ಅಂತರ್ಜಲ ಅಭಿವೃದ್ಧಿಗಾಗಿ 41 ತಾಲೂಕುಗಳಿಗೆ 1201 ಕೋಟಿ ರೂ ಅನುದಾನ: ಜೆ.ಸಿ.ಎಂ.

ಚಿಕ್ಕನಾಯಕನಹಳ್ಳಿ
    ಕೇಂದ್ರ ಸರ್ಕಾರ ಅಟಲ್ ಭೂಜಲ ಯೋಜನೆಯಲ್ಲಿ ರಾಜ್ಯ ಸಣ್ಣ ನೀರಾವರಿ ಇಲಾಖೆಗೆ 1201 ಕೋಟಿ ರೂ ಅನುದಾನ ನೀಡಿದೆ, ಈ ಹಣವನ್ನು ಅಂತರ್ಜಲ ಶೋಷಿತ ರಾಜ್ಯದ 41 ತಾಲೂಕುಗಳಲ್ಲಿ  ಅಂತರ್ ಜಲ ಅಭಿವೃದ್ದಿಗೆ ಬಳಸಲಾಗುವುದು ಎಂದು  ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
    ಅಟಲ್ ಭೂ ಜಲ್ ಯೋಜನೆ ಅನುಷ್ಠಾನ ಕುರಿತಂತೆ ರಾಜ್ಯ ಮಟ್ಟದ ಸಭೆಯನ್ನು  ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ  ಏರ್ಪಡಿಸಿದ್ದು, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಈ ಸಂಬಂಧ  ಅಂತರ್ ಜಲ ಅಭಿವೃದ್ದಿ ಹಾಗೂ ಜಲ ಸಂರಕ್ಷಣೆಯನ್ನು ತಳ ಮಟ್ಟದಿಂದ ಸಂಶೋಧನೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ  ಸೂಚನೆ ನೀಡಿದರು.
   ಕೇಂದ್ರ ಸರ್ಕಾರ, ಕರ್ನಾಟಕ ರಾಜ್ಯ ಸಣ್ಣ ನೀರಾವರಿ ಇಲಾಖೆ ಮೇಲೆ ನಂಬಿಕೆ ಇಟ್ಟು ಜಲಸಂರಕ್ಷಣೆಯ ಹೊಸ ಮೂಲಗಳ ಮಾಹಿತಿಯನ್ನು ಕೇಳಿದೆ, ನೀರು ಕೃಷಿಯಲ್ಲಿ ಹೆಚ್ಚು ಬಳಕೆಯಾಗುತ್ತಿದ್ದು ಜಮೀನಿನಲ್ಲಿ ಅನಾವಶ್ಯಕವಾಗಿ ನೀರು ಪೋಲು ಮಾಡುವ ಜಮೀನುಗಳನ್ನು ಗುರುತಿಸಿ ರೈತರಿಗೆ ತಿಳುವಳಿಕೆ ಹೇಳುವ ಕೆಲಸವನ್ನು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಡಬೇಕಾಗಿದೆ ಎಂದರು.
ಜಲ್ ಜೀವನ್ ಯೋಜನೆ:
 
   ಕೇಂದ್ರ ಸರ್ಕಾರ ಜಲ್ ಜೀವನ್ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಿದ್ದು ಇದರಲ್ಲಿ ರಾಜ್ಯದ  ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿನ ಪ್ರತಿಯೊಂದು ಮನೆಗೆ ಕೊಳಾಯಿಗಳನ್ನು ಹಾಕಿಸಲು ಪೈಪ್ ಲೈನ್ ಮಾಡಿಸಲಾಗುವುದು, ಇದಕ್ಕಾಗಿ ಪ್ರತಿ ಮನೆಗೆ 18ಸಾವಿರ ರೂ ಖರ್ಚು ತಗುಲಲಿದೆ ಎಂದರು,   ನೀರನ್ನು ಮನೆಯವರು ಮಿತವಾಗಿ ಬಳಸುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದರು.
   ರಾಗಿ ಬೆಳೆಗಾರರಿಗೆ ನೀಡುವ ಸ್ಪಿಂಕ್ಲರ್ ಗಳನ್ನು   ಅರ್ಹ ಫಲಾನುಭವಿಗಳಿಗೆ ನೀಡಿ ಎಂದು ಕೃಷಿ ಇಲಾಖೆ ಅಧಿಕಾರಿಗೆ ಸೂಚಿಸಿದರು, ತೋಟಗಾರಿಕೆಯಲ್ಲಿ ವಾಣಿಜ್ಯ ಬೆಳೆಗಳಾದ ದಾಳಿಂಬೆ, ಗೋಡುಂಬೆ, ಜಮ್ಮು ನೇರಳೆಯಂತಹ ಬೆಳೆಗಳನ್ನು ಬೆಳೆಯಲು  ಪ್ರೋತ್ಸಾಹಿಸಿ ಇದಕ್ಕಾಗಿ ಬಂಜರು ಭೂಮಿ ಹಾಗೂ ವ್ಯರ್ಥವಾಗಿ ಇರುವ ಜಮೀನನ್ನು ಗುರುತಿಸಿ ಬೆಳೆ ಬೆಳೆಯಲು ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಸೂಚಿಸಿದರು.
   ಅರಣ್ಯ ಇಲಾಖೆಯು ಅರಣ್ಯದಲ್ಲಿ ಮಳೆ ನೀರು ಸಂರಕ್ಷಣೆ ಮಾಡಲು ಸ್ಥಳವನ್ನು ಗುರ್ತಿಸಬೇಕು, ಮೀನುಗಾರಿಕೆ ಇಲಾಖೆಯು ರೈತರ ಜಮೀನಿಗಳಲ್ಲಿ ಹೆಚ್ಚು ಕಾಲ ನೀರು ನಿಲ್ಲುವಂತಹವುಗಳನ್ನು ಕೃಷಿ ಹೊಂಡಗಳನ್ನು ಗುರ್ತಿಸಿ ಅಂತಹ ರೈತರಿಗೆ ಮೀನು ಸಾಕಾಣಿಕೆಗಾಗಿ ಮೀನು ಮರಿಗಳನ್ನು ನೀಡಿ ಎಂದರು.
   ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ನಿರ್ದೇಶಕ ಮೃತ್ಯುಂಜಯಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಶುಭ ಕಲ್ಯಾಣ್, ತಹಶೀಲ್ದಾರ್ ತೇಜಸ್ವಿನಿ,  ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಿಡಿಓಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link