ಉಪಚುನಾವಣೆ : ಅನರ್ಹ ಶಾಸಕರ ಕ್ಷೇತ್ರದಲ್ಲಿ ನಿಷೇಧಾಜ್ಞೆ..!

ಬೆಂಗಳೂರು

   ಯಶವಂತಪುರ,ಮಹಾಲಕ್ಷ್ಮಿ ಲೇಔಟ್,ಕೆಆರ್‌ಪುರಂ ಸೇರಿ ನಾಲ್ಕು ಕ್ಷೇತ್ರಗಳಿಗೆ ಬರುವ ಡಿಸೆಂಬರ್ 5ರಂದು ಉಪಚುನಾವಣೆ ನಡೆಯುವ ಹಿನ್ನಲೆಯಲ್ಲಿ ನಗರದಲ್ಲಿ ನಾಳೆಯಿಂದ ಒಂದು ವಾರ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಆದೇಶ ಹೊರಡಿಸಿದ್ದಾರೆ.

    ಉಪ ಚುನಾವಣೆ ಸಂದರ್ಭದಲ್ಲಿ ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿಗಳಿಗೆ ಹಾನಿಯುಂಟು ಮಾಡುವ ಸಂಚುರೂಪಿಸಿರುವ ಮಾಹಿತಿ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ನಿಷೇದಾಜ್ಙೆ ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ನಾಮಪತ್ರ ಸಲ್ಲಿಕೆಯಾಗುವ ಸೋಮವಾರ (ನ.11)ಬೆಳಗ್ಗೆ 10ಗಂಟೆಯಿಂದ ನಾಮಪತ್ರ ಸಲ್ಲಿಕೆ ಮುಕ್ತಾಯವಾಗುವ ನ.18 ಸಂಜೆ 4 ಗಂಟೆವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ನಡುವೆ ನ.15ರ ಕನಕಜಯಂತಿ, ನ.17ರ ಭಾನುವಾರದಂದು ನಿಷೇಧಾಜ್ಞೆಯನ್ನು ಸಡಿಲಗೊಳಿಸಲಾಗಿದೆ ಎಂದು ಹೇಳಿದ್ದಾರೆ.

    ನಿಷೇಧಾಜ್ಞೆ ಸಂದರ್ಭದಲ್ಲಿ ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ ಐದಕ್ಕಿಂತ ಹೆಚ್ಚು ಜನ ಗುಂಪು ಸೇರುವುದನ್ನು , ಪ್ರತಿಭಟನೆ, ಮೆರವಣಿಗೆ, ಸಭೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.ಶಸ್ತ್ರಾಸ್ತ್ರ , ದೊಣ್ಣೆಗಳು, ಕತ್ತಿ, ಈಟಿಗಳು, ಗದೆಗಳು, ಕಲ್ಲು, ಇಟ್ಟಿಗೆ, ಚಾಕು ಮುಂತಾದ ಮಾರಕಾಸ್ತ್ರಗಳನ್ನು ದೈಹಿಕ ಹಿಂಸೆ ಉಂಟು ಮಾಡುವ ಯಾವುದೇ ಶಸ್ತ್ರಾಸ್ತ್ರಗಳನ್ನು ಹೊಯ್ಯುವುದು, ಸ್ಪೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲುಗಳನ್ನು ಎಸೆಯುವುದನ್ನು ನಿಷೇಧಿಸಲಾಗಿದೆ

    ವ್ಯಕ್ತಿಗಳ ಅಥವಾ ಶವ ಪ್ರತಿಕೃತಿಗಳ ಪ್ರದರ್ಶನ ಮಾಡುವುದನ್ನು, ಪ್ರಚೋದಿಸುವಂತಹ ಘೋಷಣೆಗಳನ್ನು ಕೂಗುವುದು, ಸಂಗೀತ ನುಡಿಸುವುದು, ಹಾಡುಗಾರಿಕೆ ಮತ್ತಿತರ ಚಟುವಟಿಕೆಗಳಿಗೂ ಕಡಿವಾಣ ಹಾಕಲಾಗಿದೆ.ನಾಮಪತ್ರ ಸಲ್ಲಿಕೆಯ ಕಚೇರಿ ಸುತ್ತಮುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲಿದ್ದು, ಧ್ವನಿವರ್ಧಕ ಬಳಕೆಯೂ ಕೂಡ ನಿಷೇಧಿಸಲ್ಪಟ್ಟಿದೆ

    ನಾಮಪತ್ರ ಸಲ್ಲಿಕೆ ವೇಳೆ ಮೆರವಣಿಗೆ ಬರುವುದು, ಪ್ರತಿಭಟನೆ ನಡೆಸುವುದು ಮತ್ತಿತರ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಲ್ಲದೆ, ಸಂಚಾರಕ್ಕೂ ಅಡಚಣೆ ಉಂಟಾಗಲಿದೆ.ಕೆಲವು ದುಷ್ಕರ್ಮಿಗಳು ಸರ್ಕಾರಿ ಆಸ್ತಿ-ಪಾಸ್ತಿಗೆ ಹಾನಿ ಮಾಡುವುದು ಮತ್ತು ಸಾರ್ವಜನಿಕರ ನೆಮ್ಮದಿಗೆ ಭಂಗ ಮಾಡುವ ಚಟುವಟಿಕೆ ನಡೆಸುವ ಬಗ್ಗೆ ಮಾಹಿತಿ ಇದೆ. ಖುದ್ದಾಗಿ ಪರಿಶೀಲನೆ ಮಾಡಿ ಖಚಿತ ಪಡಿಸಿಕೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುತ್ತಿರುವುದಾಗಿ ಆಯುಕ್ತರು ತಿಳಿಸಿದ್ದಾರೆ.

    ನಾಮ ಪತ್ರ ಸಲ್ಲಿಸುವ ಕಚೇರಿಗಳಾದ ಕೆ.ಆರ್.ಪುರ ಕ್ಷೇತ್ರದ ಹಳೆ ಮದ್ರಾಸು ರಸ್ತೆಯ ಕಂದಾಯ ಅಧಿಕಾರಿಗಳ ಕಚೇರಿ, ಯಶವಂತಪುರ ಕ್ಷೇತ್ರದ ಕೆಂಗೇರಿ ಉಪನಗರದ ಕರ್ನಾಟಕ ಬ್ಯಾಂಕ್ ಕಟ್ಟಡ, ಮಹಾಲಕ್ಷ್ಮಿಲೇಔಟ್ ಕ್ಷೇತ್ರದ ರಾಜಾಜಿನಗರ ಆರ್‍ಟಿಒ ಕಚೇರಿ ಸಂಕೀರ್ಣ, ಶಿವಾಜಿನಗರದ ಕ್ವೀನ್ಸ್ ರಸ್ತೆಯ ಮತದಾರರ ನೋಂದಾಣಾಧಿಕಾರಿ ಕಚೇರಿಗಳ ಸುತ್ತಮುತ್ತ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಲಿದೆ. ನಾಮಪತ್ರ ಸಲ್ಲಿಸುವರೊಂದಿಗೆ ಐದು ಮಂದಿ ಮಾತ್ರ ಹೋಗಬೇಕು ಎಂಬ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿದೆ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link