ಪಿಂಚಣಿ ಲೋಪ ಸರಿಪಡಿಸಲು 15 ದಿನ ಗಡುವು

ದಾವಣಗೆರೆ

     ಸಂಧ್ಯಾ ಸುರಕ್ಷ ಯೋಜನೆಯಡಿ ಹಿರಿಯ ಜೀವಗಳಿಗೆ ನೀಡುತ್ತಿರುವ ಮಾಸಾಶನದ ಪಿಂಚಣಿ ಖಾತೆಗೆ ಜಮೆ ಆಗದಿರುವುದನ್ನು ಇನ್ನೂ 15 ದಿನಗಳಲ್ಲಿ ಸರಿಪಡಿಸಿ, ಅವರ ಖಾತೆಗಳಿಗೆ ಪಿಂಚಣಿ ಜಮೆ ಆಗುವಂತೆ ಮಾಡದಿದ್ದರೆ, ತಹಶೀಲ್ದಾರರು, ಕಂದಾಯ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಎಚ್ಚರಿಸಿದರು.

     ನಗರದ ಜಿಲ್ಲಾಡಳಿತ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಜನಸ್ಪಂದನ ಸಭೆಯಲ್ಲಿ ವಯೋವೃದ್ಧರು ಬಂದು ತಮ್ಮ ಖಾತೆಗೆ ಪಿಂಚಣಿ ಜಮೆ ಆಗುತ್ತಿಲ್ಲ. ಹೀಗಾಗಿ ಇದನ್ನು ಸರಿ ಪಡಿಸಬೇಕೆಂದು ಅರ್ಜಿ ಸಲ್ಲಿಸಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ವಯಸ್ಸಾದವರು ಹೀಗೇಕೆ ಜಿಲ್ಲಾಡಳಿತ ಭವನಕ್ಕೆ ಅಲೆಯಬೇಕು, ಎಲ್ಲ ತಾಲ್ಲೂಕಿನ ತಹಶೀಲ್ದಾರರು ಪಿಂಚಣಿ ವೇತನ ನಿಂತಿರುವ ಪಿಂಚಣಿದಾರರ ಮಾಹಿತಿ ಪಡೆದು, ಆಗಿರುವ ತಾಂತ್ರಿಕ ದೋಷವನ್ನು ಸರಿಪಡಿಸಲು ಆಂದೋಲನದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ತಾಕೀತು ಮಾಡಿದರು.

     ಜಿಲ್ಲೆಯ ಪ್ರತಿ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ನಾಳೆಯಿಂದಲೇ ಒಂದು ಕೌಂಟರ್ ತೆರೆದು ಪಿಂಚಣಿ ವೇತನ ನಿಂತಿರುವ ಹಾಗೂ ತಾಂತ್ರಿಕ ದೋಷ ಸರಿಪಡಿಸುವ ಕೆಲಸ ಮಾಡಬೇಕು ಎಂದು ಖಡಕ್ ಸೂಚನೆ ನೀಡಿದ ಅವರು, ಜನರು ತಮ್ಮ ಸೌಲಭ್ಯಗಳನ್ನು ಪಡೆಯಲು ಜಿಲ್ಲಾಡಳಿತ ಕಚೇರಿಗೆ ಅಲೆಯಬಾರದು. ಬದಲಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿ ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಬೆಳಕೇರಿ ಅರ್ಜಿ ಸಲ್ಲಿಸಿ, ಗುತ್ತಿಗೆ ಆಧಾರದಲ್ಲಿ ನಡೆಯುವ ನೇಮಕಾತಿಗಳಲ್ಲಿ ಖಾಸಗಿ ಏಜೆನ್ಸಿಯವರು ಅಭ್ಯರ್ಥಿಗಳಿಂದ ಹಣ ಪಡೆದು ನಿಯಮಬಾಹಿರವಾಗಿ ಅರ್ಹತೆ ಇಲ್ಲದವರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೇ, ಪಿ.ಎಫ್ ಮತ್ತು ಇಎಸ್‍ಐ ಮೊತ್ತ ಪಾವತಿ ಮಾಡದೇ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ಹೊರ ಗುತ್ತಿಗೆ ನೇಮಕಾತಿಯನ್ನು ಜಿಲ್ಲಾಡಳಿತದ ಮಟ್ಟದಲ್ಲೇ ನಡೆಸಿ ಜಿಲ್ಲೆಯ ನಿರುದ್ಯೋಗಿಗಳಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.

     ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಹೊರಗುತ್ತಿಗೆ ಆಧಾರದ ಮೇಲೆ ಡಿ ಗ್ರೂಪ್, ಕಂಪ್ಯೂಟರ್ ಆಪರೇಟರ್ ಸೇರಿದಂತೆ ವಿವಿಧ ಹುದ್ದೆ ನಿರ್ವಹಿಸಲು ಯಾವ ಶೈಕ್ಷಣಿಕ ಮತ್ತು ಇತರೆ ಅರ್ಹತೆ ಬೇಕೆಂಬ ಮಾಹಿತಿಯನ್ನು ಸಂಗ್ರಹಿಸಿ, ಅರ್ಹ ಶಿಕ್ಷಣ, ಇತರೆ ಮಾನದಂಡಗಳಿಲ್ಲದ ಸಿಬ್ಬಂದಿಗಳನ್ನು ಕೆಲಸದಿಂದ ಬಿಡುಗಡೆಗೊಳಿಸಬೇಕೆಂದು ಸೂಚಿಸಿದರು.

     ನಾಳೆಯ (ಅ.2ರ) ಗಾಂಧಿ ಜಯಂತಿಯಿಂದ ಅ.31 ರವರೆಗೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ನಗರ ಸ್ವಚ್ಛತಾ ಕಾರ್ಯದಲ್ಲಿ ತೊಡಗಬೇಕು ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಪಟ್ಟಿ ಪ್ರಕಾರ ತಮ್ಮ ಕಚೇರಿ ಸಿಬ್ಬಂದಿ ಹಾಗೂ ಆಯಾ ವಾರ್ಡ್‍ಗಳ ಪೌರಕಾರ್ಮಿಕರ ಸಹಾಯದೊಂದಿಗೆ ಸ್ವಚ್ಛತೆಯನ್ನು ಕೈಗೊಳ್ಳಬೇಕು. ವಾರ್ಡಿನ ಅತ್ಯಂತ ಕೊಳಕು-ಗಲೀಜು ಇರುವ ಪ್ರದೇಶವನ್ನು ಆಯ್ದುಕೊಂಡು ಶುಚಿಗೊಳಿಸಬೇಕು. ಇದೇ ವೇಳೆ ಪ್ಲಾಸ್ಟಿಕ್ ನಿಷೇಧದ ಕುರಿತು ಅರಿವು ಮೂಡಿಸಬೇಕು ಎಂದರು.

     ಅಲೆಮಾರಿ ಬುಡಕಟ್ಟು ಮೇದಾ ಎಸ್.ಟಿ. ಜನಾಂಗದ ವೆಂಕಟೇಶ್, ಲಕ್ಷ್ಮಿದೇವಿ, ಹನುಮಂತಪ್ಪ ಅರ್ಜಿ ಸಲ್ಲಿಸಿ, ನಾವು ಆರ್ಥಿಕವಾಗಿ ಹಿಂದುಳಿದಿದ್ದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ನಿವೇಶನಕ್ಕಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಪರಿಶೀಲಿನೆ ನಡೆಸಿ ನಿವೇಶನ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಈ ಕುರಿತು ಪರಿಶೀಲಿಸಿ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.

    ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಳೇಶ್ವರ ಮಾತನಾಡಿ, ವಾರ್ಡ್ ನಂ 08ರ ವಿಜಯನಗರ ಬಡಾವಣೆಗೆ ಅಗತ್ಯ ಮೂಲಭೂತ ಸೌಲಭ್ಯಗಳಾದ ಒಳಚರಂಡಿ, ಯು.ಜಿ.ಡಿ, ರಸ್ತೆ ದೀಪಗಳ ಸೌಲಭ್ಯ. ಆದ್ದರಿಂದ ಮೂಲಭೂತ ಸೌಲಭ್ಯ ಒದಗಿಸಬೇಕು. ಡಾನ್ ಬಾಸ್ಕೋ ಶಾಲೆ ಪಕ್ಕದಲ್ಲಿ ಅನಧಿಕೃತಕವಾಗಿ ಅಳವಡಿಸುತ್ತಿರುವ ಮೊಬೈಲ್ ಟವರ್ ಅನ್ನು ಸ್ಥಳಾಂತರಿಸಬೇಕು ಎಂದು ಮನವಿ ಮಾಡಿದರು.

     ಸಮಾಜ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್, ನಗರದ ಎಂ.ಸಿಸಿ ಬಿ ಬ್ಲಾಕ್‍ನ ಬಾಯ್ಸ್ ಹಾಸ್ಟೆಲ್ ಬಳಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಹಂಪ್ಸ್‍ಗಳಿಂದ ಅಪಘಾತ ಸೇರಿದಂತೆ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಇದÀನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು.

     ಈ ವೇಳೆ ಜಿಲ್ಲಾಧಿಕಾರಿಗಳು ಪಾಲಿಕೆ ಆಯುಕ್ತರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ, ಪಾಲಿಕೆ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಅರ್ಹರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಪಾಲಿಕೆ ಆಶ್ರಯ ವಿಭಾಗದ ಗೋವಿಂದನಾಯ್ಕ ಎಂಬುವವರು ಕಳೆದ 16 ವರ್ಷಗಳಿಂದ ಇದೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಆಶ್ರಯ ಯೋಜನೆಗೆ ಸಂಬಂಧಿಸಿದ 260 ಕ್ಕೂ ಹೆಚ್ಚು ಕಡತಗಳನ್ನು ನಾಶಪಡಿಸಿದ್ದಾರೆ.

    40ಕ್ಕೂ ಹೆಚ್ಚು ನಿವೇಶನವನ್ನು ಕಾನೂನುಬಾಹಿರವಾಗಿ ಹಂಚಿಕೆ ಮಾಡಿದ್ದಾರೆ. 2013 ರಿಂದ 2017 ರವರೆಗೆ ಲೆಕ್ಕಪರಿಶೋಧನಾ ಪ್ರತಿಯಲ್ಲಿನ ವಸೂಲಾತಿ ಮಾಡಿಲ್ಲ. ಈ ಎಲ್ಲ ವಿಷಯಗಳ ಕುರಿತು ಮಾಹಿತಿ ಹಕ್ಕಿನಡಿ ಸಲ್ಲಿಸಿದ ಅರ್ಜಿಗಳಿಗೂ ಉತ್ತರಿಸುತ್ತಿಲ್ಲ ಎಂದು ಆರೋಪಿಸಿದರು. ಪಾಲಿಕೆ ಆಯುಕ್ತರಿಗೆ ಬಗ್ಗೆ ಪರಿಶೀಲಿಸಲು ಸೂಚಿಸುವುದಾಗಿ ತಿಳಿಸಿದ ಡಿಸಿ, ಮಾಹಿತಿ ಹಕ್ಕಿನಡಿ ಉತ್ತರ ನೀಡದಿದ್ದರೆ ಮೇಲ್ಮನವಿ ಸಲ್ಲಿಸಿ, ದಂಡಕ್ಕೆ ಗುರಿಯಾಗುತ್ತಾರೆಂದು ಸಲಹೆ ನೀಡಿದರು.

    ಎಸ್.ಎಂ ಕೃಷ್ಣ ನಗರದ ನಿವಾಸಿಗಳಾದ ಶೈಲಪ್ಪ, ಶಕೀಲಾ.ಬಿ., ಆಶಾ.ಬಿ. ಇವರಿಗೆ ಮಂಜೂರಾದ ಆಶ್ರಯ ಮನೆಗಳ ನಕಲಿ ಹಕ್ಕುಪತ್ರಗಳನ್ನು ಮಹಾನಗರಪಾಲಿಕೆ ಆಶ್ರಯ ಸಮಿತಿ ಅಧಿಕಾರಿ ಗೋವಿಂದನಾಯ್ಕ ಎಂಬುವರು ಬೇರೆಯವರಿಗೆ ನೀಡಿ, 2 ರಿಂದ 3 ಲಕ್ಷ ಹಣ ಕೊಡುವಂತೆ ಸತಾಯಿಸುತ್ತಿದ್ದಾರೆಂದು ಆರೋಪಿಸಿದರು.

    ರೈತ ಮುಖಂಡರಾದ ಆನಗೋಡು ಭೀಮಣ್ಣ, ಮಾಯಕೊಂಡದ ಲಿಂಗಪ್ಪ, ಚಿನ್ನಸಮುದ್ರ ಭೀಮನಾಯ್ಕ ಹಾಗೂ ಬಲ್ಲೂರು ರವಿಕುಮಾರ್ ಅರ್ಜಿಸಲ್ಲಿಸಿ, ತಾಲ್ಲೂಕು ಕಚೇರಿಗಳಲ್ಲಿ ಐ.ಹೆಚ್.ಸಿ ಖಾತೆ ಹಾಗೂ ಇತರೆ ಖಾತೆ ವರ್ಗಾವಣೆ ವಿಳಂಬವಾಗುತ್ತಿದೆ. ಭೂಮಾಪನ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು ಮತ್ತು ಉಪನಿರ್ದೇಶಕರ ಕಚೇರಿಗಳಲ್ಲಿ ಮೇಲ್ಮನವಿಗಳ ವಿಚಾರಣೆ ಮತ್ತು ವಿಲೇವಾರಿ ಸುಮಾರು 3 ವರ್ಷಗಳಿಂದ ಬಾಕಿ ಉಳಿದುಕೊಂಡಿದ್ದು, ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ರೈತರ ಸಾಲ ಮನ್ನಾ ವಿಷಯದಲ್ಲಿ ಬ್ಯಾಂಕುಗಳು ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದು ಹೊಸ ಸಾಲವನ್ನು ಸಕಾಲಕ್ಕೆ ನೀಡುತ್ತಿಲ್ಲ.

    ಗ್ರಾ.ಪಂ ಕಾರ್ಯಾಲಯಗಳಲ್ಲಿ ಪಿಡಿಓ ಗಳು ಸರ್ಕಾರದ ನಿಯಮಾನುಸಾರ ಕೆಲಸ ಮಾಡದೇ, ಒತ್ತಾಯಪೂರ್ವಕವಾಗಿ ಕಾನೂನುಬಾಹಿರ ದಾಖಲೆಗಳನ್ನು ಸೃಷ್ಟಿಸಿ ಅಮಾಯಕರಿಗೆ ತೊಂದರೆ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಕರೆಗಳು ಒತ್ತುವರಿಯಾಗುತ್ತಿದ್ದು, ಸಂಬಂಧಿಸಿದ ಇಲಾಖೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಭೂಸ್ವಾಧೀನವಾದ ಜಮೀನುಗಳು ಮರುಮಾರಾಟವಾಗುತ್ತಿವೆ. ಸಂಬಂಧಪಟ್ಟ ನೀರಾವರಿ ಇಲಾಖೆಗಳು ಕಾನೂನು ಕ್ರಮ ಕೈಗೊಳ್ಳದೇ ಅಕ್ರಮ ಒತ್ತುವರಿದಾರರಿಗೆ ಸಹಕರಿಸುತ್ತಾ ವಿಳಂಬ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿದರು.

     ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು, ಈ ಮನವಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಸಭೆಯಲ್ಲಿ ಜಿ.ಪಂ ಸಿಇಓ ಪದ್ಮ ಬಸವಂತಪ್ಪ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ, ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ರವೀಂದ್ರ ಮಲ್ಲಾಪುರ, ಕೆಎಸ್‍ಆರ್‍ಟಿಸಿ ವಿಭಾಗೀಯ ಆಯುಕ್ತ ಸಿದ್ದೇಶ್, ಡಿಹೆಚ್‍ಓ ಡಾ.ರಾಘವೇಂದ್ರ, ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ.ನಾಗರಾಜ್, ತಹಶೀಲ್ದಾರ್ ಸಂತೋಷ್‍ಕುಮಾರ್ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link