣಿಗೆ ಕರೆ ಮಾಡುವಂತೆ ಎಲ್ಲಾ ಊರುಗಳಲ್ಲೂ ಫಲಕ ಅಳವಡಿಸಲಾಗಿದ್ದು, ಆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ, ತಕ್ಷಣದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಮೂಲಕ ಸ್ಪಂದಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನರ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap