ಬೆಂಗಳೂರು
ಕಬ್ಬಿಣದ ಸರಕನ್ನು ಖರೀದಿಸಿರುವಂತೆ ಸುಳ್ಳು ದಾಖಲಾತಿ ಸೃಷ್ಟಿಸಿ 25 ಲಕ್ಷ ರೂ. ವಾಣಿಜ್ಯ ತೆರಿಗೆ ವಂಚಿಸಿದ್ದ ದಂಪತಿಗೆ ನಗರದ ಒಂದನೇ ಎಸಿಎಂಎಂ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಸುಳ್ಳು ದಾಖಲಾತಿ ಸೃಷ್ಟಿಸಿ 25 ಲಕ್ಷ ರೂ. ವಾಣಿಜ್ಯ ತೆರಿಗೆ ವಂಚಿಸಿದ್ದ ಕೆ.ಜಿಹಳ್ಳಿಯ ವಿನೋಬಾನಗರದ ಬಿಸ್ಮಿಲ್ಲಾ ಅಹಮದ್ ಪಾಷಾ (54) ಹಾಗೂ ಅವರ ಪತ್ನಿ ಅಜ್ಮತ್ (49)ಗೆ ಒಂದನೇ ಎಸಿಎಂಎಂ ನ್ಯಾಯಾಲಯವು 2 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.
ಕೆಲ ವರ್ಷಗಳ ಹಿಂದೆ ಪ್ರಕರಣದ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಅಜ್ಮತ್ ಹಾಗೂ ಬಿಸ್ಮಿಲ್ಲಾ ವಿರುದ್ಧ ಮೊದಲ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಆರೋಪಿಗಳು ವಂಚಿಸಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಇಬ್ಬರಿಗೂ 2 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಪ್ರಕರಣದ ಹಿನ್ನಲೆ
ಅಜ್ಮತ್ ತನ್ನ ಹೆಸರಿನಲ್ಲಿ 2011ರಲ್ಲಿ ಕಲಾಸಿಪಾಳ್ಯದ ಎನ್.ಆರ್ ರಸ್ತೆಯಲ್ಲಿ ವೆರೈಟಿ ಸ್ಟೀಲ್ ಹೆಸರಿನ ಅಂಗಡಿ ತೆರೆಯಲು ವಾಣಿಜ್ಯ ಇಲಾಖೆಗೆ ಅರ್ಜಿ ಸಲ್ಲಿಸಿ, ನೋಂದಾಯಿಸಿಕೊಂಡು ಕಬ್ಬಿಣದ ಸಗಟು ಮಾರಾಟ ವ್ಯಾಪಾರ ಆರಂಭಿಸಿದ್ದಳು. ಪತಿ ಬಿಸ್ಮಿಲ್ಲಾ ವ್ಯವಹಾರ ನೋಡಿಕೊಳ್ಳುತ್ತಿದ್ದು ಇಬ್ಬರೂ ಸೇರಿ ಕೆಲವೊಂದು ಕಬ್ಬಿಣದ ಸರಕನ್ನು ಖರೀದಿಸಿರುವಂತೆ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿದ್ದರು.
ಅದೇ ವರ್ಷದ ಆ.1 ರಿಂದ ಸೆ.30ರವರೆಗೆ 11 ಖರೀದಿದಾರರೊಂದಿಗೆ 5,30,08,730 ರೂ. ಮೌಲ್ಯದ ಕಬ್ಬಿಣದ ಸರಕುಗಳ ವ್ಯಾಪಾರ ನಡೆಸಿದ್ದರು. ಈ ವಹಿವಾಟಿನ ವಾಣಿಜ್ಯ ತೆರಿಗೆ ಇಲಾಖೆಗೆ ಪಾವತಿಸಬೇಕಿದ್ದ 25.24 ಲಕ್ಷ ರೂ. ಮೌಲ್ಯವರ್ಧಿತ ತೆರಿಗೆಯನ್ನು ಸಂದಾಯ ಮಾಡದೆ ವಂಚಿಸಿದ್ದರು.
ಈ ವಿಚಾರ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದು, ಇಲಾಖೆಯ ಸಹಾಯಕ ಆಯುಕ್ತರು 2012ರಲ್ಲಿ ಕಲಾಸಿಪಾಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದ್ದರು. ರಾಜ್ಯ ಸರ್ಕಾರ 2013ರಲ್ಲಿ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವರ್ಗಾವಣೆ ಮಾಡಿತ್ತು. ತೆರಿಗೆ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








