ಬೆಂಗಳೂರು
ನಾಳೆಯಿಂದ ಮೂರು ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‍ಗಿರಿಯಲ್ಲಿ ದತ್ತ ಜಯಂತಿ ನಡೆಯಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬಾಬಾ ಬುಡನ್‍ಗಿರಿಯು ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳಿಗೆ ಪೂಜನೀಯವಾಗಿದ್ದು, ಈ ಹಿಂದೆ ಕೋಮು ಸಂಘರ್ಷ ನಡೆದಿರುವ ಹಿನ್ನೆಲೆಯಲ್ಲಿ ಪೆಲೀಸ್ ಹಾಗೂ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮ ವಹಿಸುತ್ತಿದೆ. ಆದಾಗ್ಯೂ ಸರ್ಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಕಳೆದ ಕೆಲ ವರ್ಷಗಳಿಂದ ಪಶ್ಚಿಮಘಟ್ಟದ ಈ ತಾಣದಲ್ಲಿ ಶಾಂತಿ ನೆಲೆಸಿದೆ.
ನಾಳೆ ಸಾವಿರಾರು ಯಾತ್ರಿಕರು ಬಾಬು ಬುಡನ್‍ಗಿರಿ ಭೇಟಿ ನೀಡುವ ಹಿನ್ನೆಲೆಯಲ್ಲಿ ಪೊಲೀಸ್ ಉಪ ಆಯುಕ್ತ ಎಂ.ಕೆ. ಶ್ರೀರಂಗಯ್ಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ದತ್ತಮಾಲಾ ಅಭಿಯಾನ, ಶೋಭಾಯಾತ್ರೆ ಅಥವಾ ಇನ್ನಿತರ ಯಾವುದೇ ಉತ್ಸವಗಳನ್ನು ನಡೆಸುವ ಮುನ್ನ ತಹಶೀಲ್ದಾರರು ಮತ್ತು ಪೆಲೀಸರಿಂದ ಅನುಮತಿ ಪಡೆಯಬೇಕು ಹಾಗೂ ಸ್ಥಳ ಮತ್ತು ಸಮಯವನ್ನು ತಿಳಿಸಬೇಕು ಎಂದು ನಿಷೇಧಾಜ್ಞೆಯಲ್ಲಿ ಸೂಚಿಸಲಾಗಿದೆ.
ಶ್ರೀ ಗುರು ದತ್ತಾತ್ರೇಯ ಹಾಗೂ ಬಾಬಾಬುಡನ್ ದರ್ಗಾಕ್ಕೆ ಭೇಟಿ ನೀಡುವ ಯಾತ್ರಿಕರು ಕಡ್ಡಾಯವಾಗಿ ಶಿಸ್ತು ಪಾಲಿಸಬೇಕು. 3 ದಿನಗಳು ಹಮ್ಮಿಕೊಳ್ಳುವ ಯಾವುದೇ ಉತ್ಸವ ರಾತ್ರಿ 7 ಗಂಟೆಯೊಳಗೆ ಮುಕ್ತಾಯವಾಗಬೇಕು ಎಂದು ತಿಳಿಸಲಾಗಿದೆ.
ಜಿಲ್ಲೆಯಲ್ಲಿ ಇಂದು ಮಧ್ಯರಾತ್ರಿಯಿಂದ ಶನಿವಾರ ಮಧ್ಯರಾತ್ರಿಯವರೆಗೆ ಮದ್ಯಮಾರಾಟ ನಿಷೇಧಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೆಲೀಸ್ ಪಡೆ ನಿಯೋಜಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ