ಕೆಂಪೇಗೌಡರ 121 ಅಡಿ ಪ್ರತಿಮೆಗೆ ತೀರ್ಮಾನ : ಡಿ.ಸಿ.ಎಂ ಅಶ್ವಥ್‍ನಾರಾಯಣ್

ಕುಣಿಗಲ್

   ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಾಡಪ್ರಭು ಕೆಂಪೇಗೌಡರ 121 ಅಡಿ ಎತ್ತರದ ಪ್ರತಿಮೆಯನ್ನು 27 ಎಕರೆ ಜಮೀನಿನಲ್ಲಿ ನಿರ್ಮಿಸಲು ಸಂಕಲ್ಪಮಾಡಿದ್ದು ಅತಿ ಶೀಘ್ರವಾಗಿ ಚಾಲನೆ ದೊರೆಯಲಿದ್ದು ಇದಕ್ಕೆ ನೀವೂ ಸಕ್ಷಾಭೂತರಾಗುವಿರಿ ಎಂದು ರಾಜ್ಯ ಉಪಮುಖ್ಯ ಮಂತ್ರಿ ಡಾ. ಸಿ.ಎನ್ ಅಶ್ವಥ್‍ನಾರಾಯಣ್ ತಿಳಿಸಿದರು.

   ಅವರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಂಪೂರ್ಣರಾಮಾಯಣ ಎಂಬ ಪೌರಾಣಿಕನಾಟಕ ಉದ್ಘಾಟನೆ ಮಾಡಿ ಮಾತನಾಡಿದರು. ಕೆಂಪೇಗೌಡರು ನಿರ್ಮಿಸಿದಂತ ಕ್ಷೇತ್ರಗಳು ಕುಣಿಗಲ್ ತಾಲ್ಲೂಕಿನಲ್ಲಿಯೂ ಸಹ ಗುರುತಿಸಲಾಗಿದ್ದು ಅವುಗಳ ಅಭಿವೃದ್ದಿಗೆ ಒತ್ತುಕೊಡುವುದರ ಜೊತೆಗೆ ಬೆಂಗಳೂರು ವಿಮಾನ ನಿಲ್ದಾಣದ ಬಳಿ ನಾಡ ಪ್ರಭು ಕೆಂಪೇಗೌಡರ 121 ಅಡಿ ಎತ್ತರದ ಪ್ರತಿಮೆ ನಿರ್ಮಿಸಲು ಸಂಕಲ್ಪ ಮಾಡಿರುವುದಾಗಿ ತಿಳಿಸಿದ ಅವರು ಕುಣಿಗಲ್ ಪಟ್ಟಣದಲ್ಲಿ ರಂಗಮಂದಿರವನ್ನು ನಿರ್ಮಿಸಲು ಸಹಕಾರ ನೀಡುವುದರ ಜೊತೆಗೆ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ ಅವರು ದೊಡ್ಡಕೆರೆ ಸೋಮೇಶ್ವರ ದೇವಾಲಯ ಅಭಿವೃದ್ದಿ ಪಡಿಸಲು ನೆರವು ನೀಡುವುದಾಗಿ ತಿಳಿಸಿದರು.

   ನಾನು ಒಬ್ಬ ವೈದ್ಯನಾಗಿ ಸೇವೆ ಮಾಡುತ್ತಿದ್ದವರನು ರಾಜಕೀಯಕ್ಕೆ ಬಂದಿದ್ದು ಸಮಾಜ ಸೇವೆ ಮಾಡಲು ಬಂದವನೇ ಹೊರೆತು ಯಾರದೋ ಮೇಲೆ ಹಗೆತೀರಿಸಿಕೊಳ್ಳಲು ಅಲ್ಲಾ ಎಂದ ಅವರು ನನ್ನ ಕ್ಷೇತ್ರದಲ್ಲಿ ಯಾವುದೇ ಒಂದು ಜಾತಿಗೆ ಸೀಮಿತವಾಗಿ ಕೆಲಸ ಮಡಿದವನಲ್ಲ ಮುಸ್ಲೀಂರು ಸೇರಿದಂತೆ ಎಲ್ಲಾ ಜಾತಿ ಧರ್ಮದವನ್ನು ಪ್ರೀತಿಸುತ್ತ ಅವರ ಸೇವೆ ಮಾಡುತ್ತ ಬಂದಿದ್ದೇನೆ

    ಅದರಿಂದಲೇ ನನ್ನ ಮೂರು ಬಾರಿ ಶಾಸಕನನ್ನಾಗಿ ಮಾಡಿದ್ದಾರೆ ಎಂದ ಉಪಮುಖ್ಯ ಮಂತ್ರಿ ಪಕ್ಷ ಗುರುತಿಸಿ ಅಧಿಕಾರ ಸ್ಥಾನಮಾನ ನೀಡಿದಾಗ ಧ್ವನಿ ಇಲ್ಲದ ಜನರಿಗೆ, ನಿರ್ಗತಿಕರಿಗೆ ದೀನದಲಿತರ ಸೇವೆ ಮಾಡುವ ಮೂಲಕ ಜನ ಮೆಚ್ಚುವ ಉತ್ತಮ ಕೆಲಸವನ್ನು ಮಾಡುವ ಮೂಲಕ ಪಕ್ಷದ ಋಣ ತೀರಿಸಬೇಕು ಆಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದ ಅವರು ಕುಣಿಗಲ್ ತಾಲ್ಲೂಕಿಗೆ ಈ ಹಿಂದಿನಿಂದಲೂ ನನಗೆ ಅವಿನಾಬಾವ ಸಂಬಂಧವಿದ್ದು ಇಲ್ಲಿನ ಹಲವು ಕಾರ್ಯಕ್ರಮಗಳಿಗೆ ಬಂದು ಹೋಗುತ್ತಿದ್ದೆ ಅಂದು ನಾನೇನು ದೊಡ್ಡವ್ಯಕ್ತಿಯಂತೆ ಹೆಸರು ಮಾಡಿದವನಲ್ಲ ಆದರೆ ಇಂದು ಭಾರತೀಯ ಜನತಾಪಕ್ಷ ನನಗೆ ಒಂದು ಸ್ಥಾನಮಾನ ನೀಡಿ ಗೌರವಿಸಿದೆ ಅದಕ್ಕೆ ನಾನು ದ್ರೋಹ ಬಗೆಯದಂತೆ ಜನರ ಸೇವೆ ಮಾಡುವ ಮೂಲಕ ಸರ್ಕಾರದ ಸೌಲತ್ತುಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದರು.

     ದೇಶ ಮತ್ತು ರಾಜ್ಯದಲ್ಲಿ ಸ್ಥಿರ ಸರ್ಕಾರ ಇದ್ದರೆ ಮಾತ್ರ ಸುಭದ್ರಸರ್ಕಾರದೊಂದಿಗೆ ಉತ್ತಮ ಕೆಲಸವನ್ನು ಮಾಡಬಹುದು ಅದನ್ನು ಕಂಡೇ ರಾಜ್ಯದ ಜನರು ಬಿಜೆಪಿ ಪಕ್ಷಕ್ಕೆ ಉಪಚುನಾವಣೆಯಲ್ಲಿ ವಿರೋಧಿಗಳಿಗೆ ತಕ್ಕ ಪಾಠಕಲಿಸುವ ಮೂಲಕ ಬಿಜೆಪಿಯನ್ನು ಕೈಹಿಡಿದರು. ಇಂದಿನ ಸುಭದ್ರ ಸರ್ಕಾರವು ಮುಖ್ಯ ಮಂತ್ರಿ ಎಡೆಯೂರಪ್ಪನವರ ನೇತೃತ್ವದಲ್ಲಿ ಸ್ಥಿರ,ಸುಭದ್ರ ಸರ್ಕಾರದೊಂದಿಗೆ ಜನಪರ ಉತ್ತಮ ಕೆಲಸವನ್ನು ಮಾಡುತ್ತಿದ್ದು ಜನರು ಬಯಸಿದ ಎಲ್ಲಾ ರೀತಿಯ ಸೇವೆಯನ್ನು ಸರ್ಕಾರ ಮುಂದಿನ ದಿನಮಾನದಲ್ಲಿ ಕೊಡುವ ಮೂಲಕ ನಿಮ್ಮ ಮೆಚ್ಚಿಗೆಗೆ ಪಾತ್ರವಾಗಿದ್ದು ನಿಮ್ಮೆಲ್ಲರ ಸಹಕಾರ ಆಶೀರ್ವಾದ ಸದಾ ಇರಬೇಕೆಂದು ತನ್ನ ವಿರೋಧಿಗಳಿಗೆ ಟಾಂಗ್ ನೀಡಿದ್ದು ವಿಶೇಷವಾಗಿತ್ತು.

   ಇದೇ ಮೊದಲ ಬಾರಿಗೆ ಆಗಮಿಸಿದ ಉಪಮುಖ್ಯ ಮಂತ್ರಿ ಅಶ್ವಥ್‍ನಾರಾಯಣ ಅವರನ್ನು ಬಿಜೆಪಿ ಪಕ್ಷದ ಮುಖಂಡರು ಹೂವಿನ ಮಳೆ ಸುರಿಸಿ, ಪಟಾಕಿ ಸಿಡಿಸಿ ಸಂಭ್ರಮದೊಂದಿಗೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಡಿ.ಕೃಷ್ಣಕುಮಾರ್, ತಾ.ಪಂ.ಅಧ್ಯಕ್ಷ ಹರೀಶ್‍ನಾಯ್ಕ, ಬಿಜೆಪಿ ಮುಖಂಡರುಗಳಾದ ಬಲರಾಂ, ಸೊಬಗಾನಹಳ್ಳಿ ಪಾಪಣ್ಣ, ಕಲಾವಿದ ಸಿದ್ದರಾಮಯ್ಯ, ಎ.ಸಂತೋಷ್, ಹೊನ್ನೇನಹಳ್ಳಿ ಸುರೇಶ್, ರೇಣುಕಯ್ಯ, ಜಯರಾಮ್ ಹಾಗೂ ಟಿವಿಎಸ್ ರಮೇಶ್ ಮುಂತಾದರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ