ಡಿಎಲ್ ಇಲ್ಲದಿದ್ದರೆ 1500 ರೂ ದಂಡ

ದಾವಣಗೆರೆ:

       ವಾಹನ ಚಾಲನಾ ಪರವಾನಿಗೆ ಪ್ರತ್ರ ಇಲ್ಲದೇ, ವಾಹನ ಚಲಾಯಿಸಿದರೆ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 200ರ ಪ್ರಕಾರ 1500 ರೂ. ದಂಡ ವಿಧಿಸುವುದರ ಜೊತೆಗೆ ಡಿಎಲ್ ಮೂರು ತಿಂಗಳ ಕಾಲ ಅಮಾನತಿನಲ್ಲಿ ಇಡಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀಕಾಂತ್ ಭೀ ನಾಲವಾರ ಎಚ್ಚರಿಸಿದ್ದಾರೆ.

          ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಶುಕ್ರವಾರ ನಡೆದ ವಾಯು ಮಾಲಿನ್ಯ ನಿಯಂತ್ರಣ ಜಾಗೃತ ಮಾಸಾಚರಣೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

         ಡಿಎಲ್ ಇಲ್ಲದೇ ವಾಹನ ಚಲಾವಣೆ ಮಾಡುವವರಿಗೆ ಪೊಲೀಸರು ನೂರೋ, ಇನ್ನೂರೋ ದಂಡ ವಿಧಿಸುತ್ತಾರೆ. ಆದರೆ, ನಮ್ಮ ಸಾರಿಗೆ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸುವಾಗ ವಾಹನ ಚಾಲನಾ ಪರವಾನಿಗೆ ಇಲ್ಲದೇ, ವಾಹನ ಓಡಿಸುತ್ತಿರುವುದು ಕಂಡು ಬಂದರೆ, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 200ರ ಪ್ರಕಾರ ಮೊದಲ ಬಾರಿಗೆ 1500 ರೂ. ದಂಡ ವಿಧಿಸುವುದರ ಜೊತೆಗೆ, 3 ತಿಂಗಳ ಕಾಲ ಡಿಎಲ್ ಅಮಾನತಿನಲ್ಲಿ ಇಡುವಲಾಗುವುದು ಎಂದರು.

          ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪ್ರಕಾರ ಸೀಟು ಬೇಲ್ಟ್ ಧರಿಸದಿದ್ದರೆ, ಸಿಗ್ನಲ್ ಜಂಪ್ ಮಾಡಿದರೆ, ವಾಹನ ಚಾಲನೆಯಲ್ಲಿರುವಾಗ ಮೊಬೈಲ್‍ನಲ್ಲಿ ಮಾತನಾಡಿದರೆ, ಹೆಲ್ಮೇಟ್ ಧರಿಸದೇ ವಾಹನ ಓಡಿಸಿದರೆ, ಮದ್ಯಪಾನ ಕುಡಿದು ವಾಹನ ಚಲಾಯಿಸುವುದು ಸೇರಿದಂತೆ ಒಟ್ಟು 8 ನಿಯಮಗಳನ್ನು ಉಲ್ಲಂಘಿಸಿದರೆ, 3ರಿಂದ 6 ತಿಂಗಳ ಕಾಲ ಚಾಲನಾ ಪರವಾನಿಗೆ ಪತ್ರವನ್ನು ಅಮಾನತಿನಲ್ಲಿ ಇಡಲಾಗುವುದು ಎಂದು ಹೇಳಿದರು.

          ವಾಹನ ಹೆಚ್ಚು ಹೊಗೆ ಹಾಗೂ ವಿಷಕಾರಕ ಅನಿಲವನ್ನು ಉಗಿಯಲು ವಾಹನದ ಎಂಜಿನ್‍ನ ಏರ್ ಫಿಲ್ಟರ್, ಕಾರ್ಬೇಟ್‍ನಲ್ಲಿರುವ ಸಮಸ್ಯೆ ಹಾಗೂ ನಿಯಮಿತವಾಗಿ ಎಂಜಿನ್ ಆಯಿಲ್ ಬದಲಿಸದಿರುವುದೇ ಕಾರಣವಾಗಿದೆ. ಈ ಮೂರನ್ನು ವಾಹನ ಮಾಲೀಕರು ಸರಿಯಾಗಿ ನಿಭಾಯಿಸಿದರೆ, ವಾಹನಗಳು ವಿಪರಿತವಾಗಿ ಹೊಗೆ ಉಗುಳುವುದನ್ನು ತಡೆಯಬಹುದಾಗಿದೆ ಎಂದರು.

          ಸರ್ಕಾರ 2020 ರೊಳಗೆ ಭಾರತ್ 6 ಮಾನದಂಡಗಳನ್ನು ಜಾರಿಗೆ ತರಲು ಉದ್ದೇಶಿಸಿದೆ. ಈ ಭಾರತ್ 4 ಹಂತದಲ್ಲಿದ್ದೇವೆ. ಭಾರತ್ 6 ಹಂತವೆಂದರೆ ಮಾಲಿನ್ಯ ರಹಿತ ವ್ಯವಸ್ಥೆಯಾಗಿದೆ. ಹೈಬ್ರಿಡ್ ವಾಹನ ಬಳಕೆದಾರರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಲಿದೆ. ಪ್ರಸ್ತುತ ಆಟೋರಿಕ್ಷಾಗಳಿಗೆ ನೀಡಲಾಗುತ್ತಿದ್ದು, ಹಂತ ಹಂತವಾಗಿ ಬೇರೆ ವಾಹನಗಳಿಗೂ ನೀಡಲಾಗುವುದು. ಇನ್ನೂ ಹೈಡ್ರೋಜನ್ ವಾಹನಗಳು ಬಂದರೆ ಮಾಲಿನ್ಯವೇ ಆಗುವುದಿಲ್ಲ. ಈ ನಿಟ್ಟಿನಲ್ಲೂ ಪ್ರಯೋಗಗಳು ನಡೆಯುತ್ತಿವೆ ಎಂದರು.

         ಗ್ಯಾರೇಜ್‍ಗಳಲ್ಲಿ ಬದಲಾವಣೆ ಮಾಡಿದ ವೇಸ್ಟ್ ಆಯಿಲ್‍ನ್ನು ಚರಂಡಿಗಳಲ್ಲಿ ಚೆಲ್ಲುತ್ತಿರುವುದು ಕಂಡು ಬಂದಿದೆ. ಹೀಗೆ ಮಾಡಿದರೆ ಮತ್ತೆ ಪರಿಸರ ಮಲಿನವಾಗುತ್ತದೆ. ಇದನ್ನು ನಿರ್ವಹಿಸುವ ರೀತಿ ಇದೆ. ಈ ವೇಸ್ಟ್ ಆಯಿಲ್ ನಿರ್ವಹಣೆ ಕುರಿತು ಸಣ್ಣ ಪುಟ್ಟ ಗ್ಯಾರೇಜ್‍ನವರಿಗೆ ಕಾರ್ಯಾಗಾರ ಏರ್ಪಡಿಸುವ ಉದ್ದೇಶ ಹೊಂದಲಾಗಿದೆ ಎಂದರು.

          ನಿವೃತ್ತ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಪಿ.ನಾಗೇಂದ್ರ ಮಾತನಾಡಿ, ಆಹಾರ ಇಲ್ಲದೇ ಒಂದಿಷ್ಟು ದಿನ, ನೀರು ಇಲ್ಲದೇ ಒಂದಿಷ್ಟು ಗಂಟೆ ಬದುಕಬಹುದು. ಆದರೆ, ಗಾಳಿ ಇಲ್ಲದೇ ಹತ್ತು ನಿಮಿಷವೂ ಬದುಕಲಾಗುವುದಿಲ್ಲ. ಆದ್ದರಿಂದ ಶುದ್ಧ ಗಾಳಿ ನೀಡುವ ಮರಗಿಡಗಳನ್ನು ಬೆಳೆಸಿ, ಸಂರಕ್ಷಣೆ ಮಾಡಬೇಕೆಂದು ಸಲಹೆ ನೀಡಿದರು.

          ಪರಿಸರ ನಾಶವಾಗುತ್ತಿರುವ ಕಾರಣ ಭೂಮಿಯಿಂದ 30 ಕಿ.ಮೀ. ಅಂತರದಲ್ಲಿರುವ ಓಜೋನ್ ಪದರ ತುತಾಗುತ್ತಿರುವ ಕಾರಣ ಸೂರ್ಯನ ಕಿರಣಗಳು ನೇರವಾಗಿ ಬಿಳುತ್ತಿರುವ ಕಾರಣ ವಾತಾವರಣದಲ್ಲಿ ಏರುಪೇರಾಗುತ್ತಿದೆ. ಆದ್ದರಿಂದ ಪರಿಸರ ಕಾಪಾಡುವ ಪರಿಕಲ್ಪನೆ ಎಲ್ಲರಲ್ಲೂ ಬರಬೇಕು ಹಾಗೂ ಎಲ್ಲಾದರೂ ಮರ ಕಡೆಯುವುದು ಕಂಡು ಬಂದರೆ, ಪ್ರಶ್ನಿಸುವ ಮೂಲಕ ಪ್ರತಿಭಟಿಸಬೇಕೆಂದು ಕಿವಿಮಾತು ಹೇಳಿದರು.

        ಬೆಂಗಳೂರಿನಲ್ಲಿ ಉತ್ತಮವಾದ ಪಾರ್ಕುಗಳಿವೆ. ದಾವಣಗೆರೆಯಲ್ಲಿ ಕಾಸಲ ಶ್ರೀನಿವಾಸಯ್ಯ ಶೆಟ್ಟಿ ಪಾರ್ಕ್ ಕೂಡ ಉತ್ತಮ ಗಿಡ ಮರಗಳನ್ನು ಹೊಂದಿದೆ. ಹೀಗೆ ನಗರ ಪ್ರದೇಶಗಳಲ್ಲಿ ಉತ್ತಮ ಪಾರ್ಕುಗಳನ್ನು ಮಾಡಬೇಕು. ಹಾಗೂ ವಿದ್ಯಾರ್ಥಿಗಳು ಸೇರಿದಂತೆ ನಾವೆಲ್ಲ ಮನೆ ಸುತ್ತಮುತ್ತ ಗಿಡಗಳನ್ನು ನೆಡಬೇಕು. ನಾವು ಬಳಸುವ ವಾಹನವನ್ನು ನಾವು ನಿಯಮಿತವಾಗಿ ಪರೀಕ್ಷಿಸಿ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕೆಂದು ಹೇಳಿದರು.

        ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಾದ ಎಸ್.ಮಂಜುನಾಥ್ ಮಾತನಾಡಿ, ಖಾಸಗಿ ಬಸ್ಸುಗಳ ಮಾಲೀಕರು ಕೂಡ ಪ್ರತಿ ಆರು ತಿಂಗಳಿಗೊಮ್ಮೆ ವಾಯು ಮಾಲಿನ್ಯ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸುತ್ತಿದ್ದಾರೆ. ಇತ್ತೀಚೆಗೆ ವಾಹನಗಳ ಸಂಖ್ಯೆ ಹೆಚ್ಚಿದೆ. ಕಾರು, ಬೈಕಿನಂತಹ ವೈಯಕ್ತಿಕ ವಾಹನಗಳ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಬಸ್ಸುಗಳ ಬಳಕೆ ಹೆಚ್ಚಿಸಬೇಕು. ಸೈಕಲ್ ಬಳಕೆ ಹೆಚ್ಚು ಮಾಡಬೇಕು. ವಿದ್ಯಾರ್ಥಿಗಳೂ ಕೂಡ ಮೋಟಾರು ವಾಹನ ಬಳಸದೇ ಸೈಕಲ್‍ನ್ನು ಬಳಸಬೇಕೆಂದು ಕರೆ ನೀಡಿದರು.

          ಎಸ್.ಪಿ.ಎಸ್ ನಗರದ ವಿಜ್ಞಾನ ಶಿಕ್ಷಕರಾದ ನಾಗರಾಜ ಸಿ ಮಾತನಾಡಿ, ಇಂಧನ ಉರಿಸುವಿಕೆ ಹಾಗೂ ಕೈಗಾರಿಕೆಯಿಂದ ಯಥೇಚ್ಚವಾಗಿ ವಾಯು ಮಾಲಿನ್ಯವಾಗುತ್ತಿದೆ. ಪ್ರತಿ ವಾಹನದ ಇಂಜಿನ್ ದಕ್ಷತೆ ಪರೀಕ್ಷಿಸಬೇಕು. ಇಂಧನ ಸರಿಯಾಗಿ ಸುಡದಿದ್ದರೆ ಹೆಚ್ಚು ಹೊಗೆ ಉಗುಳುತ್ತದೆ. ಆದ್ದರಿಂದ ನಿಯಮಿತವಾಗಿ ವಾಹನಗಳನ್ನು ಸರ್ವಿಸ್ ಮಾಡಿಸಬೇಕು ವಾಯು ಮಾಲಿನ್ಯ ಪರೀಕ್ಷೆಯ ಬಗ್ಗೆ ಇನ್ನೂ ಹೆಚ್ಚಿನ ಅರಿವು ಮೂಡಬೇಕು. ಆರ್‍ಟಿಓ ಕಚೇರಿಯಲ್ಲಿ ಎಲ್‍ಎಲ್‍ಆರ್ ನೀಡುವ ಸಮಯದಲ್ಲಿ ವಾಯು ಮಾಲಿನ್ಯ ಪರೀಕ್ಷೆ(ಎಮಿಷನ್ ಟೆಸ್ಟ್) ಕುರಿತು ಪ್ರಶ್ನೆ ಮಾಡಿದಲ್ಲಿ ಜನರಲ್ಲಿ ಇದರ ಬಗ್ಗೆ ಜಾಗೃತಿ ಮೂಡುತ್ತದೆ ಎಂದು ಸಲಹೆ ನೀಡಿದರು.

        ವಾಯುಮಾಲಿನ್ಯ ಮಾಸಾಚರಣೆ ಪ್ರಯುಕ್ತ ಎಸ್‍ಪಿಎಸ್ ನಗರ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಏರ್ಪಡಿಸಲಾಗಿದ್ದ ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತ ಮಕ್ಕಳೀಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕ ಅನೀಲ್ ಮಾಸೂರ್, ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಭೈರೇಶ್, ಬಸ್ ಮಾಲೀಕರಾದ ಮಲ್ಲೇಶಪ್ಪ, ವೀರೇಂದ್ರ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

          ವೀರಪ್ಪ ಸಿ ಮಾಸಾಚರಣೆ ವರದಿ ವಾಚಿಸಿದರು. ಎಂ.ಸುರೇಶ್ ನಿರೂಪಿಸಿದರು. ತಿಪ್ಪೇಶಪ್ಪ ಸಿ ಸ್ವಾಗತಿಸಿದರು. ಪ್ರ.ದ.ಸ ನಾಗರಾಜ ಟಿ.ಕೆ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link