ತುರುವೇಕೆರೆ:
ದೇಶದ್ಯಾಂತ ಪೆಡಂಭೂತವಾಗಿ ಕಾಡುತ್ತಿರುವ ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಯನ್ನು ನಿಗ್ರಹಿಸಲು ಎಲ್ಲರು ಪಣ ತೊಡಬೇಕಿದೆ ಎಂದು ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ತಾಲೂಕಿನ ಅತ್ತಿಕುಳ್ಳೆಪಾಳ್ಯದ ಶ್ರೀ ಶನೇಶ್ವರ ರಿಲಿಜೀಯಸ್ ಟ್ರಸ್ಟ್ ವತಿಯಿಂದ ಸೋಮವಾರ ಸಂಜೆ ಶನಿದೇವರ ದೇವಾಲಯದ 17ನೇ ವರ್ಷದ ಕಾರ್ತೀಕ ದೀಪೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮದ ಸಭೆಯ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಭಾರತ ದೇಶ ಶಾಂತಿ, ನೆಮ್ಮದಿಯ ತವರೂರಾಗಿದೆ ಆದರೆ ಇತ್ತೀಚೆಗೆ ಭ್ರಷ್ಟಚಾರ ಹಾಗೂ ಭಯೋತ್ಪಾದನೆ ವ್ಯಾಪಕವಾಗಿ ವ್ಯಾಪಿಸಿ ನಮ್ಮ ಸಂಸೃತಿಯ ಮೇಲೆ ವಿದೇಶಿ ಸಂಸ್ಕøತಿ ಸವಾರಿ ಮಾಡುವಂತಾಗಿದೆ ಎಂದು ಕಳವಳ ವ್ಯಕ್ತಿಪಡಿಸಿದರು. ಮನುಷ್ಯನಿಗೆ ಹಣ, ಅಧಿಕಾರ ಬಲ ಹೆಚ್ಚಾಗಿ ನಾನು ಎಂಬ ಅಹಂನಿಂದ ಕೆಟ್ಟ ಕಾರ್ಯಗಳನ್ನು ಮಾಡುತ್ತಿದ್ದಾನೆ. ನಾನು ನನ್ನದು ಎಂಬುದನ್ನು ತಲೆಯಿಂದ ತೆಗೆದು ಹಾಕಬೇಕು. ಪ್ರತಿಯೊಬ್ಬರು ಒಂದಲ್ಲಾ ಒಂದು ದಿನ ಮಣ್ಣಲ್ಲಿ ಮಣ್ಣಾಗಲೇ ಬೇಕು. ನಮ್ಮ ದೇಶದಲ್ಲಿ ರಾಮನಿಗೆ ಇತಿಹಾಸ ಇದೆ, ರಾವಣನಿಗೆ ಇಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ಕಡು ಬಡವರಿಗೂ ಸಹಾಯ ಮಾಡುವ ಗುಣ ಬೆಳಸಿಕೊಂಡು ಜೀವನ ಮಾಡಿ ಎಂದು ಸಲಹೆ ನೀಡಿದರು.
ತುಮಕೂರಿನ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಇಂದು ಸಮಾಜಮುಖಿ ಎಂಬ ಪದ ಬಹಳ ಅಗ್ಗವಾಗಿದೆ. ಎಲ್ಲರನ್ನು ಸಮಾಜ ಮುಖಿ ಎಂದು ಕರೆಯಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಸ್ವಾಮೀಜಿಗಳು ಸಮಾಜ ಮುಖಿಗಳಿಗಿಂತ ಸಮಾದಾನ ಮುಖಿಗಳಾಗಿರಬೇಕು ಎಂದು ಸಲಹೆ ನೀಡಿದರು. ಶನಿ ಎಂದರೆ ಕೆಟ್ಟವ ಎಂದು ಎಲ್ಲರಲ್ಲೂ ಮೂಡಿದೆ. ಶನಿಗಳಿಗೆಲ್ಲ ಈಶ್ವರ ಶನೀಶ್ವರ ಅಂದ ಮೇಲೆ ಎಲ್ಲರಿಗೂ ಒಳಿತು ಮಾಡುವ ಶನಿಯನ್ನು ಕಂಡರೆ ಭಯ ಬೇಡ ಎಂದು ತಿಳಿಸಿದರು.
ಆಧ್ಯಾತ್ಮಿಕ ಚಿಂತಕ ಹೆಚ್.ಎಸ್.ಗಣೇಶ್ ಭಟ್ ಮಾತನಾಡಿ ದೇವರ ಚಿಂತನೆಗಳಿಂದ ಮನುಷ್ಯನಿಗೆ ಕಣ್ಣು, ಕಿವಿ, ಒಳ್ಳೆಯ ಸಂತೋಷ ಸಿಗಲಿದೆ. ನಾವು ಯಾವುದೇ ಕೆಲಸ ಮಾಡಲಿ ಅತ್ಯಂತ ಶ್ರದ್ದೆ, ಪ್ರಮಾಣಿಕತೆಯಿಂದ ಮಾಡಬೇಕು ಎಂದು ಸಲಹೆ ನೀಡಿ ಶನೀಶ್ವರ ಸ್ವಾಮಿಯ ಮುಂದಿನ ಕಾರ್ತಿಕ ದೀಪೋತ್ಸವ ಕಾರ್ಯಕ್ರಮಕ್ಕೆ 25 ಸಾವಿರ ದೇಣಿಗೆ ನೀಡುವುದಾಗಿ ಇದೇ ಸಂಧರ್ಭದಲ್ಲಿ ಘೋಷಿಸಿದರು.
ಈ ಸಂದರ್ಬದಲ್ಲಿ ಅಮಾನಿಕೆರೆಮಂಜಣ್ಣ ಸಂಗ್ರಹಿಸಿ ರಚಿಸಿರುವ ಭಜನಮಾಲ, ಭಕ್ತಿಗೀತೆ ಹಾಗೂ ಸೂ ವಿಚಾರಧಾರಾ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಬಾಲಪ್ರತಿಭೆ ಟಿ.ಆರ್. ರಜತ್ ಭಾರದ್ವಾಜ್ ಕ್ಯಾಸಿಯೋ ಮೂಲಕ ಕನ್ನಡ ಹಾಡುಗಳಿಗೆ ಸಂಗೀತ ನುಡಿಸಿ ಭಕ್ತರ ಗಮನ ಸೆಳೆದರು. ಆನೇಖ ದಾನಿಗಳಿಗೆ, ಮುಖಂಡರಿಗೆ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಜಯಲಕ್ಷ್ಮೀಜಯರಾಮ್, ತಾಲೂಕು ಪಂಚಾಯ್ತಿ ಸದಸ್ಯ ಸಿ.ವಿ.ಮಹಾಲಿಂಗಯ್ಯ, ಮುಖಂಡ ಎಂ.ಡಿ.ಮೂರ್ತಿ, ಕಸಾಪ ಅಧ್ಯಕ್ಷ ನಂ.ರಾಜು, ಕಲಾವಿದ ಹುಲಿಕಲ್ ನಟರಾಜು, ಗ್ರಾಮ ಪಂಚಾಯ್ತಿ ಸದಸ್ಯ ಲಿಂಗರಾಜು, ಪಿಎಸಿಬಿ ಅಧ್ಯಕ್ಷ ಮೈನ್ಸ್ ರಾಜಣ್ಣ, ಟ್ರಸ್ಟ್ ಪದಾದಿಕಾರಿಗಳಾದ ಅಮಾನಿಕೆರೆಮಂಜಣ್ಣ, ಎನ್.ಆರ್.ಜಯರಾಮ್, ಬ್ಯಾಂಕ್ ಮೂಡಲಗಿರಿಯಪ್ಪ ಸೇರಿದಂತೆ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








