ತುಮಕೂರು
ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುತ್ತಿದ್ದ ಈರ್ವರು ವ್ಯಕ್ತಿಗಳು ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪರಿಣಾಮ, ತಮ್ಮ ತಪ್ಪಿಗಾಗಿ ಸದರಿ ಈರ್ವರೂ ದಂಡ ತೆತ್ತಿರುವ ಪ್ರಸಂಗ ನಡೆದಿದೆ.
ತುಮಕೂರು ನಗರದ 34 ನೇ ವಾರ್ಡ್ ವ್ಯಾಪ್ತಿಯ ಕ್ಯಾತಸಂದ್ರದಲ್ಲಿ ಗುರುವಾರ ಬೆಳಗ್ಗೆ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್, ಪರಿಸರ ಇಂಜಿನಿಯರ್‍ಗಳಾದ ಮೃತ್ಯುಂಜಯ, ಕೃಷ್ಣಮೂರ್ತಿ ಮತ್ತು ನಿಖಿತಾ, ಹೆಲ್ತ್‍ಇನ್ಸ್‍ಪೆಕ್ಟರ್‍ಗಳಾದ ಸಂತೋಷ್, ಸಚಿನ್, ಷಡಕ್ಷರಿ ಮತ್ತು ಸಿಬ್ಬಂದಿ ವರ್ಗದವರು ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಈ ಪ್ರಸಂಗ ಜರುಗಿದೆ.
ಕ್ಯಾತಸಂದ್ರದ ಸಂಜಯ್‍ನಗರದಲ್ಲಿ ಮಹಮದ್ ಎಂಬುವವರಿಗೆ 7,000 ರೂ. ಹಾಗೂ ಕ್ಯಾತಸಂದ್ರದ ಪೇಟೆಬೀದಿಯಲ್ಲಿ ಕಾಂತರಾಜು ಎಂಬುವವರಿಗೆ 2,000 ರೂ. ದಂಡವನ್ನು ವಿಧಿಸಲಾಗಿದೆ.
ಪ್ಲಾಸ್ಟಿಕ್ ಬಳಕೆಗೆ ದಂಡ
ಇದಲ್ಲದೆ ನಗರದ 22 ನೇ ವಾರ್ಡ್ ವ್ಯಾಪ್ತಿಯ ಬಟವಾಡಿಯಲ್ಲಿರುವ ಎ.ಪಿ.ಎಂ.ಸಿ. ಯಾರ್ಡ್‍ಗೂ ಈ ತಂಡ ಭೇಟಿ ನೀಡಿ, ನಿಷೇಧಿತ ಪ್ಲಾಸ್ಟಿಕ್ ಬಳಕೆ ಬಗ್ಗೆ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಗಾಗಿ ಶ್ರೀನಿವಾಸ ಟ್ರೇಡರ್ಸ್‍ಗೆ 5,000 ರೂ., ರಘುನಾಥ್ ಎಂಬುವವರಿಗೆ 500 ರೂ., ನಂದಿನಿ ಟ್ರೇಡರ್ಸ್‍ಗೆ 500 ರೂ., ವಾಯುಪುತ್ರ ಟ್ರೇಡರ್ಸ್‍ಗೆ 500 ರೂ., ಸಿರಿ ಪ್ರಾವಿಷನ್ ಸ್ಟೋರ್ಸ್‍ಗೆ 500 ರೂ., ಡಿಪಿಎಚ್ ಎಂಟರ್‍ಪ್ರೈಸಸ್‍ಗೆ 500 ರೂ. ದಂಡವನ್ನು ಪಾಲಿಕೆ ಅಧಿಕಾರಿಗಳು ವಿಧಿಸಿದ್ದಾರೆ. ಒಟ್ಟಾರೆ ಈ ಎಲ್ಲ ದಂಡದ ಒಟ್ಟು ಮೊತ್ತ 16,500 ರೂ. ಆಗಿದೆ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.