ನರೇಗಾ ಯೋಜನೆಯಡಿ 1861 ಕೋಟಿ ರೂ.ಬಿಡುಗಡೆ : ಕೆ.ಎಸ್. ಈಶ್ವರಪ್ಪ

ಚಿತ್ರದುರ್ಗ     ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಬಡ ಕೂಲಿಕಾರ್ಮಿಕರಿಗೆ ಕೂಲಿ ಹಣ ಪಾವತಿಸಲು ಕೇಂದ್ರ ಸರ್ಕಾರ 1861 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ನರೇಗಾ ಯೋಜನೆಯಡಿ ಹೆಚ್ಚಿನ ಮಾನವ ದಿನಗಳನ್ನು ಸೃಜಿಸುವ ಮೂಲಕ ದೇಶದಲ್ಲಿಯೇ ಕರ್ನಾಟಕ ಎರಡನೆ ಸ್ಥಾನದಲ್ಲಿದೆ. ಮೊದಲನೆ ಸ್ಥಾನ ಪಡೆಯುವಂತಾಗಲು ಅಧಿಕಾರಿಗಳು ಹೆಚ್ಚು ಹೆಚ್ಚು ಕೂಲಿ ಕೆಲಸ ಮಾಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು.

     ಆರ್ಟ್ ಆಫ್ ಲಿವಿಂಗ್ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವ `ಅಂತರ್ಜಲ ಚೇತನ’ ಯೋಜನೆಗೆ ನಗರದ ತುರುವನೂರು ರಸ್ತೆಯಲ್ಲಿರುವ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.ಅಂತರ್ಜಲ ಚೇತನ ಮತ್ತು ನರೇಗಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು ಪಿಡಿಒ, ತಾಲ್ಲೂಕು ಪಂಚಾಯತ್ ಸೇರಿದಂತೆ ಎಲ್ಲ ಜನಪ್ರತಿನಿಧಿಗಲ ಕೈಯಲ್ಲಿದೆ. ಅಂತರ್ಜಲ ಮಟ್ಟ ಹೆಚ್ಚಿಸಲು ಯಾವುದೇ ಪ್ರಯತ್ನ ಮಾಡದೆ ಹೆಚ್ಚು ಹೆಚ್ಚು ಬೋರ್‍ವೆಲ್‍ಗಳನ್ನು ಕೊರೆದು, ಭೂಮಿಗೆ ಇಷ್ಟು ವರ್ಷಗಳ ಕಾಲ ಅನ್ಯಾಯ ಮಾಡಿದ್ದೇವೆ.

       ಆ ತಪ್ಪನ್ನು ಸರಿಪಡಿಸಲು ಇದೀಗ ಸಕಾಲವಾಗಿದ್ದು, ಅಂತರ್ಜಲ ಮಟ್ಟ ಹೆಚ್ಚಿಸಲು ಪ್ರತಿಯೊಬ್ಬರೂ ಸಹಕರಿಸಬೇಕಿದೆ ಎಂದರು ಪ್ರತಿಯೊಬ್ಬರೂ ತಮ್ಮ ಹಳ್ಳಿಗಳಲ್ಲಿ ನರೇಗಾದಡಿ ಅಂತರ್ಜಲ ಕಾರ್ಯಕ್ರಮಗಳನ್ನು ಯಶಸ್ವಿ ಮಾಡಬೇಕಿದೆ. ಉದ್ಯೋಗಖಾತ್ರಿ ಕೂಲಿ ಹಣ ಪಾವತಿಗಾಗಿ ಬಾಕಿ ಇದ್ದ 1861 ಕೋಟಿ ರೂ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕಳೆದ ಜೂ. 11 ರಂದು 425 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕೂಲಿ ಕಾರ್ಮಿಕರಿಗೆ ನರೇಗಾದಡಿ ದಿನಕ್ಕೆ 275 ರೂ. ಕೂಲಿ ಹಣ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರು ಸ್ಥಳೀಯವಾಗಿಯೇ ಹೆಚ್ಚು ಹೆಚ್ಚು ಕೂಲಿ ಕೆಲಸ ಮಾಡಿ, ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವ ಈಶ್ವರಪ್ಪ ಅವರು ಹೇಳಿದರು.

      ಸಂಸದ ಎ. ನಾರಾಯಣಸ್ವಾಮಿ ಅವರು ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿದೆ. ಇದರಿಂದಾಗಿ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ತಾಲ್ಲೂಕುಗಳಲ್ಲಿ ಬೋರ್‍ವೆಲ್‍ಗಳಲ್ಲಿ ಫ್ಲೋರೈಡ್‍ಯುಕ್ತ ನೀರು ದೊರೆಯುತ್ತಿದೆ. ಫ್ಲೋರೈಡ್ ಅಂಶದಿಂದ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ. ಇಂತಹ ಸನ್ನಿವೇಶದಲ್ಲಿ ಅಂತರ್ಜಲ ಚೇತನ ಯೋಜನೆ ಜಿಲ್ಲೆಯಲ್ಲಿ ಜಾರಿಗೊಳಿಸುತ್ತಿರುವುದರಿಂದ, ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಸುಧಾರಣೆಗೊಂಡು ಫ್ಲೋರೈಡ್‍ನಿಂದ ಜಿಲ್ಲೆ ಮುಕ್ತಿ ಹೊಂದಲು ಸಾಧ್ಯವಾಗಲಿದೆ ಎಂದು ನುಡಿದರು

      ಬಡ ಕೂಲಿಕಾರ್ಮಿಕರಿಗೆ ಉದ್ಯೋಗ ನೀಡುವ ನರೇಗಾ ಯೋಜನೆಗೆ ಈ ವರ್ಷ 01 ಲಕ್ಷ ಕೋಟಿ ರೂ. ಅನುದಾನವನ್ನು ದೇಶದಲ್ಲಿ ಮೀಸಲಿಡಲಾಗಿದೆ. ಈ ಯೋಜನೆಯಡಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಯೋಜನೆಯಲ್ಲಿ ಇರುವ ಅವಕಾಶಗಳ ಬಗ್ಗೆ ಪಿಡಿಒಗಳು, ಕಂದಾಯ ಅಧಿಕಾರಿಗಳು, ಎನ್‍ಜಿಒ, ಸಂಘ ಸಂಸ್ಥೆಗಳು ವ್ಯಾಪಕ ಪ್ರಚಾರ ನೀಡಬೇಕು. ಅಧಿಕಾರಿಗಳು ಹಳ್ಳಿಯತ್ತ ಮುಖ ಮಾಡಬೇಕು. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಾದಾಗ ಮಾತ್ರ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾದ್ಯ ಎಂದು ಹೇಳಿದರು.

      ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರು ಮಾತನಾಡಿ, ಆರ್ಟ್ ಆಫ್ ಲಿವಿಂಗ್‍ನ ರವಿಶಂಕರ್ ಗುರೂಜಿ ಅವರ ಸಾಮಾಜಿಕ ಕಳಕಳಿ ವಿಶ್ವವ್ಯಾಪಿ ಜನಮನ್ನಣೆ ಗಳಿಸಿದೆ. ಅಂತರ್ಜಲ ಚೇತನ ಯೋಜನೆಯನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ ಕೈಗೊಳ್ಳಲಾಗುತ್ತಿದ್ದು, ಜಿಲ್ಲೆಗೆ 500 ಕೋಟಿ ರೂ. ಯೋಜನೆಯಡಿ ಅಂತರ್ಜಲ ಮಟ್ಟ ಸುಧಾರಣೆಗೆ ಯೋಜಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಕಳೆದ 100 ವರ್ಷಗಳಲ್ಲಿ ಸುಮಾರು 70 ವರ್ಷಗಳಷ್ಟು ಬರವನ್ನೇ ಅನುಭವಿಸಿದೆ.

     ಕೊರೋನಾ ವೈರಸ್ ಸೋಂಕು ಹರಡುವ ಭೀತಿಯ ನಡುವೆಯೇ ಕೂಲಿ ಕಾರ್ಮಿಕರಿಗೆ ಆರ್ಥಿಕ ಆಸರೆ ನೀಡಲು ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, 7-8 ದಿನಗಳಲ್ಲಿಯೇ ಕೂಲಿ ಹಣ ಪಾವತಿಸಲು ಕ್ರಮ ವಹಿಸಲಾಗಿದೆ. ಕೊರೋನಾ ಭೀತಿಯಿಂದ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಡ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಉದ್ಯೋಗ ನೀಡುವ ಮೂಲಕ ಅವರಿಗೆ ಆರ್ಥಿಕ ಭದ್ರತೆ ನೀಡಲಾಗುತ್ತಿದೆ ಎಂದರು.

    ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು ಮಾತನಾಡಿ, ಚಿತ್ರದುರ್ಗ ಜಿಲ್ಲೆ ಬಹಳಷ್ಟು ಬರಗಾಲವನ್ನು ಕಂಡಿರುವ ಜಿಲ್ಲೆ, ಇಲ್ಲಿ 700 ರಿಂದ ಸಾವಿರ ಅಡಿ ಕೊರೆದರೂ ನೀರು ದೊರಕುವುದು ಕಡಿಮೆ. ಮಳೆ ನೀರನ್ನು ಅಲ್ಲಲ್ಲಿ ತಡೆದು ಇಂಗಿಸುವುದು, ಕೃಷಿ ಹೊಂಡ, ಇಂಗುಬಾವಿಗಳಿಂದ ಅಂತರ್ಜಲ ಮಟ್ಟ ಸುಧಾರಣೆಗೆ ಅನುಕೂಲವಾಗಲಿದೆ. ಅಂತರ್ಜಲ ಚೇತನ ಜಿಲ್ಲೆಯಲ್ಲಿ ಜಾರಿಗೊಳಿಸುತ್ತಿರುವುದು ಜಿಲ್ಲೆಯ ಜನರಿಗೆ ಸಂತಸ ತಂದಿದೆ. ಜಿಲ್ಲೆಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಡಿ ಕಳೆದ ವರ್ಷ 24.49 ಕೋಟಿ ರೂ. ಗಳ ಅನುದಾನ ವಿನಿಯೋಗವಾಗದೆ ಲ್ಯಾಪ್ಸ್ ಆಗಿದೆ.

     ಜಿಲ್ಲೆಯ ಗ್ರಾಮೀಣ ಪ್ರದೇಶಗಳ ರಸ್ತೆ ದುರಸ್ತಿ, ವಿವಿಧ ಕಟ್ಟಡ ಸೇರಿದಂತೆ ಗ್ರಾಮೀಣ ಅಭಿವೃದ್ಧಿಗಾಗಿ ಖರ್ಚಾಗಬೇಕಿದ್ದ ಅನುದಾನ ವಾಪಸ್ ಹೋಗಿದೆ. ಈ ಅನುದಾನವನ್ನು ಪುನಃ ಜಿಲ್ಲೆಗೆ ಮರು ಬಿಡುಗಡೆ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಶಾಸಕರುಗಳಾದ ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ಟಿ. ರಘುಮೂರ್ತಿ, ಎಂಎಲ್‍ಸಿ ಜಯಮ್ಮ ಬಾಲರಾಜ್, ತಾ.ಪಂ. ಅಧ್ಯಕ್ಷ ಲಿಂಗರಾಜು ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link