ಚಿತ್ರದುರ್ಗ :

ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಜಿಲ್ಲೆಯಲ್ಲಿ ಶೇ. 50 ಕ್ಕಿಂತ ಹೆಚ್ಚು ಪ.ಜಾತಿ ಜನಸಂಖ್ಯೆ ಇರುವ 07 ಗ್ರಾಮಗಳನ್ನು ಎರಡನೆ ಹಂತದಲ್ಲಿ ಆಯ್ಕೆ ಮಾಡಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 2.80 ಕೋಟಿ ರೂ. ಅನುದಾನ ನಿಗದಿಪಡಿಸಿದೆ. ಸಂಬಂಧಿಸಿದ ಗ್ರಾಮ ಪಂಚಾಯತಿಯವರು ಕೂಡಲೆ ಕ್ರಿಯಾ ಯೋಜನೆ ರೂಪಿಸಿ, ಅನುಮೋದನೆಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಸೂಚನೆ ನೀಡಿದರು.
ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿ ಕ್ರಿಯಾ ಯೋಜನೆ ರೂಪಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಮಂತ್ರಾಲಯ ಇಲಾಖೆಯ ವತಿಯಿಂದ ಅನುಷ್ಠಾನಗೊಳಿಸುವ ಕೇಂದ್ರ ಪುರಸ್ಕøತ ಯೋಜನೆಯಾದ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಶೇ. 50 ಕ್ಕಿಂತ ಹೆಚ್ಚು ಪ.ಜಾತಿ ಜನಸಂಖ್ಯೆ ಇರುವ ಜಿಲ್ಲೆಯ 07 ಗ್ರಾಮಗಳನ್ನು ಎರಡನೆ ಹಂತದಲ್ಲಿ ಆಯ್ಕೆ ಮಾಡಲಾಗಿದೆ. ಹೊಸದುರ್ಗ ತಾಲ್ಲೂಕಿನ ಅತಿಮಗೆ, ಬಲ್ಲಾಳಸಮುದ್ರ, ದೇವಿಗೆರೆ, ಚಳ್ಳಕೆರೆ ತಾಲ್ಲೂಕಿನ ಮೀರಾಡಿಮ್ಮನಹಳ್ಳಿ, ಮನಮೈನಹಟ್ಟಿ, ಓಬನಹಳ್ಳಿ, ಹೊಳಲ್ಕೆರೆ ತಾಲ್ಲೂಕಿನ ಟಿ. ಯಮ್ಮಿಗನೂರು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು
ಪ್ರತಿ ಗ್ರಾಮಗಳಿಗೆ ತಲಾ 40 ಲಕ್ಷ ರೂ. ಗಳಂತೆ ಒಟ್ಟು 2.80 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಈ ಅನುದಾನದಲ್ಲಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು, ನೈರ್ಮಲ್ಯ ವ್ಯವಸ್ಥೆ, ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಅಂಗನವಾಡಿ ಕಟ್ಟಡ, ರಸ್ತೆ, ಬೀದಿದೀಪ, ಸೋಲಾರ್ ವಿದ್ಯುತ್ ದೀಪ, ಅಂಗನವಾಡಿ ಮತ್ತು ಶಾಲೆಗಳಲ್ಲಿ ಶೌಚಾಲಯ ಕಟ್ಟಡ ಹಾಗೂ ದುರಸ್ತಿಗೆ ಅನುದಾನ ವೆಚ್ಚ ಮಾಡಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿ ಆಯಾ ಗ್ರಾ.ಪಂ. ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮ ಅಭಿವೃದ್ಧಿ ಸಮಿತಿ ರಚಿಸಿದ್ದು, ಈ ಗ್ರಾಮ ಮಟ್ಟದ ಸಭೆಯಲ್ಲಿ ಕೈಗೊಳ್ಳಬೇಕಾಗಿರುವ ಕಾಮಗಾರಿಗಳ ಬಗ್ಗೆ ಚರ್ಚಿಸಿ, ಮೊದಲ ಆದ್ಯತೆ ನೀಡಬೇಕಾಗಿರುವ ಕಾಮಗಾರಿಗಳನ್ನೊಳಗೊಂಡ ಕ್ರಿಯಾ ಯೋಜನೆಯನ್ನು ಒಂದು ವಾರದೊಳಗೆ ಸಿದ್ಧಪಡಿಸಿ, ಅನುಮೋದನೆಗೆ ಸಲ್ಲಿಸಬೇಕು ಎಂದರು
ಗ್ರಾಮ ಮರು ಆಯ್ಕೆ:
2016-17 ನೇ ಸಾಲಿನಲ್ಲಿ ಆಯ್ಕೆಯಾಗಿದ್ದ ಜಿಲ್ಲೆಯ 40 ಗ್ರಾಮಗಳ ಪೈಕಿ ಹೊಳಲ್ಕೆರೆ ತಾಲ್ಲೂಕಿನ ಕಾಲಘಟ್ಟ, ಹಿರಿಯೂರು ತಾಲ್ಲೂಕಿನ ಭರಮಗಿರಿ ಹಾಗೂ ಮೊಳಕಾಲ್ಮೂರು ತಾಲ್ಲೂಕಿನ ಚಿಕ್ಕೇರಹಳ್ಳಿ ಗ್ರಾಮಗಳನ್ನು ಮರು ಆಯ್ಕೆ ಮಾಡಲಾಗಿದೆ. ಪ್ರತಿ ಗ್ರಾಮಕ್ಕೆ 9.50 ಲಕ್ಷ ರೂ. ಗಳ ಅನುದಾನವನ್ನು ನಿಗದಿಪಡಿಸಲಾಗಿದ್ದು, ಈ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೂ ಆದ್ಯತೆ ಮೇರೆಗೆ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಕ್ರಿಯಾ ಯೋಜನೆ ರೂಪಿಸುವಾಗ ಯಾವುದೇ ಕಾರಣಕ್ಕೂ ಸಮುದಾಯಭವನ ಅಥವಾ ದೇವಸ್ಥಾನ ಕಟ್ಟಡಗಳಿಗೆ ಕಾಮಗಾರಿ ಹಾಕಿಕೊಳ್ಳುವಂತಿಲ್ಲ. ಘನ-ದ್ರವ ತ್ಯಾಜ್ಯ ವಿಲೇವಾರಿ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಬೇಕು, ಬೇರೆ ಯೋಜನೆಯಡಿ ಈಗಾಗಲೆ ಸೇರ್ಪಡೆಗೊಂಡಿರುವ ಕಾಮಗಾರಿಗಳನ್ನು ಈ ಯೋಜನೆಯಲ್ಲಿ ಪುನಃ ಸೇರಿಸುವಂತಿಲ್ಲ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ಮಾತನಾಡಿ, 2011 ರ ಜನಗಣತಿ ಆದಾರದಲ್ಲಿ ಪ.ಜಾತಿ ಜನಸಂಖ್ಯೆ ಶೇ. 50 ಕ್ಕಿಂತ ಹೆಚ್ಚಿರುವ ಗ್ರಾಮಗಳನ್ನು ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಕೇಂದ್ರ ಸರ್ಕಾರವೇ ಆಯ್ಕೆ ಮಾಡಿದೆ. 2016-17 ರಲ್ಲಿ ಈ ಯೋಜನೆಯಡಿ ಆಯ್ಕೆಯಾದ ಗ್ರಾಮಗಳ ಪೈಕಿ 05 ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ. 32 ಗ್ರಾಮಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು. ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮಗಳ ಪಿಡಿಒ ಗಳು, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
