ಸ್ವಾಮಿ ವಿವೇಕಾನಂದರ 156ನೇ ಜಯಂತ್ಯುತ್ಸವ

ಹೊನ್ನಾಳಿ:

       ನಮ್ಮ ಯುವಜನತೆ ಸಿನಿಮಾ ನಟ-ನಟಿಯರನ್ನು ಆದರ್ಶವಾಗಿಟ್ಟುಕೊಳ್ಳಬಾರದು. ನಾಡಿನ ಹೆಮ್ಮೆಯ ಧಾರ್ಮಿಕ ನಾಯಕರು, ಸಮಾಜ ಸುಧಾರಕರು ನಮಗೆ ಆದರ್ಶವಾಗಬೇಕು ಎಂದು ಹೊನ್ನಾಳಿಯ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕ ಎಂ.ಸಿ. ಮೋಹನ್‍ಕುಮಾರ್ ಹೇಳಿದರು.

         ಸ್ವಾಮಿ ವಿವೇಕಾನಂದರ 156ನೇ ಜಯಂತ್ಯುತ್ಸವದ ಅಂಗವಾಗಿ ಇಲ್ಲಿನ ಟಿ.ಬಿ. ವೃತ್ತದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಾವಣಗೆರೆಯ ಯುವ ಸ್ಪಂದನ ಕೇಂದ್ರದ ವತಿಯಿಂದ ಶನಿವಾರ ಹಮ್ಮಿಕೊಂಡ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

        ಸಿನಿಮಾ ನಟರು ಕೇವಲ ಬೆಳ್ಳಿ ಪರದೆಯ ಮೇಲೆ ನಾಯಕತ್ವದ ಗುಣಗಳನ್ನು ಮೆರೆಯುತ್ತಾರೆ. ಆದರೆ, ವಾಸ್ತವದಲ್ಲಿ ಅವರ ಜೀವನ ಯಾರೂ ಅನುಕರಣೆ ಮಾಡುವಂತಿರುವುದಿಲ್ಲ. ಈ ಸತ್ಯವನ್ನು ನಾವು ಅರಿತು ನಮ್ಮ ಬದುಕನ್ನು ರೂಪಿಸಬಲ್ಲವರನ್ನು ಮಾದರಿಯಾಗಿ ಇಟ್ಟುಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

         ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸದ್ಗುಣಗಳ ಬಗೆಗಿನ ವಿಶಾಲ ದೃಷ್ಟಿಕೋನದ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಇಂಥ ವ್ಯಕ್ತಿ ಚಿಕ್ಯಾಗೋದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಭಾರತದ ಘನತೆಯನ್ನು ಎತ್ತಿಹಿಡಿದರು. ಭಾರತದತ್ತ ಇಡೀ ವಿಶ್ವವೇ ತಿರುಗಿ ನೋಡುವಂತೆ ಭಾಷಣ ಮಾಡಿದರು. ಇವರು ನಮಗೆ ಸದಾ ಮಾರ್ಗದರ್ಶನ ನೀಡುವಂತಾಗಲಿ ಎಂದು ಆಶಿಸಿದರು.

       ತಮ್ಮ ಸಾರ್ಥಕ್ಕೆ ಶಿಕ್ಷಣ ಪಡೆಯುವವರನ್ನು ನಾವು ನೋಡುತ್ತೇವೆ. ಆದರೆ, ದೇಶಕ್ಕೋಸ್ಕರ ತಮ್ಮ ಸರ್ವಸ್ವವನ್ನೂ ಮುಡಿಪಾಗಿ ಇಡುವವರನ್ನು ಕಾಣುವುದು ವಿರಳವಾಗಿದೆ. ಸ್ವಾಮಿ ವಿವೇಕಾನಂದರು ಇಂಥ ವಿರಳ ಸಂಖ್ಯೆಯ ಮಹಾನುಭಾವರಲ್ಲಿ ಒಬ್ಬರು ಎಂದು ಹೇಳಿದರು.

       ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾರಾಯಣ ನಾಯ್ಕರ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ನಡೆಸಿ ತಮ್ಮ ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇದರೊಂದಿಗೆ, ನಮಗೆ ಸಮಾಜ ನೀಡಿದ ಕೊಡುಗೆಗಳಿಗೆ ಪ್ರತಿಯಾಗಿನಾವೂ ಸಮಾಜಕ್ಕೆ ಏನನ್ನಾದರೂ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

        ಎಲ್ಲಾ ಯುವಕ-ಯುವತಿಯರು ಸ್ವಾಮಿ ವಿವೇಕಾನಂದರ ತತ್ವ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಹೇಳಿದರು.ಪರೋಪಕಾರದ ಬಗ್ಗೆ ವಿವರಿಸಿದ ಅವರು, ಯಾವುದೇ ಪ್ರತಿಫಲವನ್ನೂ ಅಪೇಕ್ಷಿಸದೇ ಒಂದು ಮರ ನಮಗೆ ಅಗತ್ಯವಾದ ನೆರಳು, ಉರುವಲು, ಆಮ್ಲಜನಕ ಇತ್ಯಾದಿಗಳನ್ನು ನೀಡುತ್ತದೆ. ಅದರಂತೆ, ನಾವೂ ಪರೋಪಕಾರವನ್ನೇ ನಮ್ಮ ಉಸಿರನ್ನಾಗಿಸಿಕೊಳ್ಳಬೇಕು ಎಂದು ತಿಳಿಸಿದರು.

     ದಾವಣಗೆರೆಯ ಯುವ ಸ್ಪಂದನ ಕೇಂದ್ರದ ಸಮಾಲೋಚಕಿ ಆರ್. ವಿದ್ಯಾ, ಯುವ ಪರಿವರ್ತಕ ಜಿ. ರಮೇಶ್, ಉಪನ್ಯಾಸಕರಾದ ಡಾ. ಅರುಣ್ ಶಿಂಧೆ, ಬಿ.ಜೆ. ಸುಪ್ರಿಯಾ, ಸುಮತಿ ಇತರರು ಮಾತನಾಡಿದರು. ಉಪನ್ಯಾಸಕರಾದ ಕೆ. ನಾಗರಾಜ್, ಸಲ್ಮಾ ಬಾನು, ಲಕ್ಷ್ಮೀ, ಚನ್ನೇಶ್.ಬಿ.ಇದರಮನಿ, ಎಚ್. ನಿಖಿತಾ, ನೇತ್ರಾವತಿ, ಬಿ. ಶಾಲಿನಿ, ಕಾವ್ಯ, ಕಂಪ್ಯೂಟರ್ ಆಪರೇಟರ್ ಮಲ್ಲಿಕಾರ್ಜುನ್, ಸಿಬ್ಬಂದಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

        ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಹಾಗೂ ಸಮಾಧಾನಕರ ಬಹುಮಾನಗಳನ್ನು ಪಡೆದ ಹೊನ್ನಾಳಿ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರಾದ ಎಸ್.ಬಿ. ರಂಜಿತ, ಪಿ.ಎಚ್. ಐಶ್ವರ್ಯ, ಕೆ.ಸಿ. ಚಂದು, ಸಿಂಧು.ಜೆ.ಅರ್ಕಾಚಾರಿ, ನಿರ್ಮಲ ಅವರಿಗೆ ಯುವ ಸ್ಪಂದನ ಕೇಂದ್ರದ ವತಿಯಿಂದ ಸ್ಮರಣಿಕೆ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

         ದಾವಣಗೆರೆಯ ಯುವ ಸ್ಪಂದನ ಕೇಂದ್ರದ ವತಿಯಿಂದ ಹೊನ್ನಾಳಿಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೂ ಸಿಹಿ ವಿತರಿಸಲಾಯಿತು.ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಾವಣಗೆರೆಯ ಯುವ ಸ್ಪಂದನ ಕೇಂದ್ರ ಮತ್ತು ಹೊನ್ನಾಳಿಯ ಸರಕಾರಿ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link