ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ : 130 ಮಂದಿಯನ್ನು ವಿಚಾರಣೆಗೆ ಒಳಪಡಿಸಿದ ಸಿಸಿಬಿ

ಬೆಂಗಳೂರು

    ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನಲ್ಲಿ ನಡೆದಿರುವ ಮ್ಯಾಚ್‌ಫಿಕ್ಸಿಂಗ್ ಕ್ರಿಕಟ್ ಬೆಟ್ಟಿಂಗ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಪೊಲೀಸರು ಇಲ್ಲಿಯವರೆಗೆ ತಂಡಗಳ ಮಾಲೀಕರು, ಆಟಗಾರರೂ ಸೇರಿದಂತೆ 130ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ.

    ಕೆಪಿಎಲ್‌ನಲ್ಲಿನ ಮ್ಯಾಚ್‌ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ 8 ಮಂದಿಯನ್ನು ಬಂಧಿಸಲಾಗಿದ್ದು, 120ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಲಾಗಿದೆ ತನಿಖೆಗೆ ಆಟಗಾರರು ಸಹಕರಿಸಿದ್ದು ಹಿರಿಯ ಆಟಗಾರರು ಬೆಂಬಲ ವ್ಯಕ್ತಪಡಿಸಿದ್ದಾರೆ.

    ಆಟಗಾರರಾದ ಅಭಿಮನ್ಯು ಮಿಥುನ್ ಸೇರಿದಂತೆ ಕೆಲವರಿಗೆ ನೋಟೀಸ್ ಜಾರಿಗೊಳಿಸಿ ಕರೆಸಿ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಮ್ಯಾಚ್‌ಫಿಕ್ಸಿಂಗ್‌ಗೆ ತನಿಖೆಗೆ ವಿಶೇಷ ತನಿಖಾ ತಂಡವನ್ನೇ ರಚಿಸಲಾಗಿದ್ದು ತಂಡವು ವಿಸ್ತೃತ ತನಿಖೆ ಕೈಗೊಂಡಿದೆ.

    ಕ್ರಿಕೆಟ್ ಆಟಕ್ಕಿಂತ ಬೆಟ್ಟಿಂಗ್‌ನಲ್ಲಿಯೇ ಹೆಚ್ಚಿನ ಹಣಕಾಸಿನ ವ್ಯವಹಾರ ನಡೆಸಿರುವ ಮಾಹಿತಿಯೂ ತನಿಖೆಯಲ್ಲಿ ಕಂಡು ಬಂದಿದೆ. ಆಟಗಾರರನ್ನು ಬಲೆಗೆ ಬೀಳಿಸಲು ಚಿಟರ್ ಗರ್ಲ್ಸ್‌ಗಳನ್ನು ದಾಳವಾಗಿ ಬಳಸಲಾಗಿದ್ದು, ಅದರ ವಿಸ್ತೃತ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

    ಕ್ರಿಕೆಟ್ ಆಟವನ್ನು ನೋಡುವ ಅಮಾಯಕ ಜನ ಅತ್ಯಂತ ಕುತೂಹಲ, ಆಸಕ್ತಿಯಿಂದ ಕ್ರಿಕೆಟ್ ಆಟವನ್ನು ವೀಕ್ಷಿಸುತ್ತಾರೆ. ಆದರೆ, ಈ ಮ್ಯಾಚ್‌ಫಿಕ್ಸಿಂಗ್ ಮಾಡುವವರು ಮೊದಲೇ ಪಂದ್ಯದ ಫಲಿತಾಂಶವನ್ನು ನಿರ್ಧರಿಸುತ್ತಾರೆ. ಇಂತಹ ಮೋಸಕ್ಕೆ ಅಂಕುಶ ಹಾಕಲೇಬೇಕು ಎಂದರು.

    ಈ ಮ್ಯಾಚ್‌ಫಿಕ್ಸಿಂಗ್ ದಂಧೆಯಲ್ಲಿ ಕ್ರಿಕೆಟ್ ಆಡದ ಮಾಜಿ ಆಟಗಾರರು ಇದ್ದಾರೆ. ಆಟ ಆಡುವವರಿಗಿಂತ ಆಟ ಆಡದ ಈ ಆಟಗಾರರೇ ಮ್ಯಾಚ್‌ಫಿಕ್ಸಿಂಗ್ ದಂಧೆಯಲ್ಲಿದ್ದಾರೆ. ಇವರಿಗೆ ಇದು ಬ್ಯುಸಿನೆಸ್ ಆಗಿದೆ. ವಿದೇಶಗಳಿಗೆ ಹೋಗಿ ಸ್ಟಾರ್ ಹೋಟೆಲ್‌ಗಳಲ್ಲಿ ತಂಗುತ್ತಾರೆ. ಹನಿಟ್ರ್ಯಾಪ್ ಮೂಲಕವು ಆಟಗಾರರನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದೆ, ಈಗ ಕ್ರಿಕೆಟ್ ಮ್ಯಾಚ್‌ಫಿಕ್ಸಿಂಗ್‌ನಿಂದ ತನ್ನ ಮಹತ್ವವನ್ನೇ ಕಳೆದುಕೊಂಡಿದೆ ಎಂದು ಅವರು ಹೇಳಿದರು.

    ಈ ಕ್ರಿಕೆಟ್ ಮ್ಯಾಚ್‌ಫಿಕ್ಸಿಂಗ್‌ನಲ್ಲಿ ತೊಡಗಿರುವವರ ವಿರುದ್ಧ ಕ್ರಿಕೆಟ್ ಆಟದ ನಿಯಂತ್ರಣ ಹೊಂದಿರುವ ಬಿಸಿಸಿಐ ಮತ್ತು ಕೆಎಸ್‌ಸಿಎ ಮೂಖ ಪ್ರೇಕ್ಷಕರಾಗಿರುವ ಬದಲು ಫಿಕ್ಸಿಂಗ್‌ನಲ್ಲಿ ತೊಡಗಿರುವ ಆಟಗಾರರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅವರು ಹೇಳಿದರು.

    ಮ್ಯಾಚ್‌ಫಿಕ್ಸಿಂಗ್ ದಂಧೆಗೆ ಸಂಬಂಧಪಟ್ಟಂತೆ ಎಲ್ಲ ತಂಡಗಳಿಗೂ ನೋಟೀಸ್ ನೀಡಿ ಆಟದ ವೀಡಿಯೊಗಳು, ಸ್ಕೋರ್ ಪಟ್ಟಿ, ತಂಡದ ಮ್ಯಾನೇಜರ್ ಬಗ್ಗೆ ಮಾಹಿತಿ ಸೇರಿದಂತೆ ಹಲವು ವಿವರಗಳನ್ನು ನೀಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು .ಮ್ಯಾಚ್‌ಫಿಕ್ಸಿಂಗ್ ದಂಧೆಯ ಬಗ್ಗೆ ಹಲವು ಹಿರಿಯ ಆಟಗಾರರು ಬೇಸರ ವ್ಯಕ್ತಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ. ಮ್ಯಾಚ್‌ಫಿಕ್ಸಿಂಗ್ ದಂಧೆಯ ತಪ್ಪಿತಸ್ಥರನ್ನು ಪತ್ತೆ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap