ಮೋಜು ಮಸ್ತಿಗಾಗಿ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ…!!!

ಬೆಂಗಳೂರು

    ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಿ ಲೈವ್ ಬ್ಯಾಂಡ್‍ಗಳಿಗೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.ಆರ್‍ಟಿ ನಗರದ ಸುಲ್ತಾನ್ ಪಾಳ್ಯದ ಮಹಮದ್ ಫೈಜಲ್ ಅಲಿಯಾಸ್ ಸೈಯ್ಯದ್ ಇಸ್ಮಾಯಿಲ್ (20) ಹಾಗೂ ಆರ್‍ಟಿ ನಗರದ ಕೆಂಪಾಪುರದ ವಿಕ್ರಂ ಕುಮಾರ್ ಅಲಿಯಾಸ್ ಉಸ್ಮಾನ್ (20) ಬಂಧಿತ ಆರೋಪಿಗಳಾಗಿದ್ದು ವಾರದ ಹಿಂದಷ್ಟೇ ಇವರಿಬ್ಬರು ಎನ್‍ಆರ್ ಕಾಲೋನಿಯಲ್ಲಿ ಮೆಡಿಕಲ್ ಸ್ಟೋರ್, ಪಾನ್ ಬೀಡಾ ಅಂಗಡಿ ಸೇರಿದಂತೆ ಸರಣಿ ಅಂಗಡಿ ಕಳವು ಮಾಡಿ ಪರಾರಿಯಾಗಿದ್ದರು.

     ಬಂಧಿತರಿಂದ 40 ಸಾವಿರ ರೂ. ನಗದು, ಎರಡು ಮೊಬೈಲ್‍ಗಳು, ಸಿಗರೇಟ್ ಪ್ಯಾಕ್‍ಗಳು, ಕಬ್ಬಿಣದ ರಾಡ್‍ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಬಂಧಿತ ವಿಕ್ರಂ ಕುಮಾರ್ ಬಿಹಾರ ಮೂಲದವನಾಗಿದ್ದು, ಹಿಂದೆ ಆರ್‍ಟಿ ನಗರ, ಕೆಪಿ ಅಗ್ರಹಾರ, ಕೋರಮಂಗಲದಲ್ಲಿ ಅಂಗಡಿ ಕಳ್ಳತನ ಮಾಡಿ ಜೈಲಿಗೆ ಹೋಗಿ ಕಳೆದ ಜನವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ.

     ಆರ್‍ಟಿ ನಗರದಲ್ಲಿ ಕಳೆದ ಆರು ತಿಂಗಳಿನಿಂದ ವಾಸವಾಗಿದ್ದ ಆರೋಪಿಯು ಮತ್ತೊಬ್ಬ ಬಂಧಿತ ಆರೋಪಿ ಸೈಯ್ಯದ್ ಇಸ್ಮಾಯಿಲ್ ಜೊತೆ ಸೇರಿ ಅಂಗಡಿಗಳ ಕಳ್ಳತನಕ್ಕೆ ಇಳಿದಿದ್ದರು. ರಾತ್ರಿವೇಳೆ ಇಬ್ಬರೂ ಸಂಚರಿಸುತ್ತ ಬೀಗ ಹಾಕಿದ ಅಂಗಡಿಗಳು, ಪಾನ್ ಶಾಪ್‍ಗಳ ಬೀಗ ಮುರಿದು ಕಳವು ಮಾಡಿ ಲೈವ್ ಬ್ಯಾಂಡ್ ಹೋಗಿ ಮೋಜು – ಮಸ್ತಿ ಮಾಡುತ್ತಿದ್ದರು.

ರಾಡ್ ಬಳಸಿ ಕಳವು

    ಬೀಗ ಹಾಕಿದ ಅಂಗಡಿಗಳನ್ನು ಗುರಿಯಾಗಿಸಿಕೊಂಡಿದ್ದ ಆರೋಪಿಗಳು ಕಳೆದ ಆರು ತಿಂಗಳುಗಳಲ್ಲಿ ಬಾಣಸವಾಡಿಯಲ್ಲಿ 8 ಅಂಗಡಿ, ಕೋರಮಂಗಲ, ಮಹದೇವಪುರ, ಕೆಆರ್ ಪುರ, ಆರ್‍ಟಿ ನಗರ, ಹೆಬ್ಬಾಳ, ಸದಾಶಿವನಗರ, ಕೆಪಿ ಅಗ್ರಹಾರ, ಸುದ್ದಗುಂಟೆ ಪಾಳ್ಯಗಳಲ್ಲಿ ಅಂಗಡಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

      ಒಂದು ಕಡೆ ಅಂಗಡಿ ಕಳವು ಮಾಡಿ ದೋಚಿದ ಹಣವನ್ನು ಮೋಜು -ಮಸ್ತಿಗೆ ವಿನಿಯೋಗಿಸಿ, ಹಣ ಖರ್ಚಾದ ಕೂಡಲೇ ಮತ್ತೊಂದು ಪ್ರದೇಶಕ್ಕೆ ತೆರಳಿ ಅಂಗಡಿ ಕಳವಿಗೆ ಇಳಿಯುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.ಎನ್‍ಆರ್ ಕಾಲೋನಿಯಲ್ಲಿ ಕಳೆದ ಜುಲೈ 1 ರಂದು ಮುಂಜಾನೆ ನಡೆದಿದ್ದ ಕಳವು ಪ್ರಕರಣವನ್ನು ದಾಖಲಿಸಿ ಬಸವನಗುಡಿ ಪೊಲೀಸ್ ಇನ್ಸ್‍ಪೆಕ್ಟರ್ ಕೆಂಪೇಗೌಡ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡು ಆರ್‍ಟಿ ನಗರದ ಕೆಂಪಾಪುರದ ಪಾರ್ಕ್ ಬಳಿ ಇದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಕಟೋಚ್ ಅವರು ತಿಳಿಸಿದ್ದಾರೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link