ಲೋಕ ಅದಾಲತ್‍ನಲ್ಲಿ 1,262 ಪ್ರಕರಣ ಇತ್ಯರ್ಥ

ದಾವಣಗೆರೆ:

     ನೋವಿನೊಂದಿಗೆ ಕೋರ್ಟ್ ಮೆಟ್ಟಿಲು ಏರಿದ್ದ ಕಕ್ಷಿದಾರರು, ಶನಿವಾರ ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡು ನಲಿಯುತ್ತಾ ಮನೆಗಳ ಕಡೆಗೆ ಹೆಜ್ಜೆ ಹಾಕಿದರು.

   ಹೌದು… ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು, ವಕೀಲರು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿ, ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಬಾಕಿ ಇದ್ದ ಅಂದಾಜು 35 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳ ಪೈಕಿ 1,262 ಪ್ರಕರಣಗಳನ್ನು ಇತ್ಯರ್ಥ ಪಡಿಸಿದರು.

       461 ವ್ಯಾಜ್ಯ ಪೂರ್ವ ಪ್ರಕರಣಗಳು, 790 ವ್ಯಾಜ್ಯ ಪ್ರಕರಣಗಳು ಸೇರಿದಂತೆ ಒಟ್ಟು 1,262 ಪ್ರಕರಣಗಳ ಪರಸ್ಪರ ಎದರುದಾರ ಕಕ್ಷಿದಾರರನ್ನು ಕುರಿಸಿಕೊಂಡು, ರಾಜಿ-ಸಂಧಾನದ ಮೂಲಕ ಮನವೊಲಿಸಿ ಈ ಎಲ್ಲ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ ಕಾರಣ ಹಲವು ಕಾರಣಗಳಿಂದ ಪರಸ್ಪರ ಎದುರಾಳಿಗಳಾಗಿ ಕೋರ್ಟ್ ಮೆಟ್ಟಿಲು ಏರಿದ ಕಕ್ಷಿದಾರರು ಶನಿವಾರ ಸ್ನೇಹಿತರಾಗಿ ನಗು, ನಗುತ್ತಾ ಮನೆ ಕಡೆಗೆ ಹೆಜ್ಜೆ ಹಾಕಿದರು.

      ಈ ಲೋಕ ಅದಾಲತ್‍ನಲ್ಲಿ ಸಿವಿಲ್ ಪ್ರಕರಣಗಳು, ಜೀವನಾಂಶ, ಮೋಟರ್ ವೆಹಿಕಲ್ ಪ್ರಕರಣ, ವಿವಾಹ ವಿಚ್ಛೇದನ, ಭೂ ಸ್ವಾಧೀನ, ಚೆಕ್ ಬೌನ್ಸ್ ಪ್ರಕರಣಗಳನ್ನು ಇತ್ಯರ್ಥ ಪಡಿಸಿ, ಅಂದಾಜು 10.30 ಕೋಟಿ ಮೊತ್ತದ ಸೆಟ್ಲಮೆಂಟ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

        ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಂಬಾದಾಸ್ ಜಿ. ಕುಲಕರ್ಣಿ, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆಂಗ ಬಾಲಯ್ಯ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನಾಗಶ್ರೀ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಜಿನಾಲ್ಕರ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಾಬಪ್ಪ, ನ್ಯಾಯಾಧೀಶರಾದ ಶ್ರೀನಿವಾಸ್ ನವಲೆ, ರಷ್ಮಿ ಎಸ್. ಮರಡಿ, ಕಿರಣ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣಕುಮಾರ್, ವಕೀಲರ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸರ್ಕಾರಿ ಅಭಿಯೋಜಕರು, ಬ್ಯಾಂಕ್‍ಗಳ ಕಾನೂನು ಸಲಹೆಗಾರರು ಸೇರಿದಂತೆ ಹಲವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap