ದಾವಣಗೆರೆ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರಿಗೆ 1810 ಕೋಟಿ ರೂ. ಕಪ್ಪ ಸಲ್ಲಿಸಿರುವ ಪ್ರಕರಣದ ತನಿಖೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಪಾಲ್‍ಗೆ ವಹಿಸಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಆಗ್ರಹಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯ ರೆಡ್ಡಿ ಸಹೋದರರೇ ನಾನು ಮುಖ್ಯಮಂತ್ರಿಯಾಗಲು ಕಾರಣ ಎಂಬುದಾಗಿ ಯಡಿಯೂರಪ್ಪನವರು ಡೈರಿಯಲ್ಲಿ ದಾಖಲಿಸಿದ್ದಾರೆ. ಬಿಜೆಪಿ ಕೇಂದ್ರ ಸಮಿತಿಗೆ 1 ಸಾವಿರ ಕೋಟಿ ರೂ. ಪಾವತಿಸಿರುವುದಾಗಿ, ಅರುಣ್ ಜೇಟ್ಲಿಗೆ 150 ಕೋಟಿ, ನಿತಿನ್ ಗಡ್ಕರಿಗೆ 150 ಕೋಟಿ, ಎಲ್.ಕೆ.ಅಡ್ವಾಣಿಗೆ 50 ಕೋಟಿ, ಮರುಳಿ ಮನೋಹರ್ ಜೋಷಿಗೆ 50 ಕೋಟಿ, ಗಡ್ಕರಿ ಪುತ್ರನ ಮದುವೆಗೆ 10 ಕೋಟಿ, ತಮ್ಮ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಧೀಶರಿಗೆ 250 ಕೋಟಿ ರೂ ಹಾಗೂ ತನ್ನ ಪರವಾಗಿ ವಾದಿಸಿದ ವಕೀಲರಿಗೆ 50 ಕೋಟಿ ರೂ. ಪಾವತಿಸಿರುವುದಾಗಿ ಸ್ವತಃ ಯಡಿಯೂರಪ್ಪನವರೇ ಡೈರಿಯಲ್ಲಿ ಉಲ್ಲೇಖಿಸಿ ಸಹಿ ಮಾಡಿದ್ದಾರೆ.
ಹೀಗಾಗಿ ಈ ಕಪ್ಪ ಸಲ್ಲಿಸಿರುವ ಪ್ರಕರಣವನ್ನು ಲೋಕಪಾಲ್ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.2008ರಿಂದ 2013ರ ಅವಧಿಯೊಳಗಿನ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಆಡಳಿತಾವಧಿಯಲ್ಲಿ ಮೂರು ಜನ ಮುಖ್ಯಮಂತ್ರಿಗಳಾಗಿ ನಾಡಿನ ಸಂಪತ್ತನ್ನು ಲೂಡಿ ಹೊಡೆದು, ದೇಶ-ವಿದೇಶ ಮಟ್ಟದಲ್ಲಿ ಕರ್ನಾಟಕದ ಘನತೆಯನ್ನು ಮಣ್ಣು ಪಾಲು ಮಾಡಿದ್ದಾರೆ.
ಅತ್ಯಂತ ಕೆಟ್ಟ ಹಾಗೂ ಭ್ರಷ್ಟ ಮುಖ್ಯಮಂತ್ರಿ ಎಂದೇ ಖ್ಯಾತಿಯಾಗಿರುವ ಬಿ.ಎಸ್.ಯಡಿಯೂರಪ್ಪ ಮೊದಲು ರೈಸ್ ಮಿಲ್‍ನಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಲೆಕ್ಕ ಬರೆಯುತ್ತಿದ್ದರು. ಹೀಗಾಗಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಾನು ದೇಣಿಗೆ ಪಡೆದ ಮೊತ್ತ ಹಾಗೂ ಹೈಕಮಾಂಡ್‍ಗೆ ಸಲ್ಲಿಸಿದ ಕಪ್ಪದ ಬಗ್ಗೆ ಡೈರಿಯಲ್ಲಿ ದಾಖಲಿಸಿ, ಪ್ರತಿ ಪುಟಗಳಲ್ಲೂ ಸಹಿ ಹಾಕುವ ಮೂಲಕ ವೃತ್ತಿ ಧರ್ಮವನ್ನು ಮೆರೆದಿದ್ದಾರೆಂದು ಲೇವಡಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಭ್ರಷ್ಟ ಯಡಿಯೂರಪ್ಪನವರೆಗೂ ನಾನು ಚೌಕಿದಾರ್ ಹೇಳಿಕೊಳ್ಳುವ ಮೂಲಕ ನಕಲಿ ಚೌಕಿದಾರರು, ನಿಜವಾಗಿ ಕಾರ್ಯನಿರ್ವಹಿಸುತ್ತಿರುವ ಚೌಕಿದಾರರ ಮರ್ಯಾದೆ ತೆಗೆಯುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು .ಯಡಿಯೂರಪ್ಪ ಬಿಜೆಪಿ ನಾಯಕರಿಗೆ ಕಪ್ಪ ನೀಡಿರುವ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ತನಿಖೆಗೆ ವಹಿಸದಿದ್ದರೇ, ಲೋಕಪಾಲರೇ ಸ್ವಯಂ ಪ್ರೇರಿತವಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಬೇಕೆಂದು ಮನವಿ ಮಾಡಿದರು.
ರಾಜ್ಯದ ಮರ್ಯಾದೆ ಉಳಿಸಲು ಯಡಿಯೂರಪ್ಪ ತಕ್ಷಣವೇ ರಾಜಕೀಯ ನಿವೃತ್ತಿ ಘೋಷಿಸಬೇಕೆಂದು ಆಗ್ರಹಿಸಿದ ಅವರು, ಈ ಡೈರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಸ್ತಾಕ್ಷರ ತನಿಖೆಯಾದರೆ, ಯಡಿಯೂರಪ್ಪ ಮತ್ತೆ ಜೈಲು ಪಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಬೆಂಗಳೂರಿನಿಂದ ಹುಬ್ಬಳ್ಳಿ ಧಾರವಾಡದ ವರೆಗೂ ಆಗಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಬಿಡುಗಡೆಯಾಗಿರುವ 4722 ಕೋಟಿ ರೂ.ಗಳನ್ನು ತಾವು ಬಿಡುಗಡೆ ಮಾಡಿಸಿರುವುದಾಗಿ ಹೇಳುತ್ತಿದ್ದಾರೆ. ಯುಪಿಎ ಅವಧಿಯಲ್ಲಿ ಮಂಜೂರಾಗಿರುವ ದಾವಣಗೆರೆ-ಚಿತ್ರದುರ್ಗ-ತುಮಕೂರು ರೈಲ್ವೆ ಮಾರ್ಗಕ್ಕೆ ಇನ್ನೂ ಭೂಸ್ವಾಧೀನವೇ ಆಗಿಲ್ಲ.
ಆದರೆ, ಅನುದಾನ ತಂದಿರುವುದಾಗಿ, 2ಜಿ ಎಥೆನಾಲ್ ಘಟಕ ಎಲ್ಲಿದೆ ಎಂಬುದು ಗೊತ್ತೇ ಇಲ್ಲ. ಆದರೆ, ಇದಕ್ಕೆ 960 ಕೋಟಿ ರೂ. ಅನುದಾನ ತಂದಿರುವುದಾಗಿ ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಈ ಬಾರಿ ಜಿಲ್ಲೆಯ ಮತದಾರರು ಮೋಸ ಹೋಗಲ್ಲ. ಸಂಸದ ಜಿ.ಎಂ.ಸಿದ್ದೇಶ್ವರ್ ಅವರನ್ನು ಮನೆಗೆ ಕಳುಸಿಯೇ ತೀರುತ್ತಾರೆಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಲ್ಲಾವಲಿ ಗಾಜಿಖಾನ್, ರೆಹಮತ್‍ವುಲ್ಲಾ, ಲಿಯಾಕತ್ ಅಲಿ, ಎ.ಅಬ್ದುಲ್ ಜಬ್ಬಾರ್, ಯೂಸೂಫ್, ಖಾಜಿ ಖಲೀಲ್, ಡಿ.ಶಿವಕುಮಾರ್ ಮತ್ತಿತರರು ಹಾಜರಿದ್ದರು.