ಬೆಂಗಳೂರು
ಬೆಟ್ಟದಿಂದ ಮಿನಿ ಬಸ್ ಮಗುಚಿ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿ, 25 ಮಂದಿ ಗಾಯಗೊಂಡಿರುವ ದಾರುಣ ಘಟನೆ ನಗರದ ಹೊರವಲಯದ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೇವೂರು ಗ್ರಾಮದ ಸಂಜೀವಮ್ಮ (60) ಹಾಗೂ ನಿಡಸಾಲೆಯ ತಿಮ್ಮಯ್ಯ(65)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ ಗಾಯಗೊಂಡಿರುವ 25 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಮೂವರ ಸ್ಥಿತಿ ಗಂಭಿರವಾಗಿದೆ
ಬೇವೂರು ಗ್ರಾಮದಿಂದ ಶಬರಿಮಲೆಗೆ ಹೋಗುತ್ತಿದ್ದ ಭಕ್ತಾಧಿಗಳು ಗ್ರಾಮದ ಬೆಟ್ಟದಲ್ಲಿ ಅನ್ನದಾನ ಆಯೋಜಿಸಿದ್ದರು. ಸಂಬಂಧಿಕರು ಪ್ರಸಾದ ಸೇವಿಸಿ ಭಕ್ತರನ್ನು ಬೀಳ್ಕೊಟ್ಟು ಬೆಟ್ಟದಿಂದ ವಾಪಸ್ ಬರುವಾಗ ಈ ಘಟನೆ ಸಂಭವಿಸಿದೆ.
ಇಳಿಜಾರು ರಸ್ತೆಯಲ್ಲಿ ಬರುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಕ್ಷಣಾರ್ಧದಲ್ಲಿ ನೋಡನೋಡುತ್ತಿದ್ದಂತೆ ಮಗುಚಿ ಬಿದ್ದಿದೆ. ವಾಹನದ ಬಾಗಿಲಂಚಿನಲ್ಲೇ ಕುಳಿತ್ತಿದ್ದ ಇವರ ಮೇಲೆ ವಾಹನ ಪಲ್ಟಿಹೊಡೆದ ಪರಿಣಾಮ ಇಬ್ಬರ ದೇಹ ಜಜ್ಜಿ ಹೋಗಿ ರಕ್ತ ಕೋಡಿಯಂತೆ ಹರಿದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ವಾಹನದ ಕೆಳಗೆ ಸಿಲುಕಿದ ಮೃತದೇಹಗಳನ್ನು ಗ್ರಾಮಸ್ಥರ ಸಹಾಯದಿಂದ ಹೊರ ತೆಗೆದು ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ರಾಜೇದ್ರಪ್ರಸಾದ್ ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ದೊರೆಯುವ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸ್ಕೂಟರ್ ಸವಾರ ಸಾವು
ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಸ್ಕೂಟರ್ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಪೀಣ್ಯದ ಜೋಸೆಫ್ (43) ಮೃತಪಟ್ಟವರು. ಅಪಘಾತದ ರಭಸಕ್ಕೆ ಸ್ಕೂಟರ್ ಸಂಪೂರ್ಣ ಜಖಂಗೊಂಡಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಜೋಸೆಫ್ ಅವರು ಮುಂಜಾನೆ 5.30ರ ವೇಳೆ ಪೀಣ್ಯದ ಎಫ್ಎಫ್ಐ ಫ್ಯಾಕ್ಟರಿ ಬಳಿ ಸ್ಕೂಟರ್ನಲ್ಲಿ ಹೋಗುತ್ತಿದ್ದರು.
ಈ ವೇಳೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಜೋಸೆಫ್ ಸ್ಥಳದಲ್ಲೇ ಮೃತಪಟ್ಟಿದ್ದು, ಪ್ರಕರಣ ದಾಖಲಿಸಿರುವ ಪೀಣ್ಯ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








